ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಮಾಣ ಇಳಿಕೆ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ
Published 22 ಸೆಪ್ಟೆಂಬರ್ 2023, 5:15 IST
Last Updated 22 ಸೆಪ್ಟೆಂಬರ್ 2023, 5:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಾಲ್ಯ ವಿವಾಹ ತಡೆಗೆ ನಿರಂತರ ಜಾಗೃತಿ ಅಭಿಯಾನ ಕೈಗೊಂಡ ಹಿನ್ನೆಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ  ಬಾಲ್ಯವಿವಾಹಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಮುಖ ಪಾತ್ರ ವಹಿಸಿದೆ.

2019ರಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 21 ಬಾಲ್ಯವಿವಾಹಗಳಾಗಿದ್ದು, 113 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಮತ್ತು 51 ಪ್ರಕರಣಗಳು ದಾಖಲಾಗಿವೆ.

‘ಬಾಲ್ಯವಿವಾಹ ನಡೆಯುತ್ತಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೊಲೀಸರು, ಪಿಡಿಒ, ಸಿಡಿಪಿಒ ಸಿಬ್ಬಂದಿ (ಅಂಗನವಾಡಿ ಮೇಲ್ವಿಚಾರಕಿ) ಸ್ಥಳಕ್ಕೆ ಧಾವಿಸುತ್ತೇವೆ. ಪಾಲಕರಿಗೆ ತಿಳಿ ಹೇಳಿ ಮದುವೆ ನಿಲ್ಲಿಸಿ, ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುತ್ತೇವೆ.  ಒಂದು ವೇಳೆ ಮದುವೆಯಾಗಿದ್ದರೆ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧಿಕಾರಿ ನೀತಾ ವಡ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮದ ಜಾಗೃತಿ ಮೂಡಿಸುತ್ತಿರುವುದರಿಂದ ಬಾಲ್ಯವಿವಾಹ ಪ್ರಕರಣಗಳು ಕಡಿಮೆಯಾಗಿವೆ. ಆರೋಗ್ಯ ಇಲಾಖೆಯವರಿಗೂ ಮಾಹಿತಿ ನೀಡಿದ್ದು 18 ವರ್ಷದೊಳಗಿನ ಹೆಣ್ಣುಮಕ್ಕಳು  ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರೆ, ಅವರನ್ನು ಕಿಮ್ಸ್‌ನಲ್ಲಿ ಸಖಿ ಒನ್‌ ಕೇಂದ್ರದಲ್ಲಿ ಇರಿಸಲಾಗುತ್ತದೆ. ಅವರೊಂದಿಗೆ ಆಪ್ತಸಮಾಲೋಚನೆ ನಡೆಸಲಾಗುತ್ತದೆ. ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

‘ಈವರೆಗೆ ಮಹಿಳೆಯರಿಗೆ ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಶಾಲೆ, ಕಾಲೇಜು, ಹಿಂದುಳಿದ ಕಲ್ಯಾಣ ಇಲಾಖೆ ವಸತಿ ಶಾಲೆ, ಚೆನ್ನಮ್ಮ ವಸತಿ ಶಾಲೆ  ಸೇರಿ ವಿವಿಧ ವಸತಿ ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಸುಳಿವು ಸಿಕ್ಕಲ್ಲಿ ಅಥವಾ ಮಾಹಿತಿ ಪತ್ತೆಯಾದಲ್ಲಿ, ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಮಹಮ್ಮದ್ ಅಲಿ ಕೆ. ತಹಸೀಲ್ದಾರ್‌ ತಿಳಿಸಿದರು.

ಧಾರವಾಡದ  ಯುನಿವರ್ಸಿಟಿ ಪಬ್ಲಿಕ್‌ ಸ್ಕೂಲ್‌ನಲ್ಲಿ  ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯವಿವಾಹ ತಡೆ ಬಗ್ಗೆ ಈಚೆಗೆ ಜಾಗೃತಿ ಮೂಡಿಸಲಾಯಿತು
ಧಾರವಾಡದ  ಯುನಿವರ್ಸಿಟಿ ಪಬ್ಲಿಕ್‌ ಸ್ಕೂಲ್‌ನಲ್ಲಿ  ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯವಿವಾಹ ತಡೆ ಬಗ್ಗೆ ಈಚೆಗೆ ಜಾಗೃತಿ ಮೂಡಿಸಲಾಯಿತು

ಮಕ್ಕಳ ಸಹಾಯವಾಣಿ ನೆರವು

ಬಾಲ್ಯವಿವಾಹ ಅತ್ಯಾಚಾರ ಬಾಲಕಾರ್ಮಿಕರು ಪಾಲಕರು ಬಿಟ್ಟು ಹೋದ ಮಕ್ಕಳು ಏಕಪಾಲಕರು ಹಾಗೂ ಬೇರೆ ರಾಜ್ಯದಿಂದ ಬಂದ ಮಗು ತಪ್ಪಿಸಿಕೊಂಡಲ್ಲಿ ಮಕ್ಕಳ ಭಿಕ್ಷಾಟನೆ ಸೇರಿದಂತೆ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ತಿಳಿಸಿದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅವರನ್ನು ರಕ್ಷಿಸಲಾಗುವುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧಿಕಾರಿ ನೀತಾ ವಡ್ಕರ್‌ ತಿಳಿಸಿದರು.

‘2023ರ ಸೆಪ್ಟೆಂಬರ್‌ 1ರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವೇ ಸಹಾಯವಾಣಿ ನಿರ್ವಹಿಸುತ್ತಿದೆ. ಧಾರವಾಡ ಹಾಗೂ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸಹಾಯವಾಣಿ ಇದ್ದು 24 ಗಂಟೆಯೂ ಸೇವೆ ನೀಡುತ್ತಿದೆ. ಅಗತ್ಯವಿದ್ದಲ್ಲಿ ಬಾಲಮಂದಿರಲ್ಲಿ ಅವರನ್ನು ಇರಿಸಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಸಂಕಷ್ಟದಲ್ಲಿದ್ದರೆ ಈ ಸಂಖ್ಯೆಗೆ ಕರೆ ಮಾಡಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT