ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಯ ರಸದೌತಣ

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಯುಪಿಎಸ್‌ಸಿ ಸಾಧಕ ರಾಹುಲ್ ಸಂಕನೂರ ಮಾತು
Last Updated 2 ಜೂನ್ 2019, 12:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ತನ್ನ ಮನೆ ಬಳಿ ಇದ್ದ ಸನ್ಯಾಸಿ ಬಗ್ಗೆ ಹುಡುನೊಬ್ಬನಿಗೆ ಅನುಮಾನ ಕಾಡುತ್ತಿತ್ತು. ಒಮ್ಮೆ ಅವರನ್ನು ಪರೀಕ್ಷಿಸಲು ನಿರ್ಧರಿಸಿದ ಆತ, ಕೈಯಲ್ಲಿ ಗುಬ್ಬಿ ಮರಿಯನ್ನಿಡಿದುಕೊಂಡು, ‘ಸ್ವಾಮಿಗಳೇ ನನ್ನ ಕೈಯಲ್ಲಿರುವ ಗುಬ್ಬಿ ಬದುಕಿದೆಯೇ ಅಥವಾ ಸತ್ತಿದೆಯೇ ಹೇಳಿ ನೋಡೋಣ?’ ಎಂದು ಪ್ರಶ್ನಿಸಿದ. ಹುಡುಗನ ಮನದಿಂಗಿತ ಅರಿತ ಸನ್ಯಾಸಿ, ‘ಗುಬ್ಬಿಯ ಬದುಕು ಮತ್ತು ಸಾವು ಎರಡೂ ನಿನ್ನ ಕೈಯಲ್ಲಿದೆ’ ಎಂದು ಹುಡುಗನಿಗೆ ಜ್ಞಾನೋದಯವಾಗುವಂತಹ ಜಾಣ್ಮೆಯ ಉತ್ತರ ನೀಡಿದರು.

– ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 17ನೇ ರ‍್ಯಾಂಕ್ ಪಡೆದ ಹುಬ್ಬಳ್ಳಿಯ ರಾಹುಲ್ ಸಂಕನೂರ,ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲೇ ಇರುತ್ತದೆ ಎಂಬುದನ್ನು ಮೇಲಿನ ನಿದರ್ಶನದ ಮೂಲಕ ಅರ್ಥ ಮಾಡಿಸಿದರು.

‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಸಹಯೋಗದಲ್ಲಿ ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ನಡೆದ ‘ಎಡ್ಯುವರ್ಸ್‌: ಜ್ಞಾನ ದೇಗುಲ’ದ 11ನೇ ಆವೃತ್ತಿಯ ಶೈಕ್ಷಣಿಕ ಮಾರ್ಗದರ್ಶಿ ಮೇಳದ ಎರಡನೇ ದಿನವಾದ ಭಾನುವಾರ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ರಾಹುಲ್ ತಮ್ಮ ಅನುಭವದ ಬುತ್ತಿಯೊಂದಿಗೆ ಮಾರ್ಗದರ್ಶನ ನೀಡಿದರು.

‘ಪಿಯುಸಿ ನಂತರದ ಹಂತ ಬದುಕಿನಲ್ಲಿ ಅತ್ಯಂತ ಮಹತ್ವದ್ದು. ನಮ್ಮ ಭವಿಷ್ಯ ಹೇಗಿರಬೇಕೆಂದು ನಿರ್ಧರಿಸಿಕೊಳ್ಳುವ ಈ ಹಂತದಲ್ಲಿ ಮೊದಲಿಗೆ ನಮ್ಮ ಮನದ ಮಾತು ಆಲಿಸಬೇಕು. ನಾವೇನಾಗಬೇಕೆಂದು ನಿರ್ಧರಿಸಬೇಕು. ಬಳಿಕ, ತಂದೆ–ತಾಯಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಿದರೆ ಯಶಸ್ಸು ಖಂಡಿತಾ ಹಿಂಬಾಲಿಸುತ್ತದೆ’ ಎಂದು ಸಲಹೆ ನೀಡಿದರು.

‘ಕಾಯಕವೇ ಕೈಲಾಸ ಎಂದು ಭಾವಿಸುವ ಸಂಸ್ಕೃತಿ ನಮ್ಮದು. ಯಾವುದೇ ಪಯಣದಲ್ಲಿ ಆರಂಭ ಮಹತ್ವದ ಘಟ್ಟ. ಆರಂಭ ಉತ್ತಮವಾಗಿದ್ದರೆ ಅರ್ಧದಷ್ಟು ದಾರಿ ಕ್ರಮಿಸಿದಂತೆ. ಹಾಗಾಗಿ, ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಅಥವಾ ಪರೀಕ್ಷೆಯ ಬಗ್ಗೆ ಪ್ರೀತಿ–ವಿಶ್ವಾಸದೊಂದಿಗೆ ಮುಂದಕ್ಕೆ ಸಾಗಿ’ ಎಂದು ಕರೆ ನೀಡಿದರು.

ರಾಹುಲ್ ಅವರ ತಂದೆ ಶರಣಪ್ಪ ವೀರಪ್ಪ ಸಂಕನೂರ ಮಾತನಾಡಿ, ‘ಕೀಳರಿಮೆ ಬಿಟ್ಟ ಸಾಧಿಸುವ ಛಲ ಬೆಳೆಸಿಕೊಳ್ಳಿ. ಸರ್ಕಾರದ ಜತೆಗೆ, ಸಮುದಾಯಗಳು ನೀಡುವ ನೆರವಿನ ಪ್ರಯೋಜನ ಪಡೆದು ಗುರಿ ತಲುಪಿ’ ಎಂದರು.

ಪದವಿ ಹಂತದಲ್ಲೇ ಯುಪಿಎಸ್‌ಸಿ ಪರೀಕ್ಷೆ ತಯಾರಿ ಹೀಗಿರಲಿ...

ಪದವಿ ಓದುವಾಗಲೇ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕೆಂದು ರಾಹುಲ್ ಸಂಕನೂರ ನೀಡಿದ ಟಿಪ್ಸ್ ಇಲ್ಲಿದೆ.

* ಮೊದಲ ವರ್ಷ ಪ್ರಚಲಿತ ವಿದ್ಯಮಾನಗಳಿಗಾಗಿ ‘ಡೆಕ್ಕನ್ ಹೆರಾಲ್ಡ್‌’, ‘ಪ್ರಜಾವಾಣಿ’ ಸೇರಿದಂತೆ ಪ್ರಮುಖ ದಿನಪತ್ರಿಕೆಗಳ ಮೇಲೆ ನಿತ್ಯ ಕಣ್ಣಾಡಿಸಬೇಕು.

* ಎರಡನೇ ವರ್ಷ ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಪುಸ್ತಕಗಳನ್ನು ಓದಬೇಕು. ಜತೆಗೆ, ಯೂಟ್ಯೂಬ್‌ನಲ್ಲಿ ಉಚಿತವಾಗಿ ಸಿಗುವ ವಿಡಿಯೊಗಳನ್ನು ವೀಕ್ಷಿಸಿ.

* ಮೂರನೇ ವರ್ಷಕ್ಕೆ ನಿಮ್ಮ ಗುರಿ ಹಾದಿಯ ಬಗ್ಗೆ ಒಂದಿಷ್ಟು ಸ್ಪಷ್ಟತೆ ಬಂದಿರುತ್ತದೆ. ಆಗ ಐಚ್ಛಿಕ ವಿಷಯದ ಆಯ್ಕೆ ಬಗ್ಗೆ ಚಿಂತಿಸಿ.

* ನಾಲ್ಕನೇ ವರ್ಷದ ಹೊತ್ತಿಗೆ ಯುಪಿಎಸ್‌ಸಿ ಪರೀಕ್ಷೆಗೆ ಎದುರಿಸಲು ಒಂದು ಮಟ್ಟಿಗೆ ಅಣಿಯಾಗಿರುತ್ತಿರಿ. ಇದೇ ವೇಳೆಗೆ ಪದವಿ ಮುಗಿಯುತ್ತಿದ್ದಂತೆ ಯುಪಿಎಸ್‌ಸಿ ಪಠ್ಯಕ್ರಮ ಆಧರಿಸಿ ನಿತ್ಯ ಯಾವ ವಿಷಯಗಳನ್ನು ಓದಬೇಕೆಂದು ಪ್ಲಾನ್ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿತ್ಯ ಓದಿನ ಕ್ರಮವನ್ನು ನಿಲ್ಲಿಸದಿರಿ.

* ಬಿಡುವಿಲ್ಲದ ಓದುವ ಬದಲು 2 ತಾಸಿಗೊಮ್ಮೆ ರಿಲ್ಯಾಕ್ಸ್ ಆಗಿ. ನಿಮ್ಮ ಆಲೋಚನೆ ಮತ್ತು ಜ್ಞಾನದ ಬಗ್ಗೆ ಸ್ಪಷ್ಟತೆ ಇರಲಿ.

ಕುತೂಹಲ ತಣಿಸಿದ ‘ಎಡ್ಯುವರ್ಸ್‌’
ಪಿಯುಸಿ ಮತ್ತು ಪದವಿ ನಂತರ ಮುಂದೇನು? ಎಂಬ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಹಾಗೂ ಕುತೂಹಲವನ್ನು ಭಾನುವಾರ ನಡೆದ ‘ಎಡ್ಯುವರ್ಸ್‌: ಜ್ಞಾನ ದೇಗುಲ’ದ ಶೈಕ್ಷಣಿಕ ಮಾರ್ಗದರ್ಶಿ ಮೇಳದ ಎರಡನೇ ದಿನ ತಣಿಸಿತು. ವಿದ್ಯಾರ್ಥಿಗಳು ಮತ್ತು ಅವರೊಂದಿಗೆ ಬಂದಿದ್ದ ಪಾಲಕರಿಗೆ ಭವಿಷ್ಯದ ಬಗ್ಗೆ ಸ್ಪಷ್ಟನೆ ಕಲ್ಪನೆಯನ್ನು ಕಟ್ಟಿಕೊಟ್ಟಿತು.

ಮೇಳ ಆರಂಭವಾದಾಗಿನಿಂದ ಮಧ್ಯಾಹ್ನದ ಹೊತ್ತಿಗೆ ಮುಗಿಯುವವರೆಗೂ ವಿದ್ಯಾರ್ಥಿ ಮತ್ತು ಪೋಷಕರ ಹರಿವು ಹೆಚ್ಚಾಗಿತ್ತು. ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಮಳಿಗೆಗಳಿಗೆ ಮುಗಿಬಿದ್ದು ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಯುಪಿಎಸ್‌ಸಿ ಸಾಧಕ ರಾಹುಲ್ ಸಂಕನೂರ ಅವರ ಸ್ಫೂರ್ತಿಯ ಮಾತುಗಳು ವಿದ್ಯಾರ್ಥಿಗಳನ್ನು ಮಂತ್ರಮುಗ್ಧಗೊಳಿಸಿತು. ಕಾಮೆಡ್‌–ಕೆ ಕುರಿತು ವಿಶೇಷಾಧಿಕಾರಿ ಡಾ. ಶಾಂತರಾಮ್ ನಾಯಕ್ ಮತ್ತು ಸಿಇಟಿ ಕೌನ್ಸೆಲಿಂಗ್–ನೀಟ್ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್. ರವಿ ಅವರು ನೀಡಿದ ಮಾರ್ಗದರ್ಶನ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿದ್ದ ಗೊಂದಲ ನಿವಾರಿಸಿ ನಿರಾಳಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT