ಭಾನುವಾರ, ಜನವರಿ 23, 2022
27 °C
ಪ್ರಾಂತ ರೈತ ಸಮ್ಮೇಳನ:‌ ಗದುಗಿನ ಸದಾಶಿವಾನಂದ ಸ್ವಾಮೀಜಿ ಅಭಿಪ್ರಾಯ

ಕೃಷಿಯ ಮೌಲ್ಯವರ್ಧನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೃಷಿ ಸಂಸ್ಕೃತಿಯ ಕುರಿತು ರೈತರು ತಮ್ಮ ಮಕ್ಕಳಿಗೆ ತಿಳಿವಳಿಕೆ ಜೊತೆಗೆ ಅಭಿಮಾನ ಮೂಡಿಸಬೇಕು. ಕೃಷಿಯ ಮೌಲ್ಯವರ್ಧನೆಯ ಜೊತೆಗೆ ತಲೆಮಾರಿನಿಂದ ತಲೆಮಾರಿಗೆ ಜವಾಬ್ದಾರಿಯ ಹಸ್ತಾಂತರವಾಗಬೇಕು’ ಎಂದು ಗದುಗಿನ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಾರತೀಯ ಕಿಸಾನ್ ಸಂಘದ ಕರ್ನಾಟಕ‌ ಪ್ರದೇಶ ಘಟಕದ ಉತ್ತರ ಕರ್ನಾಟಕ ಪ್ರಾಂತದಿಂದ ಹೆಬಸೂರ ಭವನದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ‘ಪ್ರಾಂತ ರೈತ ಸಮ್ಮೇಳನ-2022’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 

‘ಕೃಷಿಕರ ಸಮಸ್ಯೆಗಳಿಗೆ ಅವರ ಸ್ವಭಾವವೇ ಕಾರಣ‌. ತಾವು ಮಾಡಿಕೊಂಡು ಬಂದ‌‌‌ ಕೆಲಸವನ್ನು ಮಕ್ಕಳು ಮಾಡಬಾರದು ಎಂಬ ಮನೋಭಾವ ಬಿಡಬೇಕು. ನಮ್ಮತನವನ್ನು ಎಲ್ಲಿ ಕಳೆದುಕೊಂಡಿದ್ದೇವೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕು. ಹಿಂದೆ ಪ್ರತಿ ಬೆಳೆ ಕೊಯ್ಲಿಗೆ ಬಂದಾಗ, ಅದರಲ್ಲೇ ಮುಂದಿನ ಬಿತ್ತನೆಗೆ ಬೀಜ ಹೊಂದಿಸಿ ಇಡಲಾಗುತ್ತಿತ್ತು. ಗೊಬ್ಬರವೂ ರೈತರ ಮನೆಯಲ್ಲೇ ಸಿದ್ಧಗೊಳ್ಳುತ್ತಿತ್ತು’ ಎಂದು ಹೇಳಿದರು.

‘ಈಗ ಎಲ್ಲವನ್ನೂ ಬಹುರಾಷ್ಟ್ರೀಯ ಕಂಪನಿಗಳ ಕೈಗೆ ಕೊಟ್ಟಿದ್ದೇವೆ. ಯಾವ ಬೀಜ ಬಿತ್ತಬೇಕು, ಯಾವ ಗೊಬ್ಬರ ಹಾಕಬೇಕು ಎಂಬುದನ್ನು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತವರು ನಿರ್ಧರಿಸುತ್ತಿದ್ದಾರೆ. ಈ ಸ್ಥಿತಿ ಬದಲಾಗಬೇಕಿದೆ. ಇತ್ತೀಚೆಗೆ ಸಾವಯವ ಕೃಷಿಯತ್ತ ರೈತರ ಒಲವು ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆ’ ಎಂದರು.

ಗೋಸಂರಕ್ಷಕ ಭರಮಣ್ಣ ಗುರಿಕಾರ ಮಾತನಾಡಿ, ‘ನಮ್ಮ ಕುಟುಂಬವು 1,500ಕ್ಕೂ ಹೆಚ್ಚು ಜವಾರಿ ದೇಸಿ ತಳಿಯ ಗೋವುಗಳನ್ನು ಸಲಹುತ್ತಿದೆ. ಪ್ರತಿ ರೈತರು ಗೋವು ಸಾಕಿದಾಗ ಮಾತ್ರ ಅವುಗಳ ಸಂರಕ್ಷಣೆ ಸಾಧ್ಯ’ ಎಂದರು.

ಸಂಘದ ಅಖಿಲ ಭಾರತ ಘಟಕದ ಅಧ್ಯಕ್ಷ ಐ.ಎನ್‌. ಬಸವೇಗೌಡ ಮಾತನಾಡಿ, ‘ರೈತರು ಒಂದೇ ಬೆಳೆ ಬೆಳೆಯುವ ಬದಲು, ವೈವಿಧ್ಯತೆ ಅನುಸರಿಸಬೇಕು. ಆಗ ನಷ್ಟದಿಂದ ಪಾರಾಗಬಹುದು’ ಎಂದು ತಿಳಿಸಿದರು.

‘ಎಲ್ಲಾ ಸಂಸ್ಕೃತಿಗಳ ತಾಯಿ ಕೃಷಿ’

‘ಎಲ್ಲಾ ಸಂಸ್ಕೃತಿಗಳ ತಾಯಿಯಾದ ಕೃಷಿಯ ಮಹತ್ವವನ್ನು ಸಾರಬೇಕಿದೆ. ಬೇಸಾಯವನ್ನು ನಿಕೃಷ್ಟವಾಗಿ ಕಾಣುವ ಬದಲು, ಅದನ್ನು ಲಾಭದಾಯಕ ಉದ್ಯೋಗವಾಗಿಸುವತ್ತ ಎಲ್ಲರೂ ದೃಷ್ಟಿ ಹರಿಸಬೇಕು’ ಎಂದು ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.

‘ಮಣ್ಣಿನ ಗುಣ ಮತ್ತು ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕಿದೆ’ ಎಂದರು.

ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವೀರಣ್ಣ ಮಜ್ಜಗಿ ಪ್ರಾಸ್ತಾವಿಕ ಮಾತನಾಡಿದರು. ಉತ್ತರ ಪ್ರಾಂತದ ಅಧ್ಯಕ್ಷ ಗುರುನಾಥ ಬಗಲಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ವಿವೇಕ ಮೋರೆ, ಸಂಘದ ರಮೇಶ ಕೊರವಿ, ನಾರಾಯಣಸ್ವಾಮಿ, ರಾಜೇಂದ್ರ ರಾಮಾಪುರ, ರಾಘವೇಂದ್ರ ಜಾಗೀರದಾರ, ಗಂಗಾಧರ ಕಾಸರಘಟ್ಟ, ರಾಘವೇಂದ್ರ ಕಾಮನಗಟ್ಟಿ, ಬಸವರಾಜ ನಾವಲಗಿ ಹಾಗೂ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.