ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ

ಸುವರ್ಣ ಕರ್ನಾಟಕ ಕಾರಿಡಾರ್‌ಗೆ ಧಾರವಾಡ ತಾಲ್ಲೂಕಿನ 14 ಹಳ್ಳಿಗಳ ಜಾಗ ಆಯ್ಕೆ
Last Updated 7 ಫೆಬ್ರುವರಿ 2023, 5:21 IST
ಅಕ್ಷರ ಗಾತ್ರ

ಧಾರವಾಡ: ‘ಸುವರ್ಣ ಕರ್ನಾಟಕ ಕಾರಿಡಾರ್ (ಬಿಎಂಐಸಿ) ಹೆಸರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಪ್ರಾರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿ ಭೂಮಿ ಉಳಿಸಿ ಹೋರಾಟ ಸಮಿತಿ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಆಶ್ರಯದಲ್ಲಿ ರೈತರು ಸೋಮವಾರ ಧರಣಿ ನಡೆಸಿದರು.

ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ತಾಲ್ಲೂಕಿನ 14 ಹಳ್ಳಿಗಳಲ್ಲಿ ನಡೆಸಲು ಉದ್ದೇಶಿಸಿರುವ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ದೀಪಾ ಧಾರವಾಡ ಮಾತನಾಡಿ, ‘ಸುವರ್ಣ ಕರ್ನಾಟಕ ಕಾರಿಡಾರ್ ಅಡಿಯಲ್ಲಿ ಉದ್ದೇಶಿತ 14 ಗ್ರಾಮಗಳ ರೈತರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಜತೆಗೆ ಜಿಪಿಎಸ್‌ ಅನ್ನೂ ಮಾಡಿ ಜಾಗ ಗುರುತಿಸಲಾಗಿದೆ. ಇದು ರೈತರಲ್ಲಿ ಆತಂಕ ಉಂಟು ಮಾಡಿದೆ’ ಎಂದರು.

‘ಗುರುತಿಸಿರುವ ಜಮೀನುಗಳಲ್ಲಿ ರೈತರ ನೀರಾವರಿ ಮೂಲಗಳಾದ ಕೊಳವೆಬಾವಿ, ಹಳ್ಳ ಮತ್ತು ಕೆರೆ ನೀರಿನ ಮೂಲಕ ವರ್ಷದ ಪೂರ್ಣಾವಧಿಗೆ ಕಬ್ಬು, ಭತ್ತ, ಗೋವಿನಜೋಳ, ತರಕಾರಿ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿ ತೋಟಗಾರಿಕಾ ಗಿಡಮರಗಳು ಹಾಗೂ ಇತರ ವಾಣಿಜ್ಯ ಬೆಳೆಗಳೂ ಇವೆ. ಇದರೊಂದಿಗೆ ದನಕರುಗಳು, ಕೊಟ್ಟಿಗೆ ಹಾಗೂ ಮನೆಗಳೂ ಸೇರಿದಂತೆ ತಮ್ಮ ಜೀವನಕ್ಕೆ ಅಗತ್ಯವಿರುವ ಅನುಕೂಲಗಳನ್ನು ಮಾಡಿಕೊಂಡಿದ್ದಾರೆ. ಈ ಜಮೀನುಗಳೇ ಅವರ ಕುಟುಂಬ ನಿರ್ವಹಣೆಯ ಆದಾಯ ಮೂಲಗಳಾಗಿವೆ. ಆದರೆ ಈಗ ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದರಿಂದ ಈ ರೈತ ಕುಟುಂಬಗಳ ದುಡಿಮೆಯಿಂದಲೇ ವಂಚಿತರಾಗಿ, ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ’ ಎಂದರು.

ಗುಳೇದಕೊಪ್ಪದ ಹಿರಿಯ ಬಸವರಾಜ ಬೋಸ್ಲೆ, ‘ರೈತರ ಜಮೀನು ಕಸಿದುಕೊಳ್ಳುವುದು ಸರಿಯಲ್ಲ. ಕಾರ್ಖಾನೆಗಳು ಬೇಕು, ಆದರೆ ಕೃಷಿ ಭೂಮಿಯನ್ನು ನಾಶ ಮಾಡಬಾರದು. ಭೂಸ್ವಾಧೀನ ಪ್ರಕ್ರಿಯೆ ನಿಲ್ಲುವವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದರು.

ಶರಣು ಗೋನವಾರ, ‘ಭೂಸ್ವಾಧೀನ ಪ್ರಕ್ರಿಯೆಯು ಅತ್ಯಂತ ಅವೈಜ್ಞಾನಿಕವಾಗಿದೆ. ಒಂದು ವೇಳೆ ಈ ಯೋಜನೆಯನ್ನು ಮುಂದುವರೆಸಲು ಪ್ರಕ್ರಿಯೆ ಮುಂದುವರೆಸಿದ್ದಲ್ಲಿ ಹೋರಾಟದ ಹಾದಿಯನ್ನು ಗಟ್ಟಿಮಾಡಿಕೂಂಡು ಪ್ರಬಲಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಗುಳೇದಕೂಪ್ಪ, ಕಲ್ಲಾಪೂರ, ಮದಿಕೂಪ್ಪ, ಶೀಗ್ಗನಹಳ್ಳಿ, ವೆಂಕಟಪೂರ, ಕುಮ್ಮನಾಯಕನಕೋಪ್ಪ, ಹಳೇತೇಗೂರ,ವೀರಾಪೂರ, ರಾಮಾಪೂರ, ವರಹನಾಗಲಾವಿ ಗ್ರಾಮಗಳ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT