ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲೆ:1.43 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ

ಭಾರೀ ಮಳೆ, ಪ್ರವಾಹದಿಂದ ಅಂದಾಜು ₹98 ಕೋಟಿ ನಷ್ಟ
Last Updated 19 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರಾಕಾರ ಮಳೆ ಹಾಗೂ ವಿವಿಧೆಡೆ ಸಂಭವಿಸಿದ ಪ್ರವಾಹದಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಅಂದಾಜು 1.43 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದ್ದು, ಇದರಿಂದ ₹98 ಕೋಟಿ ನಷ್ಟವಾಗಿದೆ.

ಮಳೆ ಅಬ್ಬರಕ್ಕೆ ಕೆಲವೆಡೆ ಕೃಷಿ ಭೂಮಿ ಹಾನಿಗೊಂಡಿದ್ದರೆ, ಉಳಿದೆಡೆ ಹಳ್ಳಗಳ ಪ್ರವಾಹ ಹಾಗೂ ತುಂಬಿ ಹರಿದ ಕೆರೆಗಳ ನೀರು ದಿನಗಟ್ಟಲೆ ಜಮೀನುಗಳಲ್ಲಿ ನಿಂತು ಬೆಳೆ ಜತೆಗೆ, ಜಮೀನನ್ನು ಅಪೋಶನ ತೆಗೆದುಕೊಂಡಿದೆ. ಇದರಿಂದಾಗಿ, ಮುಂಗಾರು ಬೆಳೆಯ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಕ್ಕಾಲು ಭಾಗ ಹಾನಿ

‘ಜಿಲ್ಲೆಯಲ್ಲಿ ಬಿತ್ತನೆಯಾಗಿದ್ದ 2.29 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪೈಕಿ, 1.43 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಅಂದರೆ, ಮುಕ್ಕಾಲು ಪಾಲು ಕೃಷಿ ಭೂಮಿ ಹಾನಿಗೊಂಡಿದೆ. ಜಲಾವೃತಗೊಂಡಿದ್ದ ಭೂಮಿಯಲ್ಲಿದ್ದ ಯಾವ ಬೆಳೆಯೂ ರೈತರ ಕೈ ಸೇರುವ ಸ್ಥಿತಿಯಲ್ಲಿಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಸ್‌.ಎಸ್. ಅಬೀದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಗೋವಿನ ಜೋಳ, 28 ಸಾವಿರ ಹೆಕ್ಟೇರ್‌ನಲ್ಲಿದ್ದ ಸೋಯಾಬಿನ್, ಹೆಸರು ಹಾಗೂ ಹತ್ತಿ, 11 ಸಾವಿರ ಹೆಕ್ಟೇರ್‌ನ ಶೇಂಗಾ ಹಾಗೂ 4 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದ ಉದ್ದು ಸಂಪೂರ್ಣವಾಗಿ ನೆಲ ಕಚ್ಚಿದೆ’ ಎಂದು ಹೇಳಿದರು.

ಪರಿಹಾರ

‘ಮಳೆಗೆ ಹಾನಿಗೊಂಡಿರುವ ಪ್ರತಿ ಹೆಕ್ಟೇರ್ ಒಣ ಬೇಸಾಯ ಭೂಮಿಗೆ ₹6,800 ಹಾಗೂ ನೀರಾವರಿ ಭೂಮಿಗೆ ₹13,500 ಪರಿಹಾರ ನೀಡಲಾಗುತ್ತದೆ. ಒಬ್ಬ ರೈತ ಗರಿಷ್ಠ 2 ಹೆಕ್ಟೇರ್ ಭೂಮಿಗೆಅಂದರೆ ಐದು ಎಕರೆಗೆ (2.5 ಎಕರೆಗೆ ಒಂದು ಹೆಕ್ಟೇರ್‌) ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ. ಅದಕ್ಕಾಗಿ, ಸ್ಥಳೀಯ ಕೃಷಿ ಕೇಂದ್ರಗಳಲ್ಲಿ ಜಮೀನಿನ ದಾಖಲೆ ಸಲ್ಲಿಸಬೇಕು’ ಎಂದು ಅಬೀದ್ ತಿಳಿಸಿದರು.

ಭಾರೀ ಮಳೆಯಿಂದ ಸಂಭವಿಸಿದ ಪ್ರವಾಹದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರ ಹೊಲಗಳಲ್ಲಿ ಹೂಳು, ಕಸ ತುಂಬಿದ್ದರೆ ಹಾಗೂ ಮಣ್ಣು ಕೊಚ್ಚಿ ಹೋಗಿ ಕೊರಕಲು ಬಿದ್ದಿದ್ದರೆ ಅಂತಹ ಜಮೀನಿನ ದುರಸ್ತಿಗೆ ಪ್ರತಿ ಹೆಕ್ಟೇರ್‌ಗೆ ₹36 ಸಾವಿರ ಪರಿಹಾರ ಸಿಗಲಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈ ಪರಿಹಾರ ನೀಡಲಾಗುತ್ತದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ, ನೆರವು ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT