ಭಾನುವಾರ, ಆಗಸ್ಟ್ 25, 2019
21 °C

ಪ್ರವಾಹ ಸ್ಥಿತಿಗೆ ಸಮರ್ಥ ಸ್ಪಂದನೆ: ಶೆಟ್ಟರ್‌

Published:
Updated:

ಹುಬ್ಬಳ್ಳಿ: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ದೇವಿ ನಗರ, ಬನಶಂಕರಿ ಬಡಾವಣೆ, ತಾಲ್ಲೂಕು ಕೋರ್ಟ್‌, ತೋಳನಕೆರೆಗೆ ಅವರು ಗುರುವಾರ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.

ದೇವಿನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ರಾಜ್ಯದಲ್ಲಿ ಪ್ರವಾಹವಿದೆ. ಇದನ್ನು ಸಮರ್ಥವಾಗಿ ಎದುರಿಸಲು ಸಚಿವರೇ ಇಲ್ಲ ಎಂದು ಅನೇಕರು ಟೀಕಿಸುತ್ತಿದ್ದಾರೆ. ಮಂತ್ರಿಮಂಡಲ ಇಲ್ಲದಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿ ವರ್ಗವಿದೆ. ನಾನೇ ಉತ್ತರ ಕನ್ನಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಖುದ್ದು ಮುಖ್ಯಮಂತ್ರಿಯವರೇ ಪ್ರವಾಹ ಪರಿಶೀಲನೆ ಮಾಡುತ್ತಿದ್ದಾರೆ’ ಎಂದರು.

‘ಬಹಳಷ್ಟು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗುತ್ತಿದೆ. 15–20 ವರ್ಷಗಳ ಹಿಂದೆ ಈ ರೀತಿಯ ಮಳೆ ಆಗಿದ್ದಾಗ ಸಾವು, ನೋವು ಸಂಭವಿಸಿದ್ದವು. ಈಗ ಅಭಿವೃದ್ಧಿ ಕಾರ್ಯ ಕೈಗೊಂಡ ಪರಿಣಾಮ ಯಾವುದೇ ಸಾವು ಸಂಭವಿಸಿಲ್ಲ. ಆಸ್ತಿಗೆ ಹಾನಿಯಾಗಿದ್ದರೆ ಸರ್ಕಾರದಿಂದ ಎಲ್ಲ ರೀತಿಯ ನೆರವು ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ನಗರದ ಅನೇಕ ಕಡೆ ಒತ್ತುವರಿ ಮಾಡಿ ನಾಲಾಗಳ ಮೇಲೆ ಮನೆ ಕಟ್ಟಲಾಗಿದೆ. ಈ ಬಗ್ಗೆ ಜನರಿಗೂ ಜಾಗೃತಿ ಅಗತ್ಯ’ ಎಂದರು.

Post Comments (+)