ಶುಕ್ರವಾರ, ಮಾರ್ಚ್ 5, 2021
24 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ದುಡಿದು ತಿನ್ನುವುದೇ ಗಾಂಧಿ ತತ್ವ...

ಚನ್ನಬಸಪ್ಪ ರೊಟ್ಟಿ Updated:

ಅಕ್ಷರ ಗಾತ್ರ : | |

Prajavani

‘ನನ್ನ ಪ್ರಕಾರ ಸ್ವಾಭಿಮಾನ, ಸ್ವಾವಲಂಬನಾ ಅನ್ನೂದನ ನಿಜವಾದ ‘ಗಾಂಧಿ ವಾದ’. ಇದರ ಸಲವಾಗಿ ನಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಬ್ಯಾಡಾ ಅಂತ ನಿರಾಕರಣೆ ಮಾಡೇನಿ. ನಾ ಹೋರಾಟ ಮಾಡೇನಿ ಅಂತ ಹೇಳಿ ಪಗಾರ ತಗೊಂಡ್ರ, ಹೋರಾಟ ಮಾಡಿದ್ದಕ್ಕ ಕಿಮ್ಮತ್ತ ಉಳ್ಯುದುಲ್ಲ. ನಂದೇನಿದ್ರೂ ದುಡದ ತಿನ್ನೂ ತತ್ವ, ಅದ ಗಾಂಧಿ ತತ್ವ...’

ಹೀಗೆಂದವರು, ತಮ್ಮ ಬಾಲ್ಯಾವಸ್ಥೆಯಿಂದ ಗಾಂಧೀಜಿ ಅವರಿಂದ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಿರಿಯ ಜೀವ ಧಾರವಾಡ ತಾಲ್ಲೂಕಿನ ಕೊಟಬಾಗಿ ಗ್ರಾಮದ ಹಿರಿಯ ಗಾಂಧಿವಾದಿ, ಶತಾಯುಷಿ ಕಾಳಪ್ಪ ನಂದೆಪ್ಪನವರ ಅವರು.

ಗಾಂಧಿವಾದ, ಸ್ವಾತಂತ್ರ್ಯ ಹೋರಾಟ, ಅಂದಿನ ರಾಜಕಾರಣ–ಇಂದಿನ ರಾಜಕಾರಣ... ಈ ಕುರಿತು ಅವರನ್ನು ಮಾತಿಗೆಳೆದಾಗ ಅವರು ಹೇಳಿದ ಮೌಲ್ಯಯುತ ಮಾತುಗಳು, ಅನುಭವದ ಕಥನ, ವ್ಯಕ್ತಪಡಿಸಿದ ಆಕ್ರೋಶ, ತತ್ವ–ಸಿದ್ಧಾಂತಗಳು ಅವರ ಮಾತಿನಲ್ಲಿ ಹೀಗಿವೆ...

‘ನೋಡ್ರಿ ನಾ ಹೇಳುದು ಒಂದ ಮಾತ... ಆಗಿಂದಕ ಈಗಿಂದಕ ಪರಿಸ್ಥಿತಿ ಭಾಳ ಫರಕ ಐತಿ. ಈವತ್ತ ಎಲ್ಲಾ ಸವಲತ್ತ ಸಿಕ್ಕಾವ. ಆದ್ರ ಮಂದಿ ಛಲೋ ಇಲ್ಲ. ನಾವು ಒಬ್ಬರ ಮತ್ತೊಬ್ಬರಿಗಿ ಅಂತ ಹೇಳಿ ಬದಕಿದಾವ್ರು. ಈಗಿನ ಮಂದಿ ಒಬ್ಬರನ ತುಳದ ಮತ್ತೊಬ್ಬರ ಬದಕತಾರು. ಮುತ್ಸದ್ದಿತನದಾಗ ಗಾಂಧೀಜಿ ಅವರಿಗಿ ಹೋಲಿಸಿದ್ರ... ಈವತ್ತಿನ ರಾಜಕಾರಣಿಗಳು ಅವರ ಉಗುರಿಗೂ ಸಮಾ ಆಗೂದುಲ್ಲ. ಈಗಿನಾವ್ರು ಒಬ್ಬರೊಬ್ಬರಿಗೆ ಗುಂಡ ಹಾಕೋ ರಾಜಕಾರಣಿಗಳು...’

‘ಮೊದಲ ಗಾಂಧಿ ಟೋಪಿಗೆ ಭಾಳ ಮರ್ಯಾದೆ ಇತ್ತ... ಈಗಿನ ಭಾಳ ಮಂದಿಗಿ ಗಾಂಧಿ ಟೋಪಿಗಿ ಅಂದ್ರ ಏನಂತ ಗೊತ್ತಿಲ್ಲ. ಗಾಂಧಿ ಟೊಪಿಗಿ ಹಾಕೊಂಡ ಕೆಲ ಮಂದಿ ಬ್ಯಾರೇ ಮಂದಿಗಿ ಮಕ್ಮಲ್ ಟೋಪಿ ಹಾಕೂ ವ್ಯವಸ್ಥಾ ಮಾಡಕೊಂಡಿರತಾರ...!’

‘ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೇಳಬೇಕಂದ್ರ... ಏಳನತ್ತೆ ಪಾಸಾಗುದರಾಗ ನಮ್ಮ ಸಾಲಿ ಹೆಡ್‌ಮಾಸ್ತರ್ ಪ್ರಭಾವಕ್ಕ ಒಳಗಾಗಿ ಸ್ವಾತಂತ್ರ್ಯ ಹೋರಾಟದಾಗ ಆಸಕ್ತಿ ಬೆಳೀತು. ಇನ್ನೂ ಮಾರಿ ಮ್ಯಾಲ ಮೀಸಿ ಬಂದಿರಲಿಲ್ಲ. ಕಲ್ಲೂರು, ಲೋಕೂರ, ಬೆಟಗೇರಿ ಭಾಗದಾಗ ಸ್ವಾತಂತ್ರ್ಯ ಹೋರಾಟ ಮಾಡು ಮಂದಿಗಿ ಟಪಾಲ ತಲಪಸೂದು, ರೊಟ್ಟಿಬುತ್ತಿ ಕೊಟ್ಟ ಬರೂದು, ಮತ್ತೇನರ ಪೇಗಂ (ಮಾಹಿತಿ) ಇದ್ರ ತಲಪಸೂದು ಮಾಡತಿದ್ದಿನಿ. ಈ ವ್ಯಾಳೇದಾಗ ಬ್ರಿಟಿಷರು ರಾಜದ್ರೋಹದ ಆರೋಪದ ಮ್ಯಾಲ ನಮ್ಮ ಹೆಡ್‌ಮಾಸ್ತರನ ಬೆಳಗಾಂವ ಹಿಂಡಲಗಾ ಜೇಲಕ ಹಾಕಿದ್ರು. ಆಗ ಬ್ರಿಟಿಷರ ವಿರುದ್ಧ ನಮ್ಮ ಹೋರಾಟ ಮತ್ತಷ್ಟ ಜೋರಾತು. ಗಾಂಧೀಜಿ ಹೇಳಿದಾಂಗ ‘ಚಲೇಜಾವ್’ ಚಳವಳ್ಯಾಗ ನಾನೂ ಭಾಗಿಯಾದೆ. ಹತ್ತಾರು ಮಂದಿ ಸೇರಿ ಬೆಟಗೇರಿ, ಕಲ್ಲೂರು, ಲೋಕೂರ ಚಾವಡಿ ಮುಂದ ಸತ್ಯಾಗ್ರಹ ಮಾಡಿದ್ವಿ. ಮೈಲಾರ ಮಾದೇವಪ್ಪ ಸತ್ತಾಗ ಶೋಭಾಯಾತ್ರೆ ಮಾಡಿದ್ವಿ. ಆಗ ಬ್ರಿಟಿಷರಿಂದ ಆರೆಸ್ಟ್‌ ವಾರೆಂಟ್ ಬಂತು. ನನ್ನ ಗುಲಬರ್ಗಾ ಜೇಲ್‌ಕ ಹಾಕಿದ್ರು... ಸ್ವಾತಂತ್ರ್ಯ ಸಿಕ್ಕ ನಂತ್ರ ಜೇಲ್‌ನಿಂದ ಬಿಡುಗಡೆ ಮಾಡಿದ್ರು...’

ವಯಸ್ಸು ನೂರೆಂಟಾದರೂ ಮನಸ್ಸಿಗೆ ಮುಪ್ಪಿಲ್ಲ...
ಅಜ್ಜಾರ ನಿಮ್ಮ ವಯಸ್ಸು ಎಷ್ಟು? ಎಂದು ಕೇಳಿದರೆ, ‘ನಾ ಹುಟ್ಟಿದ್ದು 1911, ಮೇ 9ನೇ ತಾರೀಖು... ವಯಸ್ಸು ಎಷ್ಟಾತು ಅಂತ ನೀವ ಲೆಕ್ಕಾ ಹಾಕ್ರಿ’ ಎನ್ನುತ್ತ ಕೇಳಿದವರು ಹುಬ್ಬೇರಿಸುವಂತೆ ಮಾಡುತ್ತಾರೆ ಕಾಳಪ್ಪಜ್ಜ. ದೇಹಕ್ಕೆ ವಯಸ್ಸು ನೂರೆಂಟಾದರೂ ಇವರ ಮನಸ್ಸಿಗಿನ್ನೂ ಮುಪ್ಪಾಗಿಲ್ಲ. ಅವರು ಅಪ್ಪಟ ಸಸ್ಯಹಾರಿ. ಸಜ್ಜಕ, ತುಪ್ಪ, ಹಾಲು, ಚಪಾತಿ, ರೊಟ್ಟಿ, ಅನ್ನ ಅವರ ನೆಚ್ಚಿನ ಆಹಾರ. ರಕ್ತದೊತ್ತಡ, ಮಧುಮೇಹ... ಯಾವುದೇ ಸಮಸ್ಯೆ ಇವರಿಗಿಲ್ಲ. ಈಚೆಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಸ್ವಲ್ಪ ಬಳಲಿದಂತೆ ಕಂಡರೂ ಜೀವನೋತ್ಸಾಹವೇನೂ ಕುಗ್ಗಿಲ್ಲ... ಪ್ರಸ್ತುತ ಕಾಳಪ್ಪಜ್ಜ ತಮ್ಮ ಮಗ ಜಿನ್ನಪ್ಪ ಅವರೊಂದಿಗೆ ವಾಸವಾಗಿದ್ದಾರೆ.

ರಾಮರಾಜ್ಯ ಅಂದರೆ...
ಗಾಂಧೀಜಿ ಅವರ ಸತ್ಯ, ಅಹಿಂಸೆ, ಗ್ರಾಮ ಸ್ವರಾಜ್ಯ, ಶ್ರಮ ಸಂಸ್ಕೃತಿ ಇವೆಲ್ಲವನ್ನೂ ಇಂದಿಗೂ ಮೈಗೂಡಿಸಿಕೊಂಡಿರುವ ಕಾಳಪ್ಪ ಅವರಿಗೆ ಈಗ ಭರ್ತಿ 108 ವರ್ಷ. ಅವರು ಹೇಳುವಂತೆ ‘ಅಂದು ಬ್ರಿಟಿಷರ ವಿರುದ್ಧ ನಡೆದ ಹೋರಾಟ... ಇಂದು ಲಂಚಕೋರ ರಾಜಕಾರಣಿ, ಅಧಿಕಾರಿಗಳ ವಿರುದ್ಧ ನಡೆಯಬೇಕಿದೆ. ಹೆಣ್ಣುಮಕ್ಕಳು ಯಾರ ಭಯವೂ ಇಲ್ಲದೇ ಧೈರ್ಯದಿಂದ ಬದುಕಬೇಕಿದೆ. ಯುವಕರು ದುಶ್ಚಟಗಳನ್ನು ತೊರೆಯಬೇಕಿದೆ. ಆಗ ರಾಮರಾಜ್ಯ ನಿರ್ಮಾಣವಾಗುತ್ತದೆ...’

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು