ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಪಲ್‌ ಅಂದ್ರೂ ಗಣೇಶ ಅದ್ಧೂರಿಯಾಗೇ ಎಂಟ್ರಿಕೊಡ್ತಾನ...

Last Updated 1 ಸೆಪ್ಟೆಂಬರ್ 2019, 16:55 IST
ಅಕ್ಷರ ಗಾತ್ರ

ವಿಘ್ನಗಳು ಬಾರದಂತೆ ಸಕಲ ಕಾರ್ಯಗಳು ಸುಗಮವಾಗಿ ನೆರವೇರಲಿ ಎಂದು ಜಾತಿ–ಮತ ಮೀರಿ ಎಲ್ಲರೂ ಸೌಹಾರ್ದತೆಯಿಂದ ಪ್ರಾರ್ಥಿಸುವ ಪ್ರಥಮ ಪೂಜಿತ ಗಣಪನ ಆಗಮನಕ್ಕಾಗಿ ನಗರ ಸಜ್ಜುಗೊಂಡಿದೆ. ಅವಳಿನಗರದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕ ಗಣೇಶನ ಪೆಂಡಾಲ ಸಿದ್ಧಗೊಂಡಿವೆ. ಕಣ್ಣು ಹಾಯಿಸಿದೆಡೆಯಲ್ಲಾ ಗೌರಿತನಯನ ಪ್ರತಿಷ್ಠಾಪನೆಗಾಗಿ ವೇದಿಕೆಗಳ ಅಂತಿಮ ಹಂತದ ತಯಾರಿಯಲ್ಲಿರುವ ಕಲಾವಿದರು, ಯುವಕರೇ ಕಾಣುತ್ತಿದ್ದಾರೆ.

ಗಲ್ಲಿ–ಗಲ್ಲಿಯಲ್ಲೂ ಪೆಂಡಾಲ್‌ ಹಾಕುವ, ಲೈಟ್ಸ್‌ಗಾಗಿ ವಿದ್ಯುತ್‌ ಸಂಪರ್ಕ ನೀಡುವ, ಗಣಪನನ್ನು ಪ್ರತಿಷ್ಠಾಪಿಸುವ ವೇದಿಕೆ ವಿಭಿನ್ನವಾಗಿ ಕಾಣುವಂತೆ ಸಿಂಗರಿಸುತ್ತಿರುವ, ಗಣಪನನ್ನು ಸುಂದರವಾಗಿಸುವಲ್ಲಿ ಫೈನಲ್‌ ಟಚ್‌ ಕೊಡುವಲ್ಲಿ ಕಲಾವಿದರು ಕೈಚಳಕ ತೋರುತ್ತಿದ್ದರು. ಲಂಬೋದರನನ್ನು ಸ್ವಾಗತಿಸಲು ಅವಳಿನಗರ ಸಜ್ಜಾಗಿದೆ ಎಂಬುದನ್ನು ಎಲ್ಲೆಡೆ ಮೇಳೈಸಿದ ಹಬ್ಬದ ವಾತಾವಾರಣವೇ ಹೇಳುತ್ತಿತ್ತು.

ಇದಕ್ಕೆ ಪೂರಕವಾಗಿ ನಗರದ ಪ್ರಮುಖ ಮಾರುಕಟ್ಟೆಗಳಾದ ದುರ್ಗದಬೈಲ್‌ ಮತ್ತು ಜನತಾ ಬಜಾರ್‌ ಹಾಗೂ ಸೂಪರ್‌ ಮಾರ್ಕೆಟ್‌ನಲ್ಲಿ ಏಕದಂತನ ವೇದಿಕೆಯನ್ನು ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಸಿದ್ಧಪಡಿಸುವ ಡೆಕೋರೇಷನ್‌ ಪರಿಕರಗಳ ಮಾರಾಟ ಜೋರಾಗಿತ್ತು. ಜಿಟಿ ಜಿಟಿ ಮಳೆಯ ನಡುವೆಯೂ ಜನರು ಖರೀದಿಯಲ್ಲಿ ತೊಡಗಿರುವುದು ಸಾಮಾನ್ಯವಾಗಿತ್ತು. ಗಣಪನ ಕಿರೀಟ, ತಲೆಯ ಹಿಂದಿಡುವ ಚಕ್ರ, ವಿಭಿನ್ನವಾದ ಮುತ್ತಿನ ಮಾಲೆಗಳು, ಬಲೂನ್‌ಗಳು, ಮಿಂಚಿನ ಹಾಳೆಗಳು, ವೇದಿಕೆ ಅಕ್ಕ–ಪಕ್ಕದಲ್ಲಿ ಜೋತುಬಿಡುವ ಆಕರ್ಷಕ ಹಾರಗಳು, ಮುತ್ತಿನ ಚೆಂಡುಗಳು, ಪರಪರಿಯ ಡಿಸೈನ್‌ ಹಾಳೆಗಳ ಖರೀದಿ ಚೌಕಾಸಿಯ ನಡುವೆಯೂ ಚುರುಕಾಗಿತ್ತು. ಇದೆಲ್ಲದರ ನಡುವೆ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿರುವುದು ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡ ಗಣಪನ ರೊಟೇಶನ್‌ ದೀಪ, ತೇರಿನ ದೀಪ, ಮಹಾಮಂಗಳಾರತಿಯ ದೀಪ, ಸಮೆಯಗಳು(ವಿದ್ಯುತ್‌ ದೀಪದ ಸಾಧಾರಣ ದೀಪಗಳು).

‘ಇವುಗಳನ್ನು ಬಾಂಬೆ ಮತ್ತು ದಿಲ್ಲಿಯಿಂದ(ದೆಹಲಿ) ತರಿಸುತ್ತಿದ್ದೇವೆ. ಬೇಡಿಕೆ ಕೂಡ ಹೆಚ್ಚಾಗಿದ್ದು, ಗಣಪನ ಮುಂದಿಟ್ಟಾಗ ಸಿಗುವ ಲುಕ್‌ ಬೇರೆಯೇ ಆಗಿರುತ್ತದೆ. ಹಾಗಾಗಿ ಮಹಿಳೆಯರು ಖರೀದಿಸುತ್ತಿದ್ದಾರೆ. ಇವುಗಳ ಬೆಲೆ ₹ 200 ರಿಂದ ₹2,000. ಇದರ ಜೊತೆಗೆ ಈ ಬಾರಿ ಹೊಸದಾಗಿ ಫೋಕಸ್‌ ಲೈಟ್‌ಗಳು, ವಿದ್ಯುತ್‌ ದೀಪಗಳ ಲೈಟಿನ ಸರಗಳು, ಹೂವಿನ ರೀತಿಯ ಲೈಟಿನ ಸರಗಳು, ದೀಪಗಳುಮಾರ್ಕೆಟ್‌ಗೆ ಪ್ರವೇಶಿಸಿದ್ದು ಜನರು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ದುರ್ಗದ ಬೈಲ್‌ನ ವ್ಯಾಪಾರಿ ಫರಾಕ್‌.

‘ಮಲ್ಲಿಗೆ ಮಲ್ಲಿಗೆ, ಸೇವಂತಿಗೆ, ಕಾಕಡ, ಕನಕಾಂಬರ ಮಾರಿಗ್‌ ₹50, ಮಾರಿಗ್ ₹50, ಗುಲಾಬಿ ₹20ಕ್ಕೆ 3, ತಾವರೆ ₹10ಕ್ಕೆ 1, ಡೇರಿ ಹೂ ₹10ಕ್ಕೆ 2’ ಎಂದು ಹೂವಿನ ವ್ಯಾಪಾರಿಗಳು ಏರುದನಿಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದರೆ, ‘ರೇಟ್‌ ಕಡಿಮೆ ಮಾಡಿ ಕೊಡಪ್ಪಾ ಮದ್ಲ ಮಳೆ ಬಂದು, ಕೈಯಾಗ ರೊಕ್ಕ ಇಲ್ಲ’ ಅಂತ ಹೆಣ್ಮಕ್ಕಳು ಚೌಕಾಸಿ ಮಾಡ್ತಿದ್ರು. ‘ವರ್ಷಕ್ಕೊಮ್ಮೆ ಗಣಪತಿ ಹಬ್ಬ ಬರೋದ ಸುಮ್ನ ಯಾಕ ಚೌಕಾಸಿ ಮಾಡ್ತಿರಿ. ಬೇಕಾದ್ರ ತಗೊಳ್ಳಿ ಇಲ್ಲಂದ್ರೆ ಬಿಡಿ’ ಅಂತ ವ್ಯಾಪಾರಿ ಅಂದ್ರೆ, ಈಗ ಹೂವಿಗ ಡಿಮ್ಯಾಂಡ್‌ ಜಾಸ್ತಿ. ನೀನರ ಏನ್‌ ಮಾಡ್ತಿ ಅಂತ ಗೊಣಗುತ್ತ ತಗೋ ಯಾಡ ಮಾರ ಮಲ್ಲಿಗೆ ಮತ್ಯಾಡ ಮಾರ ಕಾಕಡ ಕೊಡು ಅಂತ ಹೂವು ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.‌ ಇದರೊಟ್ಟಿಗೆ ಹಣ್ಣುಗಳು, ಮಾವಿನ ತೋರಣ, ಬಾಳೆ ಕಂಬ, ಬಾಳೆ ಎಲೆ, ಗರಿಕೆ, ಬಿಲ್ವಪತ್ರೆ, ತುಳಸಿ ದಳಗಳ ಮಾರಾಟ ಮಾರ್ಕೆಟ್‌ನ ಮತ್ತೊಂದು ನೋಟವಾಗಿತ್ತು.

ಈ ಬಾರಿ ಮಳೆ ಹೆಚ್ಚಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆಯೂ ವ್ಯಾಪಾರ ಹೇಗಿದೆ ಎಂಬ ಪ್ರಶ್ನೆಗೆ, ‘ಬ್ಯಾರೆ ಹಬ್ಬಕ್ಕ ಆದ್ರ ಹೊಡತ ಬೀಳ್ತೆತ್ರಿ, ಆದ್ರ ಗಣಪನ ಹಬ್ಬಕ ಅದು ಎಫೆಕ್ಟ್‌ ಕೊಡಂಗಿಲ್ರಿ. ಸಿಂಪಲ್‌ ಸಿಂಪಲ್‌ ಅಂತ ಮಂದಿ ಹೇಳ್ತಾರ. ಆದ್ರೂ, ಗಣೇಶ ಮಾತ್ರ ಅದ್ಧೂರಿಯಾಗೇ ಎಂಟ್ರಿ ಕೊಡ್ತಾನ. ಯಾಕಂದ್ರ ಅವ ಸಂಕಷ್ಟ ಹರ. ಅದಲ್ಲದೆ ಇದು ಜಾತಿ–ಧರ್ಮ ಮೀರಿದ ಹಬ್ಬ. ಸಾರ್ವಜನಿಕರೆಲ್ಲರ ಸೇರಿ ಆಚರಿಸ್ತಾರ. ಮಳಿಯಾಗಿ ಲಾಸ್‌ ಆಗೇತಿ, ರೇಟ್‌ ಕಡಿಮಿ ಮಾಡ್ರಿ ಅಂತ ಅನ್ನೋದ ನೆಪ ಆಗೇತಿ. ಆದರೂ ಖರೀದಿ ಮಾಡೋದೇನ ಮಂದಿ ಬಿಡಂಗಿಲ್ಲ. ಹಿಂಗಾಗಿ ವ್ಯಾಪಾರ ಛೋಲೊ ಅದ’ ಅನ್ನುತ್ತಾರೆ ವ್ಯಾಪಾರಿ ಸಮೀರ.

‌‘ಗಣಪತಿ ಬಪ್ಪಾ ಮೋರಯಾ’, ‘ಬೋಲೋ ಶ್ರೀ ಗಜಾನನ ಮಹಾರಾಜಾ ಕೀ ಜೈ’, ಟ್ವಿಂಕಲ್‌ ಟ್ವಿಂಕಲ್ ಲಿಟ್ಲ್‌ ಸ್ಟಾರ್‌, ನಮ್ಮ ಗಣಪತಿ ಸೂಪರ್‌ ಸ್ಟಾರ್‌’, ‘ಗಣಪತಿ ಬಪ್ಪ ಮೋರಯಾ ಹರಸು ನಮ್ಮ ಏರಿಯಾ’, ‘ವಿದ್ಯಾ ಗಣಪತಿ ಕೀ ಜೈ’, ‘ಸಂಕಷ್ಟ ಹರ ಗಣಪತಿ ಕೀ ಜೈ’, ‘ಪ್ರಥಮ ಪೂಜಿತ ಗಣಪನಿಗೆ ಜೈ’ ಎಂಬ ಜೈಕಾರಗಳನ್ನು ಎದುರುಗೊಳ್ಳಲು ವಿಘ್ನನಿವಾರಕ ಗಣೇಶ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT