ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣದ ಪರಮೋಚ್ಚ ಹಂತ ತಲುಪಿದೆ: ಮಹೇಶ್ ಟೆಂಗಿನಕಾಯಿ

Published 1 ಜನವರಿ 2024, 16:24 IST
Last Updated 1 ಜನವರಿ 2024, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: 1992ರ ಗಲಭೆ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿ ಬಂಧನ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹು–ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ, ‘ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದ ಪರಮೋಚ್ಚ ಹಂತಕ್ಕೆ ತಲುಪಿದೆ’ ಎಂದು ಕುಟುಕಿದರು.

‘ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ. ಇದಕ್ಕೆ ಇಡೀ ಹಿಂದೂ ಸಮಾಜವೇ ಸಂಭ್ರಮದಿಂದಿದೆ. ಆದರೆ ಈ ಸಂದರ್ಭದಲ್ಲಿ 31 ವರ್ಷದ ಹಿಂದಿನ ಪ್ರಕರಣಕ್ಕೆ ಮರುಜೀವ ನೀಡುವ ವಿಚಿತ್ರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ’ ಎಂದರು.

‘ಮೂವತ್ತೊಂದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏಕೆ ಬಂಧನ ಮಾಡಲು ಮುಂದಾಗಲಿಲ್ಲ. ಈಗ ಹಳೆಯ ಪ್ರಕರಣಕ್ಕೆ ಮರುಜೀವ ನೀಡುವ ಹಿಂದಿನ ಉದ್ದೇಶವೇನು. ರಾಮ ಮೂರ್ತಿ ಪ್ರತಿಷ್ಠಾಪನೆಗೆ ನಿಮ್ಮ ಸಹಮತ ಇಲ್ಲವೇ’ ಎಂದು ಅವರು ಈ ವೇಳೆ ಪ್ರಶ್ನಿಸಿದರು.

‘ಕಾಂಗ್ರೆಸ್‌ನವರಿಗೆ ಹುಬ್ಬಳ್ಳಿ ಅಂದರೆ ಬಹಳ ಪ್ರೀತಿ. ಒಂದು ಕಡೆ ಅಲ್ಪ ಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿದರು. ಮತ್ತೊಂದು ಕಡೆ ಹಿಂದೂ ಕಾರ್ಯಕರ್ತನ ಬಂಧನ ಮಾಡಿದ್ದಾರೆ, ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರ ಪರ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದರು.

‘ಕಾರ್ಯಕರ್ತರ ಹೋರಾಟದ ಬಲದಿಂದಲೇ ರಾಮಮಂದಿರ ನಿರ್ಮಾಣ ಆಗುತ್ತಿದೆ. ಕಾಂಗ್ರೆಸ್ ಒತ್ತಡ ಹೇರುವ ಮೂಲಕ ಕಾರ್ಯಕರ್ತನ ಬಂಧನ ಮಾಡಿಸಿದೆ. ಇದರಿಂದ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಕಾಂಗ್ರೆಸ್ ಸರ್ಕಾರವೇ ಕಾರಣ’ ಎಂದು ಎಚ್ಚರಿಸಿದರು.

‘ಈ ಹಿಂದೆ ಹಲವು ಪೊಲೀಸ್ ಆಯುಕ್ತರು ಆಗಿಹೋದರೂ ಅವರು ಏಕೆ ಬಂಧನ ಮಾಡಲಿಲ್ಲ. ಈಗಿನ ಕಮಿಷನರ್ ಹಳೇ ಹುಬ್ಬಳ್ಳಿ ಗಲಾಟೆ ಮಾಡಿದವರ ಬಿಡುಗಡೆಗೆ ಪತ್ರ ಬರೆದಿದ್ದರು. ಅವರು ಅಮಾಯಕರು ಎಂದು ಮುದ್ರೆ ಹಾಕಿದಿರಿ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಎಂದರೆ ಹಿಂದೂ ವಿರೋಧಿ ಪಕ್ಷ. ಆರು ತಿಂಗಳಿಂದ ಈ ಸರ್ಕಾರ ಹಿಟ್ಲರ್ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಪೊಲೀಸ್ ಇಲಾಖೆಯನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳಬಾರದು’ ಎಂದು ಆಗ್ರಹಿಸಿದರು.

ಶಾಸಕರು ಬಂಧಿತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT