ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಎದುರಿಸಲು‌ ಸರ್ಕಾರ ಸಿದ್ಧ: ಸಚಿವ ಸುಧಾಕರ್

Last Updated 27 ಡಿಸೆಂಬರ್ 2022, 12:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೋವಿಡ್‌ ರೂಪಾಂತರಿ ತಳಿ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಸೋಂಕು ಹರಡದಂತೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ಎದುರಿಸಲು ಆರೋಗ್ಯ ಇಲಾಖೆ ಈಗಾಗಲೇ ಸರ್ವ ಸನ್ನದ್ಧವಾಗಿದೆ. ಒಂದು ವೇಳೆ ರೂಪಾಂತರ ತಳಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಾದರೆ, ಅದನ್ನು ಎದುರಿಸಲು ಸಹ ಸರ್ಕಾರ ದೃಢಸಂಕಲ್ಪ ಮಾಡಿದೆ. ಜನರ ಆರೋಗ್ಯ ರಕ್ಷಣೆ ನಮ್ಮ ಮೊದಲ ಆದ್ಯತೆ. ಜನರು ಸೋಂಕು ಹರಡದಂತೆ ಮುಂಜಾಗೃತೆ ವಹಿಸಬೇಕು. ದಯವಿಟ್ಟು ಎಲ್ಲರೂ ಲಸಿಕೆ ಪಡೆದು ಕೋವಿಡ್‌ ನಿಯಂತ್ರಣಕ್ಕೆ ಮುಂದಾಗಬೇಕು’ ಎಂದು ವಿನಂತಿಸಿದರು.

‘ವಿದೇಶದಿಂದ ಬರುವ ಶಂಕಿತ ಕೊರೊನಾ ಸೋಂಕಿತರನ್ನು ವಿಮಾನ ನಿಲ್ದಾಣಗಳಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಗತ್ಯವಿದ್ದರೆ ಮುಂಬರುವ ದಿನಗಳಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುತ್ತೇವೆ. ರಾಜ್ಯದಲ್ಲಿ ಎಂಟು ಲಕ್ಷ ಕೋವಿಡ್‌ ಲಸಿಕೆ ದಾಸ್ತಾನು ಇದ್ದು, ಕೇಂದ್ರ ಸರ್ಕಾರದಿಂದ ಮತ್ತೆ 20 ಲಕ್ಷ ಲಸಿಕೆ ಪಡೆಯಲು ಸಿದ್ಧವಿದ್ದೇವೆ’ ಎಂದರು.

‘ಕಾನೂನಿಗೆ ಗೌರವ ಕೊಡಲಿ’

‘ಮಹಾರಾಷ್ಟ್ರದ ನಾಗ್ಪೂರದಲ್ಲಿ ನಡೆದ ಅಧಿವೇಶನದಲ್ಲಿ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎನ್ನುವ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವೆಲ್ಲ ಭಾರತೀಯರು. ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೆ. ನೆಲದ ಕಾನೂನಿಗೆ ಗೌರವ ನೀಡಬೇಕು. ನೆರೆಯ ರಾಜ್ಯದ ಜನರು ಪರಸ್ಪರ ಪ್ರೀತಿ–ವಿಶ್ವಾಸದಿಂದ ಇರುವ ಸಂದರ್ಭದಲ್ಲಿ, ಇಷ್ಟು ಹಳ್ಳಿಗಳು ನಮಗೆ ಸೇರ್ಪಡೆಯಾಗುತ್ತದೆ ಎನ್ನುವುದು ದುರುದ್ದೇಶದ ರಾಜಕೀಯ. ಅದಕ್ಕೆ ಯಾವ ನೈತಿಕತೆಯೂ ಇಲ್ಲ. ರಾಜ್ಯದ ಒಂದಿಂಚು ಜಾಗ ಸಹ ನಾವು ಯಾರಿಗೂ ಹಸ್ತಾಂತರಿಸುವುದಿಲ್ಲ. ನೆಲ, ಜಲ, ಭಾಷೆ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಹೋರಾಡಲು ಬದ್ಧ’ ಎಂದರು.

‘ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೋತಿಷಿಗಳಲ್ಲಿ ಹೋಗುತ್ತಾರೆ ಎನ್ನುವುದು ಗೊತ್ತಿತ್ತು. ಆದರೆ, ಅವರೇ ಜೋತಿಷಿಗಳಾಗಿದ್ದಾರೆ ಎನ್ನುವುದು ಗೊತ್ತಿರಲಿಲ್ಲ’ ಎಂದು ಡಿ.ಕೆ. ಶಿವಕುಮಾರ್‌ ನೀಡಿರುವ ‘ಅವಧಿಪೂರ್ವವೇ ವಿಧಾನಸಭಾ ಚುನಾವಣೆ ನಡೆಯಲಿದೆ’ ಎನ್ನುವ ಹೇಳಿಕೆಗೆ ವ್ಯಂಗ್ಯವಾಡಿದರು.

***
ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌, ಆ ಅವಧಿಯಲ್ಲಿ ಮಹಾದಾಯಿಗೆ ಯಾವೆಲ್ಲ ಕ್ರಮಗಳನ್ನು ಕೈಗೊಂಡಿತ್ತು ಎನ್ನುವುದನ್ನು ಹುಬ್ಬಳ್ಳಿಯಲ್ಲಿ ಜ. 2ರಂದು ನಡೆಸಲಿರುವ ಸಮಾವೇಶದಲ್ಲಿ ಸ್ಪಷ್ಟಪಡಿಸಲಿ
ಡಾ. ಸುಧಾಕರ್‌, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT