ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಣಿ ಹೊಲದಲ್ಲಿ ನನಸಾದ ಕನಸು

ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯಲ್ಲಿ ವಿನಾಯಕ ಸ್ತ್ರೀ ಶಕ್ತಿ ಸಂಘದ ಸಾಮೂಹಿಕ ಕೃಷಿ
Last Updated 10 ಮಾರ್ಚ್ 2022, 13:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯಲ್ಲಿ ವಿನಾಯಕ ಸ್ತ್ರೀ ಶಕ್ತಿ ಸಂಘವಿದೆ. ಇದರ ಸದಸ್ಯರಲ್ಲಿ ಹೆಚ್ಚಿನವರಿಗೆ ಜಮೀನಿಲ್ಲ. ಬೇರೆಯವರ ಹೊಲದಲ್ಲಿ ಕೂಲಿ ಮಾಡುವವರೇ ಆಗಿದ್ದಾರೆ. ಬೇರೆಯವರ ಹೊಲದಲ್ಲಿ ಕೂಲಿ ಮಾಡುವ ಬದಲು ತಮ್ಮದೇ ಹೊಲದಲ್ಲಿ ಕೆಲಸ ಮಾಡಿ ಗಳಿಸುವಂತಿದ್ದರೆ ಅನ್ನೋ ಕನಸು ಅವರದ್ದು. ಸಂಘದ ನೇತೃತ್ವ ವಹಿಸಿರುವ ರತ್ನಾ ಪ್ರಕಾಶ ಹೊಸಳ್ಳಿ ‘ಸಾಮೂಹಿಕ ಕೃಷಿ’ ಮೂಲಕ ಸಂಘದ ಹೆಣ್ಮಕ್ಕಳ ಕನಸು ನನಸು ಮಾಡಿದ್ದಾರೆ.

ವಿನಾಯಕ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರೆಲ್ಲರೂ ಬೇರೆಯವರ ಹೊಲದಲ್ಲಿ ಕೂಲಿಗೆ ಹೋಗುತ್ತಾರೆ. 2001ರಲ್ಲಿ ಇವರಿಗೆಲ್ಲ ಸಿಗುತ್ತಿದ್ದ ಕೂಲಿ ₹10 ಮಾತ್ರ. ಪುರುಷರಿಗೆ ₹25. ಅದೇ ಕೂಲಿ 2020ರ ವೇಳೆಗೆ ₹150 ಆಯಿತು. ಗಂಡು ಆಳಿಗೆ ₹250.

‘ನಾವೂ ಪುರುಷರಿಗೆ ಸರಿಯಾಗಿ, ಅವರಿಗಿಂತ ಹೆಚ್ಚು ಸಮಯ ದುಡಿದರೂ ನಮಗೆ ಕೊಡೊದು ಕಡಿಮೆ ಕೂಲಿ’ ಅನ್ನೋ ಅಸಮಾಧಾನ ಸಂಘದ ಸದಸ್ಯೆಯರನ್ನು ಕಾಡುತ್ತಿತ್ತು. ಇದನ್ನು ಅರಿತ ಸಂಘದ ನೇತೃತ್ವ ವಹಿಸಿರುವ ರತ್ನಾ ಪ್ರಕಾಶ ಹೊಸಳ್ಳಿ ಒಂದು ಹೆಜ್ಜೆ ಮುಂದಿಟ್ಟರು. ಕೂಲಿಗಾಗಿ ಹಾಕುವ ಶ್ರಮವನ್ನು ಗೇಣಿ ಪಡೆದ ಹೊಲದಲ್ಲಿ ಹಾಕಿದರೆ ಅದಕ್ಕಿಂತಲೂ ಹೆಚ್ಚು ಆದಾಯ ಗಳಿಸಬಹುದು ಅನ್ನೋ ಸಲಹೆಗೆ ಉಳಿದ ಸದಸ್ಯೆಯರು ಸಮ್ಮತಿ ನೀಡಿದರು.

2020 ಅಂತ್ಯದಲ್ಲಿ ಅವರ ಆಲೋಚನೆ ಕಾರ್ಯರೂಪಕ್ಕೆ ಬಂದೇ ಬಿಟ್ಟಿತು. ಒಂದು ಎಕರೆ ಹೊಲವನ್ನು ಗೇಣಿಗೆ ಪಡೆದು ಸಿರಿಧಾನ್ಯ, ಶೇಂಗಾ, ಕಡಲೆ ಬಿತ್ತಿ, ಬೆಳೆ ತೆಗೆದಿದ್ದಾರೆ. ಬೇರೆಯವರ ಹೊಲದಲ್ಲಿ ದುಡಿಯುವ ಬದಲು ತಮ್ಮದೇ ಕನಸಿನ ಹೊಲದಲ್ಲಿ ಬೇವರು ಸುರಿಸಿದ್ದಾರೆ. ಪ್ರತೀ ಹಂತದಲ್ಲೂ ಅನ್ಯರ ಸಹಾಯ ಪಡೆಯದೇ ಸ್ವತಃ ತಾವೇ ಶ್ರಮಿಸಿದ್ದಾರೆ. ಅಕಾಲಿಕ ಮಳೆಗೆ ಶೇಂಗಾ ಬೆಳೆ ಕೈಕೊಟ್ಟರೂ ಸಂಘದ ಸದಸ್ಯೆಯರು ಅದರಿಂದ ಕುಗ್ಗಲಿಲ್ಲ. ತಾವು ಬೆಳೆದ ಬೆಳೆಗೆ ಮೌಲ್ಯವರ್ಧನೆಯ ಗುರಿಯನ್ನೂ ಹೊಂದಿದ್ದಾರೆ. ಒಗ್ಗಟ್ಟಿನಿಂದ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎಂಬುದನ್ನು ವಿನಾಯಕ ಸ್ತ್ರೀ ಶಕ್ತಿ ಸಂಘದ ಮೂಲಕ ರತ್ನಾ ಪ್ರಕಾಶ ಹೊಸಳ್ಳಿ ತೋರಿಸಿಕೊಟ್ಟಿದ್ದಾರೆ.

‘ಸದ್ಯ ಹೊಲದಲ್ಲಿ ಎಡೆಕುಂಟೆ ಹೊಡೆಯುವಾಗ ಸಂಘದ ಸದಸ್ಯರ ಮನೆಯ ಗಂಡುಮಕ್ಕಳ ಸಹಾಯ ಪಡೆಯುತ್ತಿದ್ದೇವೆ. ಉಳಿದ ಕೆಲಸವನ್ನು ಮಹಿಳೆಯರೇ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಡೆಕುಂಟೆ ಕೆಲಸವನ್ನೂ ನಮ್ಮ ಸದಸ್ಯೆಯರೇ ನಿರ್ವಹಿಸುತ್ತಾರೆ’ ಎಂದು ವಿನಾಯಕ ಸ್ತ್ರೀ ಶಕ್ತಿ ಸಂಘದ ನಾಯಕಿ ರತ್ನಾ ಪ್ರಕಾಶ ಹೊಸಳ್ಳಿ ವಿಶ್ವಾಸದಿಂದ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT