ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರೀಫಜ್ಜನ ಜಾತ್ರೆಗೆ ಗುಡಗೇರಿ ಬಂಡಿ

ಗುಡಗೇರಿ ಕಲ್ಮಠದೊಂದಿಗೆ ಭಾವೈಕ್ಯದ ಸಂಬಂಧ ಹೊಂದಿದ ಶಿಶುನಾಳ
ವಾಸುದೇವ ಎಸ್. ಮುರಗಿ
Published 19 ಮಾರ್ಚ್ 2024, 4:45 IST
Last Updated 19 ಮಾರ್ಚ್ 2024, 4:45 IST
ಅಕ್ಷರ ಗಾತ್ರ

ಗುಡಗೇರಿ: ಶಿಶುನಾಳ ಶರೀಫ ಗದ್ದುಗೆಗೂ ಗುಡಗೇರಿ ಕಲ್ಮಠಕ್ಕೂ ಗುರುಶಿಷ್ಯರ ಸಂಬಂಧವನ್ನು ಬೆಸೆದ ಭಾವೈಕ್ಯದ ಸಂಬಂಧವಿದ್ದು, ಪವಿತ್ರ ಸ್ನೇಹಬಾಂಧವ್ಯದ ಸಂಕೇತವಾಗಿದೆ.

ಕಳಸದ ಗುರುಗೋವಿಂದಭಟ್ಟರ ಮನೆತನದವರು ಈ ಪುರಾತನ ಕಲ್ಮಠದ ಕಲ್ಮೇಶ್ವರನನ್ನು ಪೂಜಿಸುತ್ತಿದ್ದರು. ಗೋವಿಂದಭಟ್ಟರು ಈಶ್ವರ ಪೂಜೆನಂತರ ನೂರಾರು ಮಕ್ಕಳಿಗೆ ಈ ಕಲ್ಮಠದಲ್ಲಿಯೇ ವಿದ್ಯಾಧಾರೆ ಎರೆಯುತ್ತಿದ್ದರು. ಶಿಶುನಾಳ ಶರೀಫರು ಇದೇ ಗುರುವಿನ ಬಳಿ ವಿದ್ಯಾರ್ಜನೆಗಾಗಿ ಬಂದಾಗ ನೂರಾರು ವಿಘ್ನಗಳ ಮಧ್ಯೆಯೇ ಶರೀಫರಿಗೆ ಗೋವಿಂದಭಟ್ಟರು ಜ್ಞಾನ ನೀಡಿದರು.

ಗುರುಗೋವಿಂದರು ಬ್ರಾಹ್ಮಣ ಜನಾಂಗಕ್ಕೆ ಸೇರಿದವರು,  ಶರೀಫರು ಮುಸ್ಲಿಂ. ಆದ್ದರಿಂದ ಶರೀಫರ ವಿದ್ಯಾರ್ಜನೆ ಸಮಯದಲ್ಲಿ ಸಹಪಾಠಿಗಳು ಅವರೊಡನೆ ಸೇರದೇ ಹೀಯಾಳಿಸುತ್ತಿದ್ದರು. ಆದರೆ ಗುರುಗೋವಿಂದರು ಶರೀಫರ ಮೇಲೆ ಅಗಾಧ ಶಿಷ್ಯಪ್ರೇಮ ಗಾಢವಾಗಿ ಬೆಳೆಸಿಕೊಂಡ ಕಾರಣ ತಮ್ಮ ಮಗನಂತೆ ಕಂಡರು. ತಮ್ಮ ಸಂಪ್ರದಾಯದ ಪ್ರಕಾರ ಜನಿವಾರ ಹಾಕಿದಾಗ, ಶರೀಫರು ಭಾವೋದ್ವೇಗದಿಂದ ‘ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ...’ ಎಂದು ಮನದುಂಬಿ ಹಾಡಿ ಹೊಗಳಿದರು.

ಹೀಗೆ ಗುರು–ಶಿಷ್ಯ ಸಂಬಂಧ ಅನ್ಯೋನ್ಯಗೊಳಿಸಿದ ಮೂಲ ಕೇಂದ್ರವೇ ಗುಡಗೇರಿ ಕಲ್ಮಠ. ಇಂತಹ ಗುರು ಶಿಷ್ಯರು ಅನೇಕ ಪವಾಡ ಮಾಡಿ ಜನರಲ್ಲಿ ಅಚ್ಚರಿ ಮೂಡಿಸಿದರು. ಶರೀಫರು ಅನೇಕ ಅನುಭವದ ತತ್ವ ಪದಗಳನ್ನು ರಚಿಸಿದ್ದಾರೆ. ಕಲ್ಮಠ ಕುರಿತು ತನ್ನ ಹಾಡಿನಲ್ಲಿ ಗುಡಿಪೂರು ಕಲ್ಮೇಶ್ವರ ಎಂದು ಕೊಂಡಾಡಿದ್ದಾನೆ.

ಈ ಗುರು ಶಿಷ್ಯರ ಸವಿನೆನಪಿಗಾಗಿ ಕಲ್ಮಠ ಮಠದಿಂದ ಪ್ರತಿ ವರ್ಷ ಶಿಶುನಾಳ ಜಾತ್ರೆಗೆ ಗುಡಗೇರಿ ಜನತೆ ನಾಲ್ಕು ಗಾಲಿಯ ಬಂಡಿ ಕಟ್ಟಿಕೊಂಡು ಅಜ್ಜನ ಜಾತ್ರೆಗೆ ತೆರಳುತ್ತಾರೆ. ಗ್ರಾಮದ ದಿ.ವಿಠ್ಠಪ್ಪ ಮಾಳ್ವದಕರ ಹಾಗೂ ಅವರ ಸಂಗಡಿಗರು ಮೊದಲು ಅಜ್ಜನ ಜಾತ್ರೆಗೆ ಬಿದಿರಿನ ಚಕ್ಕಡಿ ಕಟ್ಟಿಕೊಂಡು ಅದರಲ್ಲಿ ಗೋವಿಂದರು ಹಾಗೂ ಶರೀಫರ ಭಾವಚಿತ್ರವನ್ನು ಇಟ್ಟುಕೊಂಡು ಹೋಗುತ್ತಿದ್ದರು. ತದನಂತರ ನಾಲ್ಕುಗಾಲಿಯ ಬಂಡಿಯನ್ನು ಕಟ್ಟಿ ವಿಶಿಷ್ಟರೀತಿಯ ಬಂಡಿಯನ್ನು ಅಲಂಕರಿಸಿ ನಾಲ್ಕು ಆಜಾನುಬಾಹು ಎತ್ತುಗಳನ್ನು ಹೂಡಿಕೊಂಡು ಬಂಡಿಯಮುಂದೆ ರೈತರು ಎತ್ತುಗಳನ್ನು ಮಜಲಿಗೆ ಬಿಟ್ಟು ಮಂಗಲವಾದ್ಯದೊಂದಿಗೆ ಶಿಶುನಾಳಕ್ಕೆ ತೆರಳುತ್ತಿದ್ದಾರೆ. ಈ ಪರಂಪರೆ ಸುಮಾರು 100 ವಸಂತಗಳನ್ನು ಕಂಡಿದೆ.

ಬಂಡಿಯನ್ನು ಭಜನಾ ಸಂಘದ ಯುವಕರು ನಿರ್ಮಿಸುತ್ತಾರೆ. ಬಂಡಿ ಹಿಂದೆ ರೊಟ್ಟಿ ಚಕ್ಕಡಿಯೂ ತೆರಳುತ್ತದೆ. ಜಾತ್ರೆಯಲ್ಲಿ ಹಸಿದು ಬಂದ ಜನಕ್ಕೆ ರೊಟ್ಟಿ, ಖಾರದ ಚಟ್ನಿ ನೀಡಿ ಸಂತೃಪ್ತಿ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT