ಬುಧವಾರ, ಡಿಸೆಂಬರ್ 11, 2019
20 °C
ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ವತಿಯಿಂದ ಪ್ರತಿಭಟನೆ

ಖಾಸಗಿಯವರಿಂದ ಸಮವಸ್ತ್ರ ಖರೀದಿಗೆ ನೇಕಾರರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ನಿಗಮವು ನೇಕಾರರು ತಯಾರಿಸಿದ ಬಟ್ಟೆಯನ್ನು ಶಿಕ್ಷಣ ಇಲಾಖೆಗೆ ಖರೀದಿ ಮಾಡುವುದು ಬಿಟ್ಟು ಖಾಸಗಿಯವರಿಂದ ₹ 60 ಕೋಟಿ ಮೊತ್ತದ ಬಟ್ಟೆ ಖರೀದಿಸುವ ಮೂಲಕ ನೂರಾರು ಕುಟುಂಬಗಳ ಕೆಲಸವನ್ನು ಕಸಿದುಕೊಂಡಿದೆ ಎಂದು ಟೀಕಿಸಿ ನೂರಾರು ನೇಕಾರರು ಪ್ರತಿಭಟನೆ ನಡೆಸಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಕರ್ನಾಟಕ ಕೈಮಗ್ಗ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಸದಸ್ಯರು, ನೇಕಾರರ ಹಿತಾಸಕ್ತಿಯನ್ನು ಕಾಯಬೇಕಾದ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಮ್ಮ ಹಿತಾಸಕ್ತಿಯನ್ನು ಕಡೆಗಣಿಸಿ ಖಾಸಗಿಯವರಿಂದ ಖರೀದಿಸಿದ್ದಾರೆ. ಹೀಗಾಗಿ ಅವರನ್ನು ತಕ್ಷಣ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ‘ಸರ್ಕಾರವು ನೇಕಾರರನ್ನು ಅಸಡ್ಡೆಯಿಂದ ಕಾಣುತ್ತಿದೆ. ನೇಕಾರರ ಹಿತಾಸಕ್ತಿಯನ್ನು ಕಾಯಲು ರಚನೆಯಾದ ಕೈಮಗ್ಗ ಅಭಿವೃದ್ಧಿ ನಿಗಮವು ನೇಕಾರರಿಗೆ ಕೆಲಸ ಕೊಟ್ಟಿಲ್ಲ. ಇದಕ್ಕಾಗಿ ನಾಚಿಕೆ ಪಟ್ಟುಕೊಳ್ಳಬೇಕು. ದಿನಗಳು ಕಳೆದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಂಥದರಲ್ಲಿ ಶಿಕ್ಷಣ ಇಲಾಖೆಯು ಮಕ್ಕಳಿಗೆ ವಿತರಿಸಬೇಕಾದ ಸಮವಸ್ತ್ರದ ಬಟ್ಟೆಯನ್ನು ಖಾಸಗಿ ಸಂಸ್ಥೆಗಳಿಂದ ಖರೀದಿ ಮಾಡಿದೆ. ಆ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೆದಿದೆ. ಒಂದು ಕುಟುಂಬ ಬದುಕಬೇಕು ಎಂದರೆ ನಿತ್ಯ ₹ 300 ಖರ್ಚಾಗುತ್ತದೆ. ನೇಕಾರಿಕೆ ನಂಬಿದವರು ಇಷ್ಟು ಹಣವನ್ನು ಗಳಿಸಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ನಿಗಮದ ಅದಕ್ಷತೆ ಹಾಗೂ ನಿಷ್ಕಾಳಜಿಯೇ ಕಾರಣ’ ಎಂದು ಜರಿದರು.

‘ನೇಕಾರರಿಗೆ ನಿರಂತರವಾಗಿ ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಪೂರೈಸಬೇಕು. ಗುಣ ನಿಯಂತ್ರಣದ ಹೆಸರಿನಲ್ಲಿ ವಿನಾಕಾರಣ ನೇಕಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಆರು ತಿಂಗಳಿನಿಂದ ನೇಕಾರರಿಗೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಾಟನ್‌ ಹಾಗೂ ಸೂಟಿಂಗ್ಸ್‌ ಮಗ್ಗಗಳನ್ನು ಬಂದ್‌ ಮಾಡಲಾಗಿದ್ದು, ಇದರಿಂದ 1500 ಮಗ್ಗಗಳು ನಿಂತುಹೋಗಿವೆ. ನೇಕಾರರ ಕುಟುಂಬಗಳ ಹಿತರಕ್ಷಣೆಗಾಗಿ ಮಗ್ಗಗಳನ್ನು ತಕ್ಷಣ ಪ್ರಾರಂಭಿಸಬೇಕು. ನೇಕಾರರಿಗೆ ಶೇ 50ರಷ್ಟು ಮಜೂರಿಯನ್ನು ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಜೆ. ಮಾಳವದೆ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಗಣಮುಖಿ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಬನ್ನಿಗಿಡದ, ಫಕ್ಕೀರಪ್ಪ ಗರಗದ, ತೇಜಪ್ಪ ಹೊನ್ನಳ್ಳಿ, ಅನ್ನಪೂರ್ಣಾ ಕೋಪರ್ಡೆ, ಜನ್ನತಬಿ ಮುದಗಲ್‌ ಸೇರಿದಂತೆ ಬೆಳಗಾವಿ, ರಾಮದುರ್ಗ, ರಬಕವಿ–ಬನಹಟ್ಟಿ, ಗದಗ, ಕೊಪ್ಪಳ, ಧಾರವಾಡ ಜಿಲ್ಲೆಯ ನೂರಾರು ನೇಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು