ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ: ಸಚಿವ ರೇವಣ್ಣ

7
ಸರ್ಕಿಟ್‌ ಹೌಸ್‌ ಆವರಣದಲ್ಲಿ ನೂತನ ಅತಿಥಿ ಗೃಹ ಉದ್ಘಾಟನೆ

ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ: ಸಚಿವ ರೇವಣ್ಣ

Published:
Updated:

ಹುಬ್ಬಳ್ಳಿ: ‘ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿದೆ. ಈಗಾಗಲೇ ಹಲವು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಇಲ್ಲಿನ ದೇಶಪಾಂಡೆ ನಗರದ ಸರ್ಕಿಟ್‌ ಹೌಸ್‌ ಆವರಣದಲ್ಲಿ ಬುಧವಾರ ನೂತನ ಅತಿಥಿ ಗೃಹ ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ₹ 3330 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದೇನೆ. ಇಲ್ಲಿಯವರೆಗೆ ಸಚಿವರಾಗಿದ್ದ ಯಾರೂ ಇಷ್ಟು ಹಣ ಕೊಟ್ಟಿರಲಿಲ್ಲ. ತಡಸ ಕ್ರಾಸ್‌ನಿಂದ ಧಾರವಾಡದವರೆಗಿನ 30 ಕಿ.ಮೀ. ನೈಸ್‌ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಶೀಘ್ರವೇ ಟೆಂಡರ್‌ ಕರೆಯಲಾಗುವುದು. ಪ್ರತಿ ಕಿ.ಮೀ.ಗೆ 15 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿ ಹೊಂದಲಿದೆ’ ಎಂದು ಅವರು ತಿಳಿಸಿದರು.

‘ಬೆಂಗಳೂರು ನಂತರ ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿಗೆ ನಾವು ಹೆಚ್ಚು ಪ್ರಾಧಾನ್ಯತೆ ನೀಡುತ್ತೇವೆ. ಕಿತ್ತೂರು ಚನ್ನಮ್ಮ ವೃತ್ತದ ಸುತ್ತಲೂ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ನೀಡಲು ಮುಂದಾಗಿದ್ದು, ಅದಕ್ಕಾಗಿ ರಾಜ್ಯದ ಒಪ್ಪಿಗೆಯನ್ನು ಕೇಂದ್ರಕ್ಕೆ ಕಳೆದ ವಾರವಷ್ಟೇ ಕಳಿಸಿಕೊಡಲಾಗಿದೆ’ ಎಂದು ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕಕ್ಕೆ ಯಾವ ಯಾವ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಬಳಿಕ ಆ ಕಚೇರಿಗಳು ಇತ್ತ ಬರಲಿವೆ’ ಎಂದರು.

‘ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌)ಯಿಂದ ₹ 500 ಬಿಡುಗಡೆಯಾಗಿದೆ. ನಾವು ₹ 5 ಸಾವಿರ ಕೋಟಿ ಕೇಳಿದ್ದೆವು. ಉಳಿದ ₹ 4500 ಕೋಟಿ ಹಣವನ್ನು ಸಾಲವಾಗಿ ಕೊಟ್ಟರೂ ನಾವು ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ಈ ಸಂಬಂಧ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ‍’ ಎಂದು ಹೇಳಿದರು.

ಜೋಶಿ, ಶೆಟ್ಟರ್‌ ಹಣ ತಂದರೆ ನನಗೇಕೆ ಹೊಟ್ಟೆ ಉರಿ?: ಸಂಸದ ಪ್ರಹ್ಲಾದ ಜೋಶಿ, ಶಾಸಕ ಜಗದೀಶ ಶೆಟ್ಟರ್‌ ಅವರು ತಮ್ಮ ಸಾಮರ್ಥ್ಯದಿಂದಾಗಿ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌)ಯಡಿ ಹಣ ತಂದರೆ ನನಗೇಕೆ ಹೊಟ್ಟೆಯುರಿಯಾಗಬೇಕು ಎಂದು ಸಚಿವ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು.

ಸರ್ಕಾರದ ಮೇಲೆ ಪ್ರಭಾವ ಬೀರಿ ತಮ್ಮ ಕ್ಷೇತ್ರಗಳಿಗೆ ಹಣ ತಂದರೆ ನಮಗೂ ಖುಷಿಯಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದರು.

ಜಗದೀಶ ಶೆಟ್ಟರ್‌, ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್‌.ಕೋನರಡ್ಡಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಸುಧೀರ ಸರಾಫ, ಉಪಮೇಯರ್‌ ಮೇನಕಾ ಹುರಳಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !