ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ಬೇಂದ್ರೆ ಸಾಧನಕೇರಿ ಈಗ ಹೊಲಸು ಮೇಲೋಗರ

ಕೋಟ್ಯಂತರ ವೆಚ್ಚ ಕೊಳಚೆಯಲ್ಲಿ ತೊಳೆದಂತೆ
Last Updated 10 ಫೆಬ್ರುವರಿ 2020, 4:16 IST
ಅಕ್ಷರ ಗಾತ್ರ
ADVERTISEMENT
""

ಬಾರೋ ಸಾಧನಕೇರಿಗೆ...

ಇದು ವರಕವಿ ದ.ರಾ. ಬೇಂದ್ರೆ ಅವರ ಕರೆ. ಸಾಧನಕೆರೆಯೊಂದಿಗೆ ಅವರ ನಂಟು, ಸುತ್ತಾಟದ ಆನಂದದಿಂದಲೇ ಅವರು ಬಾರೋ ನಿನ್ನೂರಿಗೆ ಎಂದು ಕರೆದಿದ್ದು. ಆದರೆ, ಸಾಧನಕೆರೆಯನ್ನು ನೋಡಲು ಬನ್ನಿ ಎಂದು ಯಾರೂ ಕರೆಯದ ಸ್ಥಿತಿ ನಿರ್ಮಾಣವಾಗಿದೆ. ಈಗ, ಬಾರೋ ಸಾಧನಕೇರಿಗೆ ಎಂದು ಹೇಳಲು ಯಾರಿಗೂ ಮನಸ್ಸಾಗುತ್ತಿಲ್ಲ. ಏಕೆಂದರೆ, ಸಾಧನಕೇರಿ ಅಥವಾ ಸಾಧನಕೆರೆ ಇದೀಗ ಹೊಲಸಿನ ಆಗರ.

ದ.ರಾ. ಬೇಂದ್ರೆಯವರ ಮನೆಯ ಮುಂದೆಯೇ ಇರುವ ಸಾಧನಕೆರೆ ಅವರ ಸಾಹಿತ್ಯಕ್ಕೆ ಸಾಕಷ್ಟು ಸ್ಫೂರ್ತಿ. ಕೆರೆಯ ದಂಡೆಯ ಮೇಲೆ ಕುಳಿತು, ಅಂಗಳದಲ್ಲಿ ನಡೆದಾಡುತ್ತಾ ಪ್ರಕೃತಿ ಸೌಂದರ್ಯ ಸವಿದಿದ್ದರು ಬೇಂದ್ರೆ ಅಜ್ಜ. ಅವರ ಕಾರಣದಿಂದಲೇ ಸಾಧನಕೆರೆಗೆ ವಿಶೇಷ ಮೆರುಗು. ಅದರ ಸಲುವಾಗಿಯೇ ಈ ಕೆರೆಯನ್ನು ಪ್ರವಾಸೋದ್ಯಮ ಇಲಾಖೆ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಹಲವು ಕೋಟಿಗಳನ್ನು ವೆಚ್ಚ ಮಾಡಿ ಅಭಿವೃದ್ಧಿಪಡಿಸಿವೆ. ಆದರೆ, ಕೋಟಿಗಳೆಲ್ಲ ಒಳಚರಂಡಿ ಹೊಲಸಿನಲ್ಲಿ ಕರಗಿಹೋಗಿವೆ. ಒಂದು ಕಾಲದಲ್ಲಿ ಅತ್ಯದ್ಭುತವಾಗಿ ಅಭಿವೃದ್ಧಿಗೊಂಡು ಪ್ರವಾಸಿ ತಾಣವಾಗಿದ್ದ ಸಾಧನಕೆರೆ, ಇದೀಗ ನಿರ್ವಹಣೆ ಇಲ್ಲದೆ ಸೊರಗಿಹೋಗಿದೆ. ಇದ್ದ ಸೌಲಭ್ಯಗಳೆಲ್ಲ ನೆಲಕಚ್ಚಿವೆ. ಆದರೂ ಈ ಕೆರೆ ಅಂಗಳಕ್ಕೆ ಹೋಗಲು ಪಾಲಿಕೆ ಪ್ರವೇಶ ಶುಲ್ಕ ಪಡೆಯುತ್ತಿದೆ.

ಸಾದೂನ ಕೆರೆ ಎಂದು ಕರೆಯಲಾಗುತ್ತಿದ್ದ ಸಾಧನಕೆರೆ / ಸಾಧನಕೇರಿ, ದೊಡ್ಡನಾಯಕನ ಕೊಪ್ಪದ ಸರ್ವೆ ನಂ.52ರಲ್ಲಿ 9 ಎಕರೆ ಪ್ರದೇಶದಲ್ಲಿದೆ. 2010ರ ನಂತರ ಈ ಕೆರೆಯ ಪುನರುಜ್ಜೀವನ ಕೆಲಸ ಆಗಿಲ್ಲ. ಹೀಗಾಗಿ ಕೋಟ್ಯಂತರ ವೆಚ್ಚ ಮಾಡಿ ಅಭಿವೃದ್ಧಿಗೊಳಿಸಲಾಗಿದ್ದ ‘ಬೇಂದ್ರೆ ಉದ್ಯಾನ’ದ ಸೌಲಭ್ಯಗಳು ನೆಲಸಮವಾಗಿವೆ. ಮತ್ತೆ ಕೋಟ್ಯಂತರ ವೆಚ್ಚ ಮಾಡಲು ಜಿಲ್ಲಾಡಳಿತ, ಪಾಲಿಕೆ ನಿರ್ಧಾರ ಮಾಡಿದೆ. ಆದರೆ, ಇದರ ಅನುಷ್ಠಾನ ಎಂದು, ಎಂಬುದೇ ಪ್ರಶ್ನೆ.

ದೊಡ್ಡನಾಯಕನ ಕೊಪ್ಪದಲ್ಲಿ ಮತ್ತೊಂದು ಕೆರೆ ಇದೆ. ಕೆಲಗೇರಿ ರಸ್ತೆಯಲ್ಲಿ ಸಾಯಿಬಾಬಾ ದೇವಸ್ಥಾನ ಬಳಿ ವಿನಾಯಕನಗರ, ಚೈತನ್ಯ ನಗರದ ವಸತಿ ಪ್ರದೇಶಗಳ ನಡುವೆ ಎರಡನೇ ಕೆರೆ ಇದೆ. ಈ ಕೆರೆ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ. ಒಳಚರಂಡಿ ನೀರು ಹರಿಯುತ್ತಿದ್ದು, ಗೃಹತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದೆ. ಈ ಕೆರೆ ಪುನರುಜ್ಜೀವನಗೊಂಡರೆ ವಸತಿ ಪ್ರದೇಶಕ್ಕೆ ಮೆರುಗು ಬರುವುದಲ್ಲಿ ಸಂದೇಹವಿಲ್ಲ.

ನಗರದ ಜಂಜಾಟದಿಂದ ತುಸು ಹೊರಗಿರುವ ಹೊಸಕಟ್ಟಿ ಕೆರೆ ಅತ್ಯಂತ ವಿಸ್ತಾರವಾಗಿದ್ದು, ಬೆಟ್ಟಗುಡ್ಡಗಳ ಅಚ್ಚುಕಟ್ಟು ಪ್ರದೇಶದಿಂದ ಕಂಗೊಳಿಸುತ್ತದೆ. ಹೊಸಕಟ್ಟಿ ಕೆರೆ ಎಂದರೆ ಎಲ್ಲರಿಗೂ ಅರಿವಾಗುವುದಿಲ್ಲ, ಸೋಮೇಶ್ವರ ಕೆರೆ ಎಂಬುದು ಜನಜನಿತ. ಸೋಮೇಶ್ವರ ದೇವಸ್ಥಾನ ಇಲ್ಲಿರುವುದರಿಂದ ಕೆರೆಯನ್ನು ದೇವಸ್ಥಾನದ ಹೆಸರಿನಿಂದಲೇ ಕರೆಯಲಾಗುತ್ತದೆ. ಈ ಕೆರೆ ಮೂರು ಮೀಟರ್‌ನಷ್ಟು ಆಳಹೊಂದಿದ್ದು, ಮಹಿಳೆಯರು ಇಲ್ಲಿ ಬಟ್ಟೆ ಒಗೆಯುತ್ತಾರೆ. ಜಾನುವಾರುಗಳು ನೀರು ಕುಡಿಯುತ್ತವೆ. ಆದರೆ, ಗೃಹತ್ಯಾಜ್ಯ, ಒಳಚರಂಡಿ ನೀರು ಕೆರೆ ಅಂಗಳವನ್ನು ಆವರಿಸಿಕೊಂಡಿದೆ. ಕಟ್ಟಡತ್ಯಾಜ್ಯ ಇಲ್ಲಿ ರಾಶಿ–ರಾಶಿಯಾಗಿ ಸುರಿಯಲಾಗಿದೆ, ಸುರಿಯಲಾಗುತ್ತಿದೆ. ಸೋಮೇಶ್ವರ ದೇವಸ್ಥಾನದ ತಪ್ಪಲಿನಲ್ಲಿರುವ ಈ ಕೆರೆಯನ್ನು ಅತ್ಯಂತ ದೊಡ್ಡ ಪ್ರವಾಸಿ ತಾಣವನ್ನಾಗಿಸುವ ಎಲ್ಲ ಅವಕಾಶವೂ ಇದೆ.

ಸಾಧನಕೆರೆ ಅಭಿವೃದ್ಧಿ ಮಾತಿನಲ್ಲಷ್ಟೇ ಇದೆ!
‘ನಮ್ಮ ಅಜ್ಜನವರ ಪ್ರೀತಿಯ ಕೆರೆ ಸಾಧನಕೆರೆ. ನಾವು ನೋಡುತ್ತಿದ್ದಾಗ ಇದು ಪಾರ್ಕ್‌ ಆಗಿರಲಿಲ್ಲ. ಕೆರಿ ಅಷ್ಟೇ ಆಗಿತ್ತು. ಸುತ್ತಲೂ ಹಸಿರ ಪರಿಸರವಿತ್ತು. ಸಾಧನಕೆರೆಗೂ ಕೆಲಗೇರಿ ಕೆರೆಗೂ ಸಂಪರ್ಕ ಇತ್ತು. ನೀರಿನ ಹರಿವು ಇದ್ದಿದ್ದರಿಂದ ಕಾಯಂ ನೀರು ಛಲೋ ಇರ್ತಿತ್ತು. ಈಗ ಎರಡೂ ಕೆರೆಯ ಸಂಪರ್ಕವನ್ನು ಕಟ್‌ಆಫ್‌ ಮಾಡಿಕೊಂಡಾರ. ಈಗ ಅವರಿಗೆ ಏನು ಬೇಕೋ ಅದನ್ನು ಮಾಡಿಕೊಂಡಿದ್ದಾರೆ. ಈಗ ಡ್ರೈನೇಜ್ ನೀರು ಬಿಟ್ಟಿದ್ದಾರೆ. ಮೊದಲಿದ್ದಷ್ಟು ಆಹ್ಲಾದಕರ ವಾತಾವರಣ ಈಗಿಲ್ಲ. ಮೊದಲು ಬೇಕಾದಷ್ಟು ಪಕ್ಷಿಗಳು ಬರುತ್ತಿದ್ದವು. ಭಾಳ ಚೆನ್ನಾಗಿತ್ತು. ಈಗಂತೂ ಭಾಳ ಕೆಟ್ಟೋಗಿದೆ. ನೋಡೂದೇ ಬ್ಯಾಡಾಗದೆ. ಅದಕ್ಕೇನೂ ಮಾಡೋದಿಲ್ಲ. ಬಂದೋರೆಲ್ಲ ಹೇಳುತ್ತಾರೆ. ಕ್ಲೀನ್‌ ಮಾಡೋದಿಲ್ಲ, ಮೆನ್ಟೈನನ್ಸ್ ಇಲ್ಲ. ಮೊದಲು ಒಂದು ವರ್ಷ ಪ್ರವಾಸೋದ್ಯಮದವರು ಕೆರೆಯ ನಿರ್ವಹಣೆ ಮಾಡುತ್ತಿದ್ದರು. ಆಗ ಚೆನ್ನಾಗಿತ್ತು. ಅದು ಚೇಂಜ್‌ಓವರ್‌ ಆದಮೇಲೆ ದುರವಸ್ಥೆ ಆಗೇದ’ ಎನ್ನುತ್ತಾರೆ ಬೇಂದ್ರೆಯವರ ಮೊಮ್ಮಗಳು ಪುನರ್ವಸು ಪಾಂಡುರಂಗ ಬೇಂದ್ರೆ.

‘ನಾವು ಚಿಕ್ಕವರಿದ್ದಾಗ ಇಲ್ಲಿಗೆ ಬಂದಾಗ ಸಾಧನಕೆರೆ, ಕೆಲಗೇರಿ ಕೆರೆಗಳನ್ನು ನೋಡಿದ್ದೇವೆ. ಮಳೆಗಾಲದಲ್ಲಿ ಅಲ್ಲ, ಯಾವಾಗಲೂ ನೀರು ತುಂಬಿರುತ್ತಲೇ ಇತ್ತು. ಸಾಧನಕೆರೆಯಲ್ಲಿ ಎರಡು ಬಾರಿಯಷ್ಟೇ ನೀರು ಕಡಿಮೆಯಾಗಿತ್ತು. ಈಗ ಆಗಾಗ್ಗೆ ಅಭಿವೃದ್ಧಿ ಮಾಡುತ್ತೇವೆ ಎಂದು ಅಧಿಕಾರಿಗಳು ಬಂದು ಹೋಗುತ್ತಾರೆ. ಆದರೆ ಏನೂ ಆಗುತ್ತಿಲ್ಲ’ ಎಂದರು.

ದ.ರಾ. ಬೇಂದ್ರೆಯವರ ಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT