ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಧಾರವಾಡ | ನೀರಿನ ಅಭಾವ ಇಲ್ಲ; ಪೂರೈಕೆ ಸವಾಲು

ಅವಳಿನಗರದ ವೇಗಕ್ಕೆ ಅನುಗುಣವಾಗಿ ಜಲಸಂಗ್ರಹಗಾರ ನಿರ್ಮಾಣ ನಡೆದಿಲ್ಲ
Last Updated 8 ಜೂನ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದ ನೀರು ಪೂರೈಕೆ ವ್ಯವಸ್ಥೆಯು ‘ಕೈಯಲ್ಲಿ ಬೆಣ್ಣೆ ಇದೆ; ತುಪ್ಪ ಸಿಗುತ್ತಿಲ್ಲ’ ಎನ್ನುವಂತಿದೆ. ಮೂರ್ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ನೀರಿನ ಕೊರತೆ ಇಲ್ಲ. ಆದರೆ ಪೂರೈಕೆ ಮಾತ್ರ ಸಮರ್ಪಕವಾಗಿಲ್ಲ.

ಹುಬ್ಬಳ್ಳಿ– ಧಾರವಾಡದ ಜನ ಸಂಖ್ಯೆಗೆ ಅನುಗುಣವಾಗಿ, ನಿತ್ಯ 250 ಎಂಎಲ್‌ಡಿ ನೀರು ಅವಶ್ಯಕತೆ ಇದೆ. ಅವಳಿ ನಗರಕ್ಕೆ ಅಗತ್ಯವಿರುವಷ್ಟು ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ನೀರು ಲಭ್ಯ ಇದೆ. ಆದರೆ, ಅದನ್ನು ಜನರಿಗೆ ತಲು‍ಪಿಸುವ ವ್ಯವಸ್ಥೆ ಇಲ್ಲ ಎನ್ನುವುದನ್ನು ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿ
ಗಳೇ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ.

ಸದ್ಯ ಮಲಪ್ರಭಾ ಹಾಗೂ ನೀರಸಾಗರದಿಂದ ಮಹಾನಗರಕ್ಕೆ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಂದ ನಗರಕ್ಕೆ ನೀರು ಪೂರೈಕೆ ಮಾಡಿಕೊಳ್ಳಲು ಕಾಲ ಕಾಲಕ್ಕೆ ಅನುಗುಣವಾಗಿ ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ, ನಗರ‌ದಲ್ಲಿ ಇಂದಿಗೂ ನೀರಿನ ಬವಣೆ ತಪ್ಪಿಲ್ಲ.

ನೀರಿದೆ, ಪೂರೈಕೆ ಆಗುತ್ತಿಲ್ಲ: ನೀರು ಪೂರೈಕೆ ಸಮಸ್ಯೆಗೆ ವ್ಯವಸ್ಥೆಯಲ್ಲಿನ ಲೋಪವೇ ಕಾರಣವಾಗಿದೆ. ಸದ್ಯ ಎಲ್‌ ಆ್ಯಂಡ್‌ ಟಿ ಸಂಸ್ಥೆಯೂ ಪಾಲಿಕೆ ವ್ಯಾಪ್ತಿಯಲ್ಲಿ 24x7 ನೀರು ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲು ಕನಿಷ್ಠ ಎರಡರಿಂದ ಮೂರು ವರ್ಷಗಳಾಗುವ ಸಾಧ್ಯತೆ ಇದೆ.

24x7 ನೀರು ಪೂರೈಕೆ ಯೋಜನೆಯನ್ನು ಅವಳಿ ನಗರದಲ್ಲಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ರೂಪಿಸಿಕೊಳ್ಳಲಾಗಿತ್ತು.ಇದೀಗ ಜನಸಂಖ್ಯೆಯು 13 ಲಕ್ಷ ಮೀರಿದೆ. ಹೀಗಾಗಿ, ಹೊಸ ಯೋಜನೆ ‍ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾದರೂ, ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆಗಾಗಿ ಯೋಜನೆಯನ್ನು ಮರುರೂಪಿಸುವ ಅಗತ್ಯ ಇದೆ.

ವಿದ್ಯುತ್‌ ವ್ಯತ್ಯಯವೂ ಕಾರಣ: ಸಕಾಲದಲ್ಲಿ ನೀರು ಸಿಗದಿರುವುದಕ್ಕೆ ನೀರು ಪೂರೈಕೆ ಕೇಂದ್ರದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಆಗುವ ವ್ಯತ್ಯಯವೂ ಕಾರಣವಾಗಿದೆ. ಕೇಂದ್ರದಲ್ಲಿ ಕನಿಷ್ಠ ಐದು ನಿಮಿಷ ವಿದ್ಯುತ್‌ ವ್ಯತ್ಯಾಸವಾದರೂ ನೀರು ಸರಬರಾಜು ವ್ಯವಸ್ಥೆಯಲ್ಲಿ ಹಲವು ಗಂಟೆ ವ್ಯತ್ಯಾಸವಾಗಲಿದೆ.

ಬದಲಾಗದ ವ್ಯವಸ್ಥೆ: ಸವದತ್ತಿಯ ಮಲಪ್ರಭಾ ಜಲಾಶಯದಿಂದ (ರೇಣುಕಾಸಾಗರ ಜಲಾಶಯ) ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರು ಪೂರೈಕೆ ಯೋಜನೆಯನ್ನು 2020ರ ಫೆಬ್ರುವರಿಯಲ್ಲಿ ಪೂರ್ಣಗೊಳಿಸಲಾಗಿತ್ತು. ಅಮ್ಮಿನಭಾವಿಯಲ್ಲಿ ಜಲ ಶುದ್ಧೀಕರಣ ಘಟಕ, ಪಂಪ್‌ಹೌಸ್‌ ಮತ್ತು 850 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಸೆಟ್‌ ಅಳವಡಿಕೆ ಹಾಗೂ ಸವದತ್ತಿ ಸಮೀಪದ ಮಲಪ್ರಭಾ ಜಲಾಶಯದ ಜಾಕ್‌ವೆಲ್‌ನಲ್ಲಿ 1,944 ಎಚ್‌ಪಿ ಸಾಮರ್ಥ್ಯದ ಹೊಸ ಪಂಪ್‌ಸೆಟ್‌ ಅಳವಡಿಕೆ ಮಾಡಲಾಗಿತ್ತು. ಇದರಿಂದ ನಗರಕ್ಕೆ ಸದ್ಯ ಇರುವ ಪೈಪ್‌ಲೈನ್‌ನಲ್ಲೇ 40 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆಯಾಗಲಿದ್ದು, ವಾರ್ಡ್‌ಗಳಲ್ಲಿ ಹತ್ತು ದಿನ ಹಾಗೂ ಏಳು ದಿನಕ್ಕೆ ಒಮ್ಮೆ ನೀರು ಪೂರೈಕೆ ಆಗುವ ವ್ಯವಸ್ಥೆ ತಪ್ಪಲಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇಂದಿಗೂ ವ್ಯವಸ್ಥೆ ಬದಲಾಗಿಲ್ಲ.

‘ಅವಳಿನಗರ ಅಭಿವೃದ್ಧಿಯಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ವ್ಯವಸ್ಥೆ ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲವನ್ನೂ ಹಂತ, ಹಂತವಾಗಿ ಬದಲಾಯಿಸಲಾಗುವುದು’ ಎಂದು ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT