ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ರೋಹಿಗಳ ಉತ್ಪಾದಿಸುವ ಜೆಎನ್‌ಯು

ಆರ್‌ಎಸ್‌ಎಸ್‌ನ ಪ್ರಾಂತ ಬೌದ್ಧಿಕ್ ಪ್ರಮುಖ ಕೃಷ್ಣ ಜೋಶಿ ಆತಂಕ
Last Updated 13 ಅಕ್ಟೋಬರ್ 2019, 15:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವು ವಿದ್ರೋಹಿಗಳನ್ನು ಉತ್ಪಾದಿಸುವ ಕೇಂದ್ರವಾಗಿದೆ. ಇತ್ತೀಚೆಗೆ ಬೇರೆ ವಿಶ್ವವಿದ್ಯಾಲಯಗಳಿಗೂ ಅದು ವ್ಯಾಪಿಸುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕರ್ನಾಟಕ ಉತ್ತರ ಪ್ರಾಂತ ಬೌದ್ಧಿಕ್ ಪ್ರಮುಖ ಕೃಷ್ಣ ಜೋಶಿ ಹೇಳಿದರು.

ವಿಜಯದಶಮಿ ಉತ್ಸವ ನಿಮಿತ್ತ, ನಗರದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಪ್ರಗತಿಪರರು ಎನಿಸಿಕೊಂಡವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದರು.

‘ರಾಮ, ಸೀತೆ, ಹನುಮಂತ ಸೇರಿದಂತೆ ಹಿಂದೂಗಳು ಆರಾಧಿಸುವ ದೇವರುಗಳನ್ನು ಕೆಟ್ಟದಾಗಿ ಬಿಂಬಿಸಿ ಬರೆಯಲಾಗುತ್ತಿದೆ. ರಾಷ್ಟ್ರಗೀತೆ ಹಾಡದೆ ದೇಶಕ್ಕೆ ಅಗೌರವ ತೋರುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಹಿಂದೆ ಇಂತಹ ಮಾತು ಮತ್ತು ಟೀಕೆಗಳಿಗೆ ಯಾರೂ ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಆದರೂ, ದೇಶ ಹಾಗೂ ಸಮಾಜ ಒಡೆಯುವ ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇದ್ದು, ದೇಶ ಕಟ್ಟಬೇಕಾಗಿದೆ’ ಎಂದು ಕರೆ ನೀಡಿದರು.

‘ಆರ್‌ಎಸ್‌ಎಸ್‌ ಕನಸಿನ ಭಾರತದ ಸಾಕಾರದ ಹೆಜ್ಜೆಯಾಗಿ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಕಲಂ ರದ್ದುಪಡಿಸಿದೆ. ಆ ಮೂಲಕ, ನಮ್ಮ ಶತ್ರುಗಳನ್ನು ನಾಮಾವಶೇಷಗೊಳಿಸಿದೆ. ಆದರೂ, ದೇಶದೊಳಗೆ ಅಲ್ಲಲ್ಲಿ ಉಗ್ರರಿದ್ದಾರೆ. ಅವರಿಗೆ ಆಶ್ರಯ ಕೊಡುವವರು ದೇಶದ್ರೋಹಿಗಳಾಗಿದ್ದಾರೆ’ ಎಂದರು.

60 ಸಾವಿರ ಶಾಖೆ:

‘ಜಾತಿ ಮತ್ತು ಧರ್ಮ ಮೀರಿದ ಸಾಮಾಜಿಕ ಸಾಮರಸ್ಯ, ಗೋಸಂವರ್ಧನೆ, ಗ್ರಾಮ ವಿಕಾಸ, ಕುಟುಂಬ ಪ್ರಭೋದನೆ ಹಾಗೂ ಧರ್ಮ ಜಾಗರಣೆ ಮೂಲಕ, ಹಿಂದೂ ರಾಷ್ಟ್ರದ ಪರಮ ವೈಭವವನ್ನು ಸ್ಥಾಪಿಸುವುದು ಆರ್‌ಎಸ್‌ಎಸ್‌ ಗುರಿಯಾಗಿದೆ. ಅದಕ್ಕಾಗಿ ಸಂಘವು ದೇಶದಾದ್ಯಂತ 60 ಶಾಖೆಗಳನ್ನು ಹೊಂದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಎಸ್ಪಿ ಎ.ಆರ್. ಬಡಿಗೇರ ಮಾತನಾಡಿ, ‘ಸ್ವಾಮಿ ವಿವೇಕಾನಂದ, ಕೇಶವ ಬಲಿರಾಮ್ ಹೆಗಡೇವಾರ್, ಗೋಳ್ವಾಲ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹಿಂದೂಗಳನ್ನು ಸಂಘಟಿಸುತ್ತಿರುವ ಆರ್‌ಎಸ್‌ಎಸ್‌, ಬಲಿಷ್ಠ ದೇಶ ಕಟ್ಟುವ ಕನಸು ಹೊಂದಿದೆ’ ಎಂದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಸಂಘಚಾಲಕ ಶಿವಾನಂದ ಆವಟಿ ವೇದಿಕೆ ಮೇಲಿದ್ದರು. ಪಥ ಸಂಚಲನ ಸಾಗಿದ ಮಾರ್ಗದಲ್ಲಿ ರಂಗೋಲಿ ಬಿಡಿಸಿದ್ದ ಸಾರ್ವಜನಿಕರು, ಹೂ ಎರಚಿ ಸ್ವಾಗತ ಕೋರಿದರು. ರಸ್ತೆಯುದ್ದಕ್ಕೂ ಭಗವಾಧ್ವಜ ಹಾಗೂ ಮಹಾಪುರುಷರ ಚಿತ್ರಗಳು ಎದ್ದು ಕಾಣುತ್ತಿದ್ದವು. ಗಣಧಾರಿಗಳ ದೈಹಿಕ ಕಸರತ್ತು ಮತ್ತು ಯೋಗ ಗಮನ ಸೆಳೆಯಿತು.

ಗಮನ ಸೆಳೆದ ಜೋಶಿ, ಶೆಟ್ಟರ್

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಬಿಳಿ ಶರ್ಟ್ ಹಾಗೂ ಖಾಕಿ ಪ್ಯಾಂಟ್ ಧರಿಸಿ ಗಣಧಾರಿಯಾಗಿ ಪಥ ಸಂಚಲನದಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ನಂತರ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪಾಲ್ಗೊಂಡರು.

ಕಮಿಷನರ್ ನೇತೃತ್ವದಲ್ಲಿ ಬಂದೋಬಸ್ತ್‌: ಆರ್‌ಎಸ್‌ಎಸ್‌ ಪಥ ಸಂಚಲನ ನಿಗದಿಯಾಗಿದ್ದ ರಸ್ತೆಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಹಾಕಿ, ವಾಹನಗಳು ಸೇರಿದಂತೆ ಜನರು ಕೂಡ ಓಡಾಡದಂತೆ ತಡೆದು ಅನುವು ಮಾಡಿಕೊಟ್ಟರು. ಪೊಲೀಸ್ ಕಮಿಷನರ್ ಆರ್. ದಿಲೀಪ್ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ, ಬಂದೋಬಸ್ತ್‌ ನೇತೃತ್ವ ವಹಿಸಿದ್ದರು. ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ, ಪಥ ಸಂಚಲನ ಮಾರ್ಗದುದ್ದಕ್ಕೂ ಪೊಲೀಸರು ದಂಡನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT