ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಸಂಕ್ರಾಂತಿ ಸಂಭ್ರಮಕ್ಕೆ ಖಾದಿಮೇಳದ ಸುಗ್ಗಿ...

ಖಾದಿ ಮೇಳ
Last Updated 8 ಜನವರಿ 2019, 19:46 IST
ಅಕ್ಷರ ಗಾತ್ರ

ಅಲ್ಲಿ ಎಲ್ಲಿ ನೋಡಿದರಲ್ಲಿಯೂ ತರಹೇವಾರಿ ಬಣ್ಣಬಣ್ಣದ ಬಟ್ಟೆಗಳು.ಗೃಹೋಪಯೋಗಿ ವಸ್ತುಗಳು, ನಾಲಿಗೆಯ ರುಚಿ ಹೆಚ್ಚಿಸುವ ಚಿಗಳೆ, ರಾಷ್ಟ್ರಧ್ವಜಗಳು, ಉಪ್ಪಿನಕಾಯಿ, ಕಟ್ಟಿಗೆಯಿಂದ ಮಾಡಿದ ಆಕರ್ಷಕ ಆಟದ ಸಾಮಗ್ರಿಗಳು.

ಈ ಎಲ್ಲ ಚಿತ್ರಣ ಕಂಡು ಬಂದಿದ್ದು ಹುಬ್ಬಳ್ಳಿಯ ಇಂದಿರಾ ಗ್ಲಾಸ್‌ ಹೌಸ್‌ನಲ್ಲಿ. ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜಂಟಿಯಾಗಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಈ ಎಲ್ಲ ವಸ್ತುಗಳು ಇವೆ.

ಜ.13ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆ ತನಕ ಮೇಳ ನಡೆಯುತ್ತದೆ. ಧಾರವಾಡ, ಹಾವೇರಿ, ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ವ್ಯಾಪಾರಸ್ಥರು ಬಂದಿದ್ದಾರೆ. ಒಟ್ಟು 36 ಮಳಿಗೆಗಳಿದ್ದು, ಇದರಲ್ಲಿ ಹತ್ತು ಖಾದಿ ಸಂಸ್ಥೆಗಳ ಮಳಿಗೆಗಳೇ ಇವೆ. ಸ್ವದೇಶಿ ಉತ್ಪನ್ನಗಳು ಅಧಿಕವಾಗಿವೆ.

ಆಧುನಿಕವಾಗಿ ಕಾಲ ಎಷ್ಟೇ ಮುಂದುವರೆದಿದ್ದರೂ, ಖಾದಿಗೆ ಸಾಕಷ್ಟು ಬೇಡಿಕೆಯಿದೆ. ಶಾಲಾ, ಕಾಲೇಜುಗಳ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಖಾದಿ ಉತ್ಪನ್ನಗಳ ಬಟ್ಟೆ ಧರಿಸುವುದು ಹೊಸ ಟ್ರೆಂಡ್‌ ಆಗಿದೆ. ಇದರಿಂದ ಗ್ರಾಮೋದ್ಯೋಗ ಸಂಘಗಳಿಗೆ ಅನುಕೂಲವಾಗಿದೆ. ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಪ್ರತಿ ವರ್ಷ ಮೇಳ ನಡೆಯುತ್ತದೆ.

ರೆಡಿಮೇಡ್‌ ಅಂಗಿಗಳು, ಬಟ್ಟೆಗಳು, ನೆಹರೂ ಪೈಜಾಮ, ಮೋದಿ ಜಾಕೆಟ್‌, ಕುರ್ತಾ, ಟವಲ್‌, ಲುಂಗಿ, ಜಮ್ಖಾನ, ವಿವಿಧ ಅಳತೆಯ ರಾಷ್ಟ್ರಧ್ವಜಗಳು, ಚರಕ, ಸೀರೆಗಳು, ಜೇನುತುಪ್ಪ, ಉಪ್ಪಿನಕಾಯಿ, ಸ್ಯಾಂಡಲ್‌ ಸೋಪ್‌, ಗವ್ಯ ಸ್ನಾನ ಸಾಬೂನು, ಮೈಸೂರಿನ ರೇಷ್ಮೆ ಸೀರೆ ಹೀಗೆ ಅನೇಕ ವಸ್ತುಗಳು ಜನರನ್ನು ಆಕರ್ಷಿಸುತ್ತಿವೆ. ಮೇಳ ಉದ್ಘಾಟನೆಯಾದ ದಿನವೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೀರೆ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

ಉತ್ತರ ಕರ್ನಾಟಕವೇ ಮುಂದು...

ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಕಾರ್ಯಕ್ರಮದ ಅಡಿ ಕರ್ನಾಟಕದಲ್ಲಿ ಈಗ 145 ಖಾದಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕವಾಗಿ ₹ 235 ಕೋಟಿ ವಹಿವಾಟು ನಡೆಸುತ್ತಿವೆ. 2018ರಲ್ಲಿ ಹುಬ್ಬಳ್ಳಿಯ ಬೆಂಗೇರಿ
ಯಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗ ಸ್ಥಾಪನೆಯಾದ ಬಳಿಕ ಇಲ್ಲಿನ ಸಿಬ್ಬಂದಿಗೂ ಅನುಕೂಲವಾಗಿದೆ.

66 ಖಾದಿ ಮತ್ತು ಉಣ್ಣೆ ಸಂಸ್ಥೆಗಳು ಉತ್ತರ ಕರ್ನಾಟಕ ವಿಭಾಗೀಯ ಕಚೇರಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ₹ 64 ಕೋಟಿ ವೆಚ್ಚದ ಖಾದಿ ಉತ್ಪಾದನೆ ಮಾಡಿದೆ. ಇದರಿಂದ 10,750 ಜನರಿಗೆ ಉದ್ಯೋಗ ಸಿಕ್ಕಿದೆ.

ಗ್ರಾಮೋದ್ಯೋಗ ಆಯೋಗ ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಉದ್ಯೋಗಗಳನ್ನು ಕಲ್ಪಿಸಲು, ವಿಶೇಷವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ ಉದ್ಯೋಗದ ಅವಕಾಶ ಸೃಷ್ಟಿಸಲು ಖಾದಿ ಪ್ರಮುಖ ವೇದಿಕೆಯಾಗಿದೆ. ಇನ್ನೊಂದು ವಿಶೇಷವೆಂದರೆ ರಾಷ್ಟ್ರಧ್ವಜವನ್ನು ಉತ್ಪಾದನೆ ಮಾಡಲು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ ಎನ್ನುವ ಹೆಗ್ಗಳಿಕೆ ಬೆಂಗೇರಿಯ ಖಾದಿ ಕೇಂದ್ರಕ್ಕಿದೆ.

‘2016ರಲ್ಲಿ ಹರಿಯಾಣದ ಸೂರಜ್‌ಕುಂಡದಲ್ಲಿ ನಡೆದಿದ್ದ ರಾಷ್ಟ್ರೀಯ ಮಟ್ಟದ ಖಾದಿ ಮೇಳದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಖಾದಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಕಂಡುಬಂತು. ಆದ್ದರಿಂದ ರಾಷ್ಟ್ರಧ್ವಜ ತಯಾರಿಸುವ ವಿಧಾನವನ್ನು ಪ್ರಯೋಗಿಕವಾಗಿ ತೋರಿಸಲು ಪ್ರತ್ಯೇಕ ಮಳಿಗೆ ಹಾಕಿದ್ದೆವು. ದೇಸಿ ವಸ್ತುಗಳು ಹೇಗೆ ತಯಾರಾಗುತ್ತವೆ ಎನ್ನುವುದನ್ನು ನೋಡಲು ಬಹಳಷ್ಟು ಜನರಿಗೆ ಆಸಕ್ತಿ ಇರುತ್ತದೆ. ಅದೇ ರೀತಿ ಉತ್ಪನ್ನಗಳನ್ನು ಖರೀದಿಸಿದರೆ ಖಾದಿ ಸಂಸ್ಥೆಗಳು ಕೂಡ ಗಟ್ಟಿಯಾಗುತ್ತವೆ’ ಎನ್ನುತ್ತಾರೆ ಗರಗ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಅಧ್ಯಕ್ಷ ನಾಗಪ್ಪ ತಿರ್ಲಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT