ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ರಕ್ಷಣೆಗೆ ಜಿಲ್ಲಾಧಿಕಾರಿ, ಲೋಕಾಯುಕ್ತರಿಗೆ ಮನವಿ

ಪ್ರಜಾವಾಣಿ ಫಲಶ್ರುತಿ: ‘ನಮ್ ಕೆರಿ ಕಥಿ’ ಸರಣಿ ಲೇಖನ ಸಾಕ್ಷಿ
Last Updated 10 ಫೆಬ್ರುವರಿ 2020, 4:24 IST
ಅಕ್ಷರ ಗಾತ್ರ

ಧಾರವಾಡ: ‘ಪ್ರಜಾವಾಣಿ’ ಮೆಟ್ರೊ ಪುರವಣಿಯಲ್ಲಿ ಪ್ರಕಟಗೊಂಡ ‘ನಮ್ ಕೆರಿ ಕಥಿ’ ಸರಣಿ ಲೇಖನಗಳನ್ನು ಆಧರಿಸಿ ಎವಾಲ್ವ್ ಲೈವ್ಸ್ ಪ್ರತಿಷ್ಠಾನದ (ಸೋಲ್‌–ಸೇವ್‌ ಅವರ್‌ ಲೇಕ್ಸ್‌) ಸದಸ್ಯರು, ಕೆರೆಗಳನ್ನು ರಕ್ಷಿಸುವಂತೆ ಕೋರಿ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಕೆರೆಗಳ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವುದರ ಜತೆಗೆ ಅವುಗಳ ಗಡಿಯನ್ನು ಗುರುತಿಸಿ ಬೇಲಿ ಹಾಕಬೇಕು. ಕೆರೆಗಳಿಗೆ ಒಳಚರಂಡಿ ನೀರು ಹರಿಯದಂತೆ ಕ್ರಮ ಕೈಗೊಂಡು, ಪುನರುಜ್ಜೀವನಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಕೆರೆ ಸಮಿತಿಯನ್ನು ಪುನಾರಚಿಸಿ, ಅದಕ್ಕೊಬ್ಬರು ಪ್ರತ್ಯೇಕ ಮುಖ್ಯ ಎಂಜಿನಿಯರ್ ನೇಮಿಸಬೇಕು. ಪ್ರತಿ ತಿಂಗಳು ಈ ಸಮಿತಿ ಸಭೆ ಸೇರಿ, ನಾಗರಿಕರು, ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಕೆರೆಗೂ ವಾರ್ಡನ್‌ಗಳನ್ನು ನೇಮಿಸಬೇಕು’ ಎಂದು ಮನವಿ ಮಾಡಿಕೊಂಡರು.

‘ವಸತಿ, ರಸ್ತೆ, ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಕಾರಣಗಳಿಗೆ ಒತ್ತುವರಿ ನಡೆಯುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲೇ 64ಕ್ಕೂ ಅಧಿಕ ಕೆರೆಗಳು ಒತ್ತುವರಿಯಾಗಿವೆ. ಇದರಿಂದ ಪ್ರಾಣಿ–ಪಕ್ಷಿ ಹಾಗೂ ಸಸ್ಯವರ್ಗಗಳು ನಾಶವಾಗುತ್ತಿವೆ.ಈ ಎಲ್ಲಾ ಸಂಗತಿಗಳು ‘ಪ್ರಜಾವಾಣಿ’ಯ ‘ನಮ್ಮ ಕೆರಿ ಕಥಿ’ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಜೊತೆಗೆ ಜಿಲ್ಲೆಯ ಇತರ ಕೆರೆಗಳ ಒತ್ತುವರಿಯೂ ನಡೆದಿದೆ. ಹೀಗಾಗಿ ಜಿಲ್ಲೆಯ ಎಲ್ಲ ಕೆರೆಗಳ ಸದ್ಯದ ಸ್ಥಿತಿಗತಿ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ಕೆರೆ,ರಾಜಕಾಲುವೆ ವ್ಯಾಪ್ತಿಯಲ್ಲಿ ಯಾವುದೇ ಯೋಜನೆಗಳಿಗೆ ಅನುಮತಿ ನೀಡಬಾರದು. ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಪರಿಸರ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಲೋಕಾಯುಕ್ತ ಎಸ್ಪಿ ಶಿವಕುಮಾರ್‌ ಅವರನ್ನೂ ಭೇಟಿ ಮಾಡಿದ ಸದಸ್ಯರು, ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಮನವಿ ಮಾಡಿಕೊಂಡರು.

ಪ್ರತಿಷ್ಠಾನದ ಸಂಸ್ಥಾಪಕಿ ಒಟಿಲ್ಲೆ ಅನ್ಬನ್ ಕುಮಾರ್, ಮುಖ್ಯಸ್ಥ ಕಿರಣ್ ಹಿರೇಮಠ, ಸುಜಯ ಕುಮಾರ್, ನಯಾಶ್ರೀ ಭೋಸಗೆ, ಶಿವಾಜಿ ಸೂರ್ಯವಂಶಿ, ಇರ್ಷದ್ ಮುಲ್ಲಾ, ಸತೀಶ ಪೂಜಾರ, ಐಶ್ವರ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT