ಗುರುವಾರ , ನವೆಂಬರ್ 26, 2020
20 °C
ಹುಬ್ಬಳ್ಳಿ ವ್ಯಾಪ್ತಿಯಿಂದ ಹೊರಡುವ ರೈಲುಗಳಲ್ಲಿ ಜಾರಿ

ಮಹಿಳೆಯರ ಸುರಕ್ಷತೆಗೆ ‘ಮೇರಿ ಸಹೇಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಒತ್ತುಕೊಡುವ ಸಲುವಾಗಿ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ತನ್ನ ವ್ಯಾಪ್ತಿಯಿಂದ ಹೊರಡುವ ರೈಲುಗಳಲ್ಲಿ ‘ಮೇರಿ ಸಹೇಲಿ’ ಎನ್ನುವ ಸುರಕ್ಷತಾ ಯೋಜನೆ ಆರಂಭಿಸಿದೆ.

ದೀಪಾವಳಿ ಸೇರಿದಂತೆ ಮುಂದೆ ಬರುವ ಹಬ್ಬಗಳ ವೇಳೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ರೈಲುಗಳಲ್ಲಿ ಸಂಚರಿಸುತ್ತಾರೆ. ಅವರ ರಕ್ಷಣೆಗೆ ರೈಲ್ವೆ ಪೊಲೀಸ್‌ ಪಡೆಯು (ಆರ್‌ಪಿಎಫ್‌) ಮಹಿಳಾ ಸಬ್‌ ಇನ್‌ಸ್ಟೆಕ್ಟರ್‌ ಮತ್ತು ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ತಂಡದ ಸದಸ್ಯರು ರೈಲುಗಳು ಹೊರಡುವುದಕ್ಕೆ ಮೊದಲು ಎಲ್ಲ ಬೋಗಿಗಳನ್ನು ಪರಿಶೀಲಿಸಿ ಅಲ್ಲಿರುವ ಮಹಿಳಾ ಪ್ರಯಾಣಿಕರು, ಅದರಲ್ಲೂ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ಗುರುತಿಸಿ ಅವರಿಂದ ಮಾಹಿತಿ ಕಲೆ ಹಾಕುತ್ತದೆ.

ಪ್ರಯಾಣದ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹೇಗಿರಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಾರೆ. ತುರ್ತು ಸಂದರ್ಭದಲ್ಲಿ ಭದ್ರತಾ ಸಹಾಯವಾಣಿ ಸಂಖ್ಯೆ 182 ಸಂಪರ್ಕಿಸುವಂತೆ ತಿಳಿಸುತ್ತಾರೆ. ನೈರುತ್ಯ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಆರ್.ಎಸ್. ಚೌಹಾಣ್‍ ಮತ್ತು ಆರ್‌ಪಿಎಫ್‌ನ ಮಹಾ ನಿರ್ದೇಶಕ ಡಿ.ಜಿ. ಅರುಣಕುಮಾರ ಅವರ ನಿರ್ದೇಶನದಂತೆ ಈ ಯೋಜನೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಹಿಳೆಯರಿಗೆ ಪ್ರಯಾಣದ ವೇಳೆ ತೊಂದರೆ ಎದುರಾದರೆ ಪರಿಹರಿಸಲು ಹುಬ್ಬಳ್ಳಿ ವಿಭಾಗದಲ್ಲಿ mysaheliubl@gmail.com ಅಥವಾ ಮೊಬೈಲ್‌ ಸಂಖ್ಯೆ 7022626987 ಸಂಪರ್ಕಿಸಬೇಕು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ–ವಾಸ್ಕೋಡಗಾಮ ಹಜರತ್‌ ನಿಜಾಮುದ್ದೀನ್‌ ವಿಶೇಷ ಎಕ್ಸ್‌ಪ್ರೆಸ್‌, ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್, ಹುಬ್ಬಳ್ಳಿ-ವಿಜಯವಾಡ ವಿಶೇಷ ರೈಲು ಮತ್ತು ಗದಗ–ಮುಂಬೈ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ‘ಮೇರಿ ಸಹೇಲಿ’ ಆರಂಭಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.