ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ತೊಂದರೆಯಾದರೆ ಅಧಿಕಾರಿಗಳೇ ಹೊಣೆ’

ಬರಗಾಲ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ
Last Updated 7 ಡಿಸೆಂಬರ್ 2018, 17:05 IST
ಅಕ್ಷರ ಗಾತ್ರ

ನವಲಗುಂದ: ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದ್ದು ಸರ್ಕಾರ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಜಾನುವಾರು ಹಾಗೂ ನಾಗರಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿಗೆ ತೊಂದರೆಯಾದರೆ ಅಧಿಕಾರಿಗಳನ್ನೇ ನೇರವಾಗಿ ಹೊಣೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ ‌ಬರಗಾಲ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಬೇಕಾದಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಬಹುದಾಗಿದೆ. ಪ್ರತಿ ಜಾಬ್‍ ಕಾರ್ಡ್ ಹೊಂದಿದವರಿಗೆ 150 ದಿನ ಕೆಲಸ ಕೊಟ್ಟು ಯಾರೂ ಗುಳೆ ಹೋಗದಂತೆ ನೋಡಿಕೊಳ್ಳಬೇಕು. ಹಣಕಾಸಿನ ಯಾವುದೇ ತೊಂದರೆ ಇಲ್ಲವಾದ್ದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕರಿಸಿಕೊಂಡು ಬರಗಾಲದ ಸಮಯದಲ್ಲಿ ಹೆಚ್ಚಿನ ಶ್ರಮ ವಹಿಸಬೇಕೆಂದು ಅವರು ಹೇಳಿದರು.

ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯ ಕೆರೆಗಳು ಭರ್ತಿಯಾಗಿರುವುದರಿಂದ ಮಾರ್ಚ್‌ 15ರ ವರೆಗೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯಾಧಿಕಾರಿಗಳಾದ ಎ.ಸಿ.ಮಠದ ಹಾಗೂ ಬಿ.ಸಿ.ಬಂಡವಡ್ಡರ ಸಭೆಗೆ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿರುವ 57 ಗ್ರಾಮಗಳ ಪೈಕಿ 49 ಹಳ್ಳಿಗಳ ಕೆರೆಗಳಲ್ಲಿ ನೀರು ಸಂಗ್ರಹ ಮಾಡಲಾಗಿದ್ದು ಮಾರ್ಚ್ 15 ರ ವರೆಗೆ ಯಾವುದೇ ಸಮಸ್ಯೆ ಇಲ್ಲ. ಎಂಟು ಗ್ರಾಮಗಳಲ್ಲಿ ಸಣ್ಣ ಪುಟ್ಟ ತೊಂದರೆಗಳಿದ್ದು ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ನೀರು ಸರಬರಾಜು ಅಧಿಕಾರಿ ಬಿ.ಎಚ್.ಪಾಟೀಲ ತಿಳಿಸಿದರು.

ಫೆಬ್ರುವರಿ ತಿಂಗಳವರೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ನಂತರ ಮೇವು ಬ್ಯಾಂಕ್‍ಗಳನ್ನು ತೆರೆಯಬೇಕಾಗುತ್ತದೆ ಎಂದು ಪಶು ವೈದ್ಯಾಧಿಕಾರಿ ಖ್ಯಾಡದ ಹೇಳಿದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ 17 ಕುಡಿಯುವ ನೀರಿನ ಘಟಕಗಳು ಬಂದ್‌ ಆಗಿದ್ದು ಅವುಗಳನ್ನು ಬೇಗನೆ ದುರಸ್ತಿ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಬರಗಾಲದ ಕಾಮಗಾರಿ ಕೈಗೊಳ್ಳಲು ₹50 ಲಕ್ಷದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಾಡಿಕೊಡಲಾಗಿದೆ. ಕಾಮಗಾರಿಗಳನ್ನು ಬೇಗನೆ ಪ್ರಾರಂಭಿಸಿ ಎಂದು ಸೂಚನೆ ನೀಡಿದರು.

ಮನೆಯ ಉತಾರ ಕೊಡಲು ರೈತರಿಂದ ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಮನವಿ ಮಾಡಿದಾಗ ಅಂಥವರನ್ನು ಕೆಲಸದಿಂದ ಅಮಾನತು ಮಾಡಲಾಗುವುದು ಎಂದು ದೀಪಾ ಚೋಳನ್ ಎಚ್ಚರಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿದರು.

ಹೆಸರು ಖರೀದಿಸಿದ ಹಣ ಬಂದಿಲ್ಲ. ಬೆಳೆ ವಿಮೆ ಹಣ, ಮಾಸಾಶನದ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವುದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಯೋಗಪ್ಪ ಗೋಲನಾಯ್ಕರ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರೇಣುಕಾ ಇಬ್ರಾಹಿಂಪೂರ, ವಿಜಯಲಕ್ಷ್ಮೀ ಪಾಟೀಲ, ತಹಶೀಲ್ದಾರ್ ನವೀನ ಹುಲ್ಲೂರ, ಕಾರ್ಯನಿರ್ವಾಹಕ ಅಧಿಕಾರಿ ಪವಿತ್ರಾ ಪಾಟೀಲ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT