ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರನಿಗೆ ಭಾವಪೂರ್ಣ ವಿದಾಯ

Last Updated 8 ಡಿಸೆಂಬರ್ 2018, 16:33 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ನವೋದಯ ನಗರದಲ್ಲಿರುವ, ಸಾಹಿತಿ ಮೋಹನ ನಾಗಮ್ಮನವರ ಮನೆ ಆವರಣ ಮತ್ತು ರಸ್ತೆ ಸಂಪೂರ್ಣವಾಗಿ ಅಭಿಮಾನಿಗಳಿಂದಲೇ ತುಂಬಿತ್ತು.

ಅಗಲಿದ ನೆಚ್ಚಿನ ಲೇಖಕ, ಹೋರಾಟಗಾರ, ಒಡನಾಡಿ, ಸಂಘಟಕ ಹೀಗೆ ಅವರವರ ಕ್ಷೇತ್ರದವರು ಅವರು ಕಂಡಂತೆ ನಾಗಮ್ಮನವರ ಕುರಿತು ತಮ್ಮದೇ ಮಾತುಗಳಲ್ಲಿ ಬಣ್ಣಿಸಿದರು.

ನಾಗಮ್ಮನವರ ಇದ್ದಾಗ ಅವರೊಂದಿಗೆ ಕೂತು ಹರಟಿದ ಮಾತುಗಳು, ಅವರ ಹೋರಾಟದ ಕಥೆಗಳು, ಬರೆದ ಸಾಹಿತ್ಯದ ಕೃತಿಗಳು, ನಿನ್ನೆ ಮೊನ್ನೆಯವರೆಗೂ ಅವರೊಂದಿಗೆ ನಡೆಸಿದ ಚರ್ಚೆ ಇತ್ಯಾದಿಗಳ ಕುರಿತು ಅವರ ಸ್ನೇಹಿತರು, ಅಭಿಮಾನಿಗಳು ಮೆಲುಕು ಹಾಕಿದರು. ಸಂಜೆ ನಂತರದ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡವರೂ ಅವರನ್ನು ನೆನೆದು ಕಣ್ಣೀರಾದರು.

ಎಂಥದ್ದೇ ಆರೋಗ್ಯ ಸಮಸ್ಯೆ ಇದ್ದರೂ ಸದಾ ಚಟುವಟಿಕೆ, ಸಂಘಟನಾ ಕಾರ್ಯ ಮತ್ತು ಸಾಹಿತ್ಯ ಕೃಷಿ ಬಿಟ್ಟಿರದ ನಾಗಮ್ಮನವರ ಅವರು ಸಂಘದ ಕಾರ್ಯಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದನ್ನು ಅವರ ಒಡನಾಡಿಗಳು ನೆನೆದರು. ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲೂ ಆಸಕ್ತಿ ಹೊಂದಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನೆನಪಿಸಿಕೊಂಡರು.

ಕೆಲ ವರ್ಷಗಳ ಹಿಂದೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಕಾಲು ಮುರಿತದಿಂದ ಬಳಲಿದ್ದರು. ಎರಡು ದಿನಗಳ ಹಿಂದೆ, ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಿತ್ತು.

ಶಾಸಕ ಅರವಿಂದ ಬೆಲ್ಲದ, ಚಂದ್ರಕಾಂತ ಬೆಲ್ಲದ, ತೋಂಟದ ನಿಜಗುಣಾನಂದ ಸ್ವಾಮೀಜಿ, ಮನಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು, ಸಾಹಿತಿಗಳಾದ ಡಾ.ಬಾಳಣ್ಣ ಶೀಗಿಹಳ್ಳಿ, ಕಾಂಗ್ರೆಸ್‌ನ ಸ್ವಾತಿ ಮಾಳಗಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ಮುಂದೆ ನಿಂತು ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ನಾಗಮ್ಮನವರ ಪತ್ನಿ ಚಂದ್ರಿಕಾ ಮತ್ತು ಪುತ್ರಿ ಚೈತ್ರಾ, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಶೋಕಸಾಗರದಲ್ಲಿ ಮುಳುಗಿದ್ದರು.ಸಂಜೆ ನಡೆದ ಅಂತಿಮಯಾತ್ರೆಯಲ್ಲಿ ಅವರ ಅಭಿಮಾನಿಗಳ ದೊಡ್ಡ ಪಡೆಯೇ ಪಾಲ್ಗೊಂಡಿತ್ತು. ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಜರುಗಿತು.

ನಾಗಮ್ಮನವರಿಗೆ ಲಭಿಸಿದ ಪ್ರಶಸ್ತಿಗಳು
ಸಾಹಿತಿ ಮೋಹನ ನಾಗಮ್ಮನವರ ಅವರು 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. 2010ರಲ್ಲಿ ಡಾ.ಜಗಜೀವನರಾಮ್ ಪ್ರಶಸ್ತಿ ಪುರಸ್ಕೃತರಾಗಿದ್ದು, 2017ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅವರ ಕುರಿತ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ. ರತ್ನಾಕರವರ್ಣಿ ಮುದ್ದಣ ಸ್ಮಾರಕ ಅನಾಮಿಕ ದತ್ತಿ ಪ್ರಶಸ್ತಿ, ವಾರಂಬಳ್ಳಿ ಪ್ರತಿಷ್ಠಾನದ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಪ್ರಶಸ್ತಿ, ಹು-ಧಾ ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ, ಶಾರದಾ ಶಾಲ್ಮಲಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT