ಸೋಮವಾರ, ಜುಲೈ 4, 2022
24 °C

ಹುಬ್ಬಳ್ಳಿ–ಧಾರವಾಡ ಬೈಪಾಸ್‌ನಲ್ಲಿ ಹೆಚ್ಚು ಅಪಘಾತ: 12 ವರ್ಷದಲ್ಲಿ 390 ಮಂದಿ ಸಾವು

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 12 ವರ್ಷಗಳಲ್ಲಿ 390 ಜೀವಗಳು ಬಲಿಯಾಗಿವೆ!

2009ರಿಂದ ಈವರೆಗೆ 1,200ಕ್ಕೂ ಹೆಚ್ಚು ಅಪಘಾತಗಳು ನಡೆದಿದ್ದು, ಅವುಗಳಲ್ಲಿ 320 ಗಂಭೀರ ಸ್ವರೂಪದ ಅಪಘಾತಗಳು, 850ಕ್ಕೂ ಹೆಚ್ಚು ಸಾಧಾರಣ ಅಪಘಾತಗಳು ನಡೆದಿವೆ. 1,600 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಅಪ್ಪ–ಅಮ್ಮ, ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ ಬೈಪಾಸ್‌ ರಸ್ತೆ ಉದ್ದ 29.04 ಕಿ.ಮೀ. ಮಾತ್ರ. ದ್ವಿಪಥ ಇರುವ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬರಲು ಮತ್ತು ಹೋಗಲು ಒಂದೇ ಮಾರ್ಗವಾಗಿದ್ದು, ಅನೇಕ ಅಡ್ಡ ರಸ್ತೆಗಳು, ತಗ್ಗು–ದಿಬ್ಬಗಳನ್ನು ಈ ರಸ್ತೆ ಹೊಂದಿದೆ. ಅವೈಜ್ಞಾನಿಕವಾಗಿರುವ ಈ ಕಿರಿದಾದ ರಸ್ತೆ ರಾತ್ರಿ ವೇಳೆ ಸದಾ ಅಪಾಯವನ್ನೇ ಹೊಂಚು ಹಾಕುತ್ತಿರುತ್ತದೆ.

1998ರಲ್ಲಿ ನಂದಿ ಹೈವೆ ಡೆವಲಪರ್ಸ್‌ ಲಿ. ಈ ರಸ್ತೆ ನಿರ್ಮಿಸಿ ಉಸ್ತುವಾರಿ ವಹಿಸಿಕೊಂಡಿದೆ. ಐದು ಟೋಲ್‌ ಇರುವ ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ಆಟೊ, ಟ್ರ್ಯಾಕ್ಟರ್‌ ಹಾಗೂ ಚಕ್ಕಡಿಗಳಿಗೆ ಈ ರಸ್ತೆಯಲ್ಲಿ ಪ್ರವೇಶವಿಲ್ಲ. ಆದರೆ, ಅಕ್ಕ–ಪಕ್ಕದ ನಾಲ್ಕು–ಐದು ಹಳ್ಳಿಗಳ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಟ್ರ್ಯಾಕ್ಟರ್‌, ಚಕ್ಕಡಿ ಅನಿವಾರ್ಯವಾಗಿದ್ದರಿಂದ ಹಾಗೂ ಪರ್ಯಾಯ ರಸ್ತೆ ಸೌಲಭ್ಯ ಇಲ್ಲದ್ದರಿಂದ ಅವರು ಇದೇ ಬೈಪಾಸ್‌ ರಸ್ತೆ ಬಳಸುತ್ತಾರೆ.

ನಂದಿ ಸಂಸ್ಥೆ 2000ನೇ ಇಸವಿಯಲ್ಲಿ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಕೆಲಗೇರಿಯ 14 ವರ್ಷ ಬಾಲಕ ಮಂಜುನಾಥ ಅಪಘಾತದಲ್ಲಿ ಮೃತಪಟ್ಟಿದ್ದ. ಇದು ಈ ರಸ್ತೆಯಲ್ಲಾದ ಮೊದಲ ಬಲಿ. 2016ರ ಜನವರಿಯಲ್ಲಿ ನಡೆದ ಅಪಘಾತದಲ್ಲಿ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಅವರ ಪುತ್ರ ಮತ್ತು ಸೊಸೆ ಮೃತಪಟ್ಟಿದ್ದರು. 2020ರ ಜನವರಿಯಲ್ಲಿ ಕುಂದಗೋಳದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅಪಘಾತದಲ್ಲಿ ಮೃತಪಟ್ಟಿದ್ದರು. 2019ರಲ್ಲಿ ನಡೆದ ಅಪಘಾತದಲ್ಲಿ ದಾವಣಗೆರೆಯ 11 ಮಂದಿ ಮೃತಪಟ್ಟಿದ್ದರು. ಇದೀಗ ಎಂಟು ಮಂದಿ ಮೃತಪಟ್ಟಿದ್ದಾರೆ.

ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
‘ದ್ವಿಪಥವಿದ್ದ ಈ ಹೆದ್ದಾರಿಯನ್ನು ಆರು ಪಥಗಳ ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ಎರಡೂ ಬದಿಯಲ್ಲಿ ದ್ವಿಪಥ ಸರ್ವಿಸ್‌ ರಸ್ತೆ ನಿರ್ಮಿಸಲು ₹1,200 ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೆಂಡರ್ ಪ್ರಕ್ರಿಯೆ ನಡೆದಿದೆ. ಇನ್ನಷ್ಟು ಜೀವ ಬಲಿಯಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎನ್ನುವುದು ಅವಳಿನಗರದ ಜನತೆಯ ಒತ್ತಾಯ.

ರಸ್ತೆ ವಿಸ್ತರಣೆ ಮಾಡದ ಸರ್ಕಾರಗಳೇ ಸಾವಿಗೆ ಕಾರಣ
ಧಾರವಾಡ:
‘ನಗರದ ಹೊರವಲಯದಲ್ಲಿರುವ ಪುಣೆ–ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸರ್ಕಾರಗಳು ರಸ್ತೆ ವಿಸ್ತರಣೆ ಕಾರ್ಯ ಆರಂಭಿಸದೇ ಜನರ ಸಾವು–ನೋವಿಗೆ ಕಾರಣವಾಗುತ್ತಿವೆ’ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು.

‘ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ ಜೋಶಿ ಅವರು ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ 6 ತಿಂಗಳು ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಅನೇಕರು ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸಾವಿಗೆ ಹೊಣೆ ಯಾರು?’ ಎಂದು ಮಂಗಳವಾರ ನಡೆದ ಸುದ್ದಿಗೊಷ್ಠಿಯಲ್ಲಿ ಅವರು ಪ್ರಶ್ನಿಸಿದರು.

‘ಕಳೆದ ವರ್ಷ ನಡೆದ ರಸ್ತೆ ಅಪಘಾತದಲ್ಲಿ 12 ಜನ ಸಾವನ್ನಪ್ಪಿದ್ದರು. ಆಗ ನಡೆದ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದ ನಂತರ ಜನವರಿಯಲ್ಲಿ ಭೂಮಿ ಪೂಜೆ ಸಲ್ಲಿಸಿದ್ದರು. ಆದರೆ, 6 ತಿಂಗಳು ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಚುನಾವಣೆ ಮಾಡಲು, ಟೆಂಡರ್ ಕರೆಯಲು ಹಾಗೂ ರಾಜಕಾರಣಕ್ಕೆ ಹಾತೊರೆಯುವ ಜನಪ್ರತಿನಿಧಿಗಳು ಕಾಮಗಾರಿ ಆರಂಭಕ್ಕೆ ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದಕ್ಕೆ ಡಿಪಿಆರ್ ತಿದ್ದುಪಡಿ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಮಂತ್ರಿಗಳು, ಸ್ಥಳೀಯ ಜನಪ್ರತಿನಿಧಿಗಳು ₹1250 ಕೋಟಿಯ ಈ ಕಾಮಗಾರಿಯಲ್ಲಿ ಪರ್ಸಂಟೇಜ್ ಹಂಚಿಕೊಳ್ಳಲು ಚರ್ಚೆ ನಡೆಸಿದ್ದೆ ವಿಳಂಬಕ್ಕೆ ಕಾರಣವಾಗಿದೆ’ ಎಂದು ಗಂಭೀರವಾಗಿ ಆರೋಪಿಸಿದರು.

‘ಜಿಲ್ಲೆಯಲ್ಲಿ ರಸ್ತೆಗಳ ಸುರಕ್ಷತೆ ಇಲ್ಲದಿರುವುದರಿಂದ ಕಳೆದ ನಾಲ್ಕೈದು ದಿನಗಳಲ್ಲಿ ಹಳಿಯಾಳ ರಸ್ತೆ, ನವಲಗುಂದ ಹಾಗೂ ಬೈಪಾಸ್ ರಸ್ತೆಯಲ್ಲಿ ಒಟ್ಟು 22 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದಕ್ಕೆಲ್ಲ ಸರ್ಕಾರವೇ ಕಾರಣ. ಕಾಮಗಾರಿ ಆರಂಭಕ್ಕೆ ಇನ್ನೂ 6 ತಿಂಗಳಾಗಲಿದೆ ಎಂಬ ಮಾಹಿತಿ ಇದೆ. ಇನ್ನೂ ಒಂದು ವಾರದಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.

ಈ ವೇಳೆ ರಾಜು ಹರಪ್ಪನಹಳ್ಳಿ, ಎಸ್.ಎ. ಪವಾರ ಇದ್ದರು.

ಓದಿ... ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: 8 ಸಾವು, 27 ಮಂದಿಗೆ ಗಾಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು