ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ನಿರ್ವಹಣೆ ಪಾಲಿಕೆಗಾಗಲಿ ಮಾದರಿ

ರಾಯನಾಳ, ತಾರಿಹಾಳ, ಗೋಕುಲಕ್ಕೆ ಬೇಕು ರಕ್ಷಣೆ
Last Updated 10 ಫೆಬ್ರುವರಿ 2020, 4:00 IST
ಅಕ್ಷರ ಗಾತ್ರ

ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಪಾಲಿಕೆ ಸೇರಿದರೂ ಇನ್ನೂ ಗ್ರಾಮೀಣ ಸೊಗಡನ್ನೇ ಉಳಿಸಿಕೊಂಡಿರುವ ಹಳ್ಳಿಗಳಲ್ಲೂ ಕೆರೆಗಳ ಮಾಲಿನ್ಯಕ್ಕೆ ಕಡಿವಾಣ ಇಲ್ಲದಂತಾಗಿದೆ. ಈ ಪ್ರದೇಶಗಳಲ್ಲೂ ಕೆರೆಯ ನೀರನ್ನು ಈಗ ಬಟ್ಟೆ ಹೊಗೆಯಲು ಸಹ ಬಳಸದಿರುವುದರಿಂದ ಅವುಗಳ ಬಗ್ಗೆ ಕಾಳಜಿ ಕಡಿಮೆಯಾಗಿದ್ದು, ಕೊಳಚೆಗೆ ತಾಣವಾಗುತ್ತಿವೆ.

ಹುಬ್ಬಳ್ಳಿಯ ಗೋಕುಲ, ತಾರಿಹಾಳದಲ್ಲಿರುವ ಕೆರೆಗಳ ಸ್ಥಿತಿ ಮಲಿನದ ಜೊತೆಗೆ ಒತ್ತುವರಿಯಲ್ಲೂ ಮುಂದಿವೆ. ಇನ್ನು ಛಬ್ಬಿ ಹೋಬಳಿಯಲ್ಲಿರುವ ರಾಯನಾಳದ ಆರು ಕೆರೆಗಳು ಮೂರು ಅಸ್ತಿತ್ವವನ್ನೇ ಕಳೆದುಕೊಂಡಿರುವುದು ಭೂದಾಹಕ್ಕೆ ಹಿಡಿದ ಕನ್ನಡಿ. ಆದರೆ, ಪಕ್ಕದಲ್ಲೇ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯನಾಳ ಊರಮುಂದಿನ ಕೆರೆ ಸಮೃದ್ಧವಾಗಿರುವುದು ಇಚ್ಛಾಶಕ್ತಿಯ ಅನಾವರಣವಾಗಿದೆ.

ಹುಬ್ಬಳ್ಳಿಯ ಗೋಕುಲದಲ್ಲಿ ಎರಡು ಕೆರೆಗಳಿವೆ. ಗೋಕುಲ ರಸ್ತೆಯಲ್ಲಿ ಸಾಗಿದರೆ ಬೆಟ್ಟ ಹತ್ತಿ ಇಳಿದರೆ ಸ್ಯಾಂಡ್‌ಬಾಕ್ಸ್‌ ಎದುರು ಭಾಗದ ಆಳದಲ್ಲಿ ದೊಡ್ಡ ನೀರಿನ ಸಂಗ್ರಹ ಕಾಣುತ್ತದೆ. ಅದುವೇ ಗೋಕುಲ ಕೆರೆ–1. ಇದಕ್ಕೆ ಚಿನ್ನದ ಕೆರೆ ಎಂದೂ ಕರೆಯಲಾಗುತ್ತದೆ. ಗೋಕುಲ ಗಾಂಧಿನಗರದಲ್ಲಿರುವ ಕೆರೆಯ ಸುತ್ತಲೂ ಹೊಸ ಬಡಾವಣೆ ನಿರ್ಮಾಣವಾಗಿದ್ದರೂ, ಕಟ್ಟಡಗಳು ಬಂದಿಲ್ಲ. ಹೀಗಾಗಿ ಒಳಚರಂಡಿ ಹೊಲಸಿನ ಭೀತಿ ಇನ್ನೂ ಈ ಕೆರೆಗೆ ಆವರಿಸಿಲ್ಲ. ರಸ್ತೆ, ದೇವಸ್ಥಾನ ನಿರ್ಮಾಣಕ್ಕೆ ಕೆರೆ ಶೇ 6.5ರಷ್ಟು ಪ್ರದೇಶ ಒತ್ತುವರಿಯಾಗಿದೆ. ಕೆರೆಯ ಮೇಲ್ಭಾಗದಲ್ಲಿ ಇದೀಗ ಪಾಲಿಕೆಯ ಹೊಸ ಸ್ಮಶಾನ ಬಂದಿದೆ. ಅಲ್ಲಿನ ತ್ಯಾಜ್ಯಕ್ಕೆ ಈ ಕೆರೆಯೇ ತಾಣವಾಗುತ್ತಿದೆ. ಇನ್ನು ವಿಮಾನ ನಿಲ್ದಾಣ ದ್ವಾರ ಎದುರು ಭಾಗದಲ್ಲಿರುವ ಗೋಕುಲ ಮುಖ್ಯ ರಸ್ತೆಯಲ್ಲಿ ಸಾಗಿದರೆ ಸಿಗುವುದೇ ಗೋಕುಲ ಚಿಕ್ಕ ಕೆರೆ ಅಥವಾ ಕುಡಿ ಕೆರೆ. ಈ ಹಿಂದೆ ಕುಡಿಯುವ ನೀರಿಗಾಗಿ ಈ ಕೆರೆಯನ್ನು ಬಳಸುತ್ತಿದ್ದರಿಂದ ಇದಕ್ಕೆ ಕುಡಿ ಕೆರೆ ಎಂದೂ ಕರೆಯಲಾಗುತ್ತಿತ್ತು. ಈ ಕೆರೆಗೆ ಸದ್ಯಕ್ಕಂತೂ ಒತ್ತುವರಿಯ ಸಮಸ್ಯೆ ಇಲ್ಲ. ಆದರೆ, ಬೃಹತ್‌ ಕಟ್ಟಡಗಳೂ ಇನ್ನೂ ಕೆರೆಯಿಂದ ದೂರವೇ ಇವೆ. ಹೀಗಾಗಿ ಕಲ್ಮಶವೂ ಇಲ್ಲ. ಗೋಕುಲದ ಎರಡೂ ಕೆರೆಗೆ ಮಳೆನೀರು ಹರಿದು ಸರಾಗವಾಗಿ ಹರಿದುಬರುತ್ತದೆ. ಏಕೆಂದರೆ ಕೆರೆಯ ಸುತ್ತಮುತ್ತಲ ಪ್ರದೇಶ ಎತ್ತರದಲ್ಲಿದೆ. ನಗರೀಕರಣದ ದಾಹದಲ್ಲಿ ನಾಶವಾಗುವ ಮುನ್ನ ಈ ಎರಡೂ ಕೆರೆಗಳನ್ನು ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿಪಡಿಸಬಹುದಾಗಿದೆ.

ತಾರಿಹಾಳ ಎಂದರೆ ಕೈಗಾರಿಕೆ ಪ್ರದೇಶ ಎಂದೇ ಭಾವನೆ. ಆದರೆ, ತಾರಿಹಾಳ ಗ್ರಾಮದೊಳಗಿರುವ ಕಲ್ಲಪ್ಪ ಅಜ್ಜಪ್ಪನ ಕೆರೆ ಬಗ್ಗೆ ಎಲ್ಲೂ ಮಾತಿಲ್ಲ. ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ಕೆರೆಯ ಶೇ 60ರಷ್ಟು ಭಾಗವನ್ನು ರಸ್ತೆ, ಕೃಷಿ ಹಾಗೂ ಮನೆಗಳಿಗಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇಷ್ಟಿದ್ದರೂ ಗಣಪತಿ ವಿಸರ್ಜನೆಗೆ ಈ ಕೆರೆಯೇ ಬೇಕು. ಈ ಕೆರೆಯಲ್ಲಿ ನೂರಾರು ಹಾವುಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಸುತ್ತಲಿನ ಕಟ್ಟಡಗಳ ಒಳಚರಂಡಿ ನೀರು ಹರಿಯುತ್ತದೆ. ಮಳೆ ನೀರು ಹೆಚ್ಚಾಗಿ ಕೆರೆಗೆ ಹರಿಯದಂತೆ ತಡೆಯನ್ನೂ ಹಾಕಿದ್ದಾರೆ. ಏಕೆಂದರೆ ಇದರಿಂದ ಒತ್ತುವರಿ ಮಾಡಿಕೊಂಡವರಲ್ಲಿಗೆ ನೀರು ಹರಿಯುತ್ತದೆ ಎಂಬ ಆತಂಕ.

ಛಬ್ಬಿ ಹೋಬಳಿಯ ಲೋಹಿಯಾನಗರದಲ್ಲಿರುವ ರಾಯನಾಳದ ಕೆರೆ ಅತಿದೊಡ್ಡದಾಗಿದ್ದು, ಒತ್ತುವರಿಯಿಂದ ಹೊರತಾಗಿದೆ ಎಂಬುದು ಸಂತಸದ ವಿಚಾರ. ಕುಷ್ಠರೋಗ ಆಸ್ಪತ್ರೆ ಸಮೀಪ ಇರುವುದರಿಂದ ಇದನ್ನು ಕುಷ್ಠರೋಗಿ ಕೆರೆ ಎಂದೂ ಕರೆಯಲಾಗುತ್ತದೆ. ಸುತ್ತಲು ಅಚ್ಚುಕಟ್ಟು ಪ್ರದೇಶವಿರುವುದರಿಂದ ಮಳೆ ನೀರ ಸಂಗ್ರಹಕ್ಕೆ ತಡೆಯಿಲ್ಲ. ಆದರೆ, ಮನೆತ್ಯಾಜ್ಯ, ಕಟ್ಟಡ ತ್ಯಾಜ್ಯದ್ದೇ ಕೆರೆ ಅಂಗಳಕ್ಕೆ ಕಂಟಕ. ಇನ್ನು ಕುಂಟೆ–1 ಹಾಗೂ 2 ವೆಂಕಟೇಶನಗರದಲ್ಲಿ ಕಟ್ಟಡವಾಗಿವೆ; ರಾಯನಾಳ ಅರಣ್ಯ ನರ್ಸರಿ ಸಮೀಪ ನಿರ್ಮಾಣವಾಗಿರುವ ಹೊಸ ಬಡಾವಣೆಗೆ (ಸಾಯಿ ಎಂಜಿನಿಯರಿಂಗ್‌ ವರ್ಕ್ಸ್‌ ಬಳಿ) ಕುಂಟೆ–3 ಆಹುತಿಯಾಗಿದೆ. ಕುಂಟೆ–5 ಅರಣ್ಯ ನರ್ಸರಿ ಸಮೀಪ ಬಡಾವಣೆ ಒಳಗೆ ಇದ್ದರೂ, ಈ ಬಾರಿಯ ಭಾರಿ ಮಳೆಯಿಂದ ನೀರಿನ ಸಂಗ್ರಹ ಹೊಂದಿದೆ. ರಾಯನಾಳದ ಊರೊಳಗೆ ಹೋಗುವ ಮುನ್ನ ಸಿಗುವ ಹೆದ್ದಾರಿ ಬಳಿ ಕುಂಟೆ–4 ಇದ್ದು, ಸುತ್ತಲೂ ಯಾವುದೇ ಕಟ್ಟಡ ಅಭಿವೃದ್ಧಿ ಇರದಿರುವುದರಿಂದ ನೀರಿನ ಸಂಗ್ರಹ ಹೊಂದಿದೆ. ಈ ನೀರು ವಾಹನ ತೊಳೆಯಲು ಸಹಾಯಕವಾಗಿದೆ. ಇದರ ಮುಂದೆ ಹೋದರೆ, ರೇವಣಸಿದ್ಧೇಶ್ವರ ದೇವಸ್ಥಾನ ಬಳಿ ರಾಯನಾಳ ಊರ ಕೆರೆ ಸಿಗುತ್ತದೆ. ಗ್ರಾಮ ಪಂಚಾಯಿತಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದು, ಕೆರೆಯಲ್ಲಿ ಕಲ್ಮಶವಿಲ್ಲ. ಜಾನುವಾರುಗಳಿಗೆ ನೀರು, ಬಟ್ಟೆ ಒಗೆಯಲು ನೀರು ಇಲ್ಲಿಂದಲೇ ಸಿಗುತ್ತದೆ. ಗ್ರಾಮಪಂಚಾಯಿತಿಯ ಈ ನಿರ್ವಹಣೆ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಮಾದರಿಯಾದರೆ, ಹಲವು ಕೆರೆಗಳು ಮರುಜೀವ ಪಡೆಯುತ್ತವೆ.

ಮಳೆನೀರು ಕಾಲುವೆಗಳು ಮಾಯ

ರಿಮೋಟ್‌ ಸೆನ್ಸಿಂಗ್‌ ಮತ್ತು ಜಿಐಎಸ್‌ ತಂತ್ರಜ್ಞಾನದ ಮೂಲಕ ಹೈಡ್ರೊಲಾಜಿಕಲ್‌ ಅಧ್ಯಯನವನ್ನು ನಡೆಸಿರುವ ಎಂಪ್ರಿ, ಹಿಂದಿನ ಹಾಗೂ ಈಗಿರುವ ಕಾಲುವೆಗಳ ರೂಪುರೇಷೆಯನ್ನು ದಾಖಲಿಸಿದೆ. ಈ ಸಮೀಕ್ಷೆ ಪ್ರಕಾರ, ಪ್ರಮುಖ ಕಾಲುವೆಗಳು ಈಗಿಲ್ಲ. ಮುಖ್ಯ ಕಾಲುವೆಗಳನ್ನೆಲ್ಲ (ರಾಜಕಾಲುವೆ) ಒಳಚರಂಡಿ ಕಾಲುವೆಗಳನ್ನಾಡಿ ಮಾರ್ಪಡಿಸಲಾಗಿದೆ. ಇದರಿಂದ ಜಲಮೂಲಗಳಿಗೆ ಹರಿವು ಇಲ್ಲದಂತಾಗಿದೆ. ಕೆಲವು ಕಾಲುವೆಗಳನ್ನು ಗಾಮನಗಟ್ಟಿ ಪ್ರದೇಶದಲ್ಲಿ ಒತ್ತುವರಿ ಮಾಡಲಾಗಿದ್ದು, ಇವುಗಳ ಮೇಲೆ ವಸತಿ ಬಡಾವಣೆ ಹಾಗೂ ತಾರಿಹಾಳ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸಲಾಗಿದೆ. ನವಲೂರ ಕೆರೆ ಹಾಗೂ ಉಣಕಲ್‌ ಕೆರೆಯ ಸಮೀಪ ಕಾಲುವೆಗಳ ಸಂಪರ್ಕ ಕಡಿತವಾಗಿದೆ.ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಕಾಲುವೆಗಳು ಎರಡು ದಿಕ್ಕಿನಲ್ಲಿ ಹರಿಯುತ್ತವೆ. ಈ ಕಾಲುವೆಗಳ ಆಧಾರದಲ್ಲೇ ಕೆರೆಗಳು ಒಳಹರಿವನ್ನು ಹೊಂದಿವೆ. ಆದರೆ ಬಹುತೇಕ ಕೆರೆಗಳಿಗೆ ಈ ಮಳೆನೀರಿನ ಕಾಲುವೆಗಳ ಸಂಪರ್ಕವೇ ಇಲ್ಲದಂತೆ ಆ ಪ್ರದೇಶವೆಲ್ಲ ಒತ್ತುವರಿಯಾಗಿದೆ. ಜೊತೆಗೆ, ಈ ಮಳೆನೀರಿನ ಕಾಲುವೆಗಳು ಈಗ ಒಳಚರಂಡಿ ಕಾಲುವೆಗಳಾಗಿ ಹೊಲಸು ತುಂಬಿಕೊಂಡು ಹರಿಯುತ್ತಿವೆ.

ಪಶ್ಚಿಮಕ್ಕೆ ಹರಿಯುವ ಕಾಲುವೆಗಳು ಅರಬ್ಬಿ ಸಮುದ್ರಕ್ಕೆ

ಹುಬ್ಬಳ್ಳಿಯ ಪಶ್ಚಿಮ ಭಾಗವು ಗಂಗವಲ್ಲಿ (ಬೇಡ್ತಿ) ನದಿಯ ಜಲಾನಯನ ಪ್ರದೇಶದಲ್ಲಿದೆ. ಪಶ್ಚಿಮದಿಂದ ಹರಿಯುವ ನದಿಗಳಾದ ತಾಪಿಯಿಂದ ತಾದ್ರಿ ಅಚ್ಚುಕಟ್ಟು ಪ್ರದೇಶದಲ್ಲಿ ವಸಿಷ್ಠಿ ಉಪ-ಜಲಾನಯನ ಪ್ರದೇಶವು ಹಂದರದ ಪ್ರಕಾರದ ಒಳಚರಂಡಿಯಾಗಿದೆ. ಬೇಡ್ತಿ ಹಳ್ಳ ಹುಬ್ಬಳ್ಳಿಯನ್ನು ಹಳೇ ಮತ್ತು ಹೊಸ ಹುಬ್ಬಳ್ಳಿ ಎಂದು ವಿಂಗಡಿಸುತ್ತದೆ. ಬೇಡ್ತಿ ಹಳ್ಳ ಹುಬ್ಬಳ್ಳಿಯ ವಾಯವ್ಯ ದಿಕ್ಕಿನಿಂದ ನೈರುತ್ಯಕ್ಕೆ 35.4 ಕಿ.ಮೀ ಹರಿಯುತ್ತದೆ. ಪಶ್ಚಿಮದಲ್ಲಿ ಬೆಟ್ಟಗಳು ಹಾಗೂ ಪೂರ್ವದಲ್ಲಿ ಗುಡ್ಡಗಾಡುಗಳಲ್ಲಿ ಹರಿಯುತ್ತದೆ. ಶಾಲ್ಮಲಾ ಹಳ್ಳ ತನ್ನ ಮೂಲದಿಂದ 19 ಕಿ.ಮೀ ಹರಿದು, ಹುಬ್ಬಳ್ಳಿ–ಧಾರವಾಡದ ಪೂರ್ವಭಾಗದಲ್ಲಿ ಬೇಡ್ತಿ ನದಿಗೆ ಸೇರಿಕೊಳ್ಳುತ್ತದೆ. ಶಾಲ್ಮಲಾ ಹಳ್ಳ ತನ್ನ ಮೂಲ ಸ್ಮರೂಪವನ್ನು ಕಳೆದುಕೊಂಡಿದ್ದು, ಕವಲುಗಳಾಗಿ ಮಾರ್ಪಟ್ಟಿದೆ. ಉಣಕಲ್‌ ಹಳ್ಳ ಹುಬ್ಬಳ್ಳಿಯ ಪ್ರಮುಖ ಕಣಿವೆಯಾಗಿದ್ದು, ಇದು ಗಂಗವಲ್ಲಿ ನದಿಯನ್ನು ಸೇರಿಕೊಳ್ಳುತ್ತದೆ.

ಪೂರ್ವಕ್ಕೆ ಹರಿಯುವ ಕಾಲುವೆಗಳು ಬಂಗಾಳ ಕೊಲ್ಲಿಗೆ

ಎಚ್‌ಡಿಎಂಸಿ ಪ್ರದೇಶದ ಧಾರವಾಡದ ಪೂರ್ವ ಭಾಗವು ಕೃಷ್ಣಾ ಮೇಲ್ದಂಡೆ ಉಪ-ಜಲಾನಯನ ಪ್ರದೇಶದ ವಸಿಷ್ಠಿ ಉಪ-ಜಲಾನಯನ ಪ್ರದೇಶವಾದ ಮಲಪ್ರಭಾ ನದಿ ಜಲಾನಯನ ಪ್ರದೇಶದಲ್ಲಿದೆ. ಹುಬ್ಬಳ್ಳಿ–ಧಾರವಾಡ ನಗರಗಳ ಮಧ್ಯೆ ಹುಟ್ಟುವ ದೊಡ್ಡ ಹಳ್ಳ, ಪೂರ್ವದ ಕಡೆಗೆ ಹರಿಯುತ್ತದೆ. ಚೌಲ ಹಳ್ಳ, ಕೂಡಿಹಳ್ಳ ಮತ್ತು ಇತರೆ ದೀರ್ಘಕಾಲದಲ್ಲಿ ಹರಿಯದ ಕಾಲುವೆಗಳು ಪೂರ್ವಕ್ಕೆ ಹರಿದು, ಕೃಷ್ಣಾ ನದಿ ಜಲಾಯನಯ ಪ್ರದೇಶದ ಮಲಪ್ರಭಾಗೆ ಸೇರಿಕೊಳ್ಳುತ್ತವೆ.

ಎಚ್‌ಡಿಎಂಸಿ ಪ್ರದೇಶದಲ್ಲಿರುವ ದೀರ್ಘಕಾಲ ಹರಿಯದ ಎಲ್ಲ ಕಾಲುವೆಗಳು ತಮ್ಮ ಗುಣಲಕ್ಷಣಗಳನ್ನು ಕಳೆದುಕೊಂಡಿದ್ದು, ಅವುಗಳೆಲ್ಲ ಸಂಸ್ಕರಿಸದ ಒಳಚರಂಡಿ ನೀರು ಹರಿಯುವ ತಾಣಗಳಾಗಿವೆ. ಹೀಗಾಗಿಯೇ, ಈ ಪ್ರದೇಶದಲ್ಲಿರುವ ಸಣ್ಣ ಜಲಮೂಲಗಳೆಲ್ಲ ನಾಶ ಹೊಂದುತ್ತಿದ್ದು, ದೊಡ್ಡ ಕೆರೆಗಳು ಮಲಿನಗೊಂಡಿವೆ. ಉಣಕಲ್‌ ಹಾಗೂ ಕೆಲಗೇರಿಯಂತಹ ದೊಡ್ಡ ಕೆರೆಗಳ ಕಾಲುವೆಗಳು ನಿತ್ಯ ಹರಿವು (ಒಳಚರಂಡಿ ನೀರು) ಹೊಂದಿದ್ದರೆ, ಸಣ್ಣ ಜಲಮೂಲಗಳ ಕಾಲುವೆಗಳು ಮಳೆಗಾಲಕ್ಕೆ ಮಾತ್ರ ಸೀಮಿತ. ಹುಬ್ಬಳ್ಳಿ–ಧಾರವಾಡ ನಗರದ ಕೆರೆಗಳು ಜಲವಿಜ್ಞಾನದ ಸರಪಳಿಯನ್ನು ನಿರ್ಮಿಸುತ್ತವೆ. ಮಳೆಗಾಲದಲ್ಲಿ ಈ ಕಾಲುವೆಗಳು ಉತ್ತರಿಂದ ಆಗ್ನೇಯ ಹಾಗೂ ನೈರುತ್ಯಕ್ಕೆ ನೈಸರ್ಗಿಕವಾಗಿ ಹರಿಯುತ್ತವೆ. ಮೇಲ್ಭಾಗದಲ್ಲಿರುವ ಕೆರೆಗಳು ತುಂಬಿಕೊಂಡ ನಂತರ ಕೆಳಭಾಗದತ್ತ ಹರಿಯುವ ವ್ಯವಸ್ಥೆ ಇದೆ. ಇವು ಪ್ರವಾಹ ನಿಯಂತ್ರಕವಾಗಿಯೂ ಕಾರ್ಯನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT