ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಹಾ ಕೊಲೆ‌ ಪ್ರಕರಣ | ಪೊಲೀಸ್ ಕಮಿಷನರ್ ಅಮಾನತು ಮಾಡಿ: ತಂದೆ ನಿರಂಜನಯ್ಯ ಹಿರೇಮಠ

Published 22 ಏಪ್ರಿಲ್ 2024, 11:04 IST
Last Updated 22 ಏಪ್ರಿಲ್ 2024, 11:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಮಗಳ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸದೆ, ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸ್ ಕಮಿಷನರ್ ಅವರನ್ನು ಅಮಾನತು ಮಾಡಬೇಕು' ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಗ್ರಹಿಸಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪೊಲೀಸ್ ಕಮಿಷನರ್ ಅವರಿಂದ ನ್ಯಾಯ ಸಿಗುವಂಥ ಯಾವುದೇ ಭರವಸೆ ಇರಲಿಲ್ಲ. ಮಗಳನ್ನು ಚಾಕು ಇರಿದು ಕೊಲೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳು ಇದ್ದವು. ಅದನ್ನು ಆಧರಿಸಿ ಎನ್‌ಕೌಂಟರ್ ಮಾಡಬೇಕಿತ್ತು. ಅದನ್ನು ಬಿಟ್ಟು ತನಿಖೆ ಮಾಡುತ್ತಿದ್ದೇವೆ ಎಂದು ಹೇಳುತ್ತಾ , ಉಳಿದ ಆರೋಪಿಗಳನ್ನು ರಾಜಾರೋಷವಾಗಿ ಅಡ್ಡಾಡಲು ಬಿಟ್ಟಿದ್ದಾರೆ. ಇಂಥ ಪೊಲೀಸ್ ಕಮಿಷನರ್ ನಮ್ಮ ನಗರಕ್ಕೆ ಬೇಡ. ಅವರನ್ನು ಅಮಾನತು ಮಾಡಬೇಕು, ಇಲ್ಲವೇ ವರ್ಗಾವಣೆ ಮಾಡಬೇಕು. ಆ ಸ್ಥಾನಕ್ಕೆ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು' ಎಂದು ಒತ್ತಾಯಿಸಿದರು.

'ಕೆಲವು ರಾಜ್ಯಗಳಲ್ಲಿ ಇಂಥ ಆರೋಪಿಗಳನ್ನು ಮುಖ್ಯಮಂತ್ರಿಗಳ ಆದೇಶವಿಲ್ಲದೆ, ಎನ್‌ಕೌಂಟರ್ ಮಾಡುತ್ತಾರೆ, ಗುಂಡಿಕ್ಕಿ ಕೊಲ್ಲುತ್ತಾರೆ. ಇಲ್ಲಿಯೂ ಹಾಗೆ ಮಾಡಬೇಕಿತ್ತು. ಅಂತಹ ಮಾದರಿ ಕಾನೂನು ನಮ್ಮ ರಾಜ್ಯದಲ್ಲೂ ಜಾರಿಗೆ ಬರಬೇಕು' ಎಂದರು.

'ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿಯವರು ಸಿಐಡಿಗೆ ಒಪ್ಪಿಸುವುದಾಗಿ ಹೇಳಿಕೆ ನೀಡಿದ್ದು ಸ್ವಾಗತಾರ್ಹ. ಸಿಐಡಿ ಅಧಿಕಾರಿಗಳು ಪ್ರಾಥಮಿಕ ವರದಿ ಪಡೆದು, ಹೆಚ್ಚಿನ ಮಾಹಿತಿ ಸಂಗ್ರಹಿಸಲು ನನ್ನಲ್ಲಿಗೆ ಬರುತ್ತಾರೆ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವಂತಾಗಬೇಕು' ಎಂದು ಹೇಳಿದರು.

'ಇಂದು ಮಗಳ ಐದನೇ ದಿನದ ಆರಾಧನೆ. ವೀರಶೈವ ಲಿಂಗಾಯತ ಪರಂಪರೆ ಪ್ರಕಾರ ಸಮಾಧಿಗೆ ಹಾಲು-ತುಪ್ಪ ಹಾಕಿ, ಮನೆಯಲ್ಲಿ ಅವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದೇವೆ‌. ಸಂಬಂಧಿಕರು, ಪರಿಚಯಸ್ಥರು, ಸ್ನೇಹಿತರು ಬಂದು ಅವಳ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT