ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆ ರೈತರ ಸಾಲಕ್ಕೆ ಜಮಾ ಬೇಡ

ಬ್ಯಾಂಕರ್ಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಸೂಚನೆ
Last Updated 3 ನವೆಂಬರ್ 2019, 10:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೆಳೆವಿಮೆ ಮತ್ತು ನೆರೆ ಪರಿಹಾರ ಹಣವನ್ನು ರೈತರ ಗಮನಕ್ಕೆ ತಾರದೇ ಯಾವುದೇ ಕಾರಣಕ್ಕೂ ಅವರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಬ್ಯಾಂಕ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಮುಖಂಡರ, ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಧಾರವಾಡ ಜಿಲ್ಲಾ ‘ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಶೀಲನೆ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆಯು ಸಹ ಕೈಗೆ ಬಂದಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕ್‌ ಮತ್ತು ಕೃಷಿ ಅಧಿಕಾರಿಗಳು ರೈತರ ಜೊತೆ ಸೌಜನ್ಯದಿಂದ ವರ್ತಿಸಬೇಕು’ ಎಂದರು.

‘ಬ್ಯಾಂಕ್‌ ಸೂಚನಾ ಫಲಕಗಳಲ್ಲಿ ರೈತರಿಗೆ ಲಭ್ಯವಿರುವ ಯೋಜನೆಗಳ ಮಾಹಿತಿ ಪ್ರದರ್ಶಿಸಬೇಕು. ಬೆಳೆ ಸಾಲದ ಮರು ಪಾವತಿಗಾಗಿ ರೈತರಿಗೆ ಒತ್ತಡ ಹಾಕಬಾರದು. ನೋಟಿಸ್‌ ನೀಡುವ ಬದಲು, ತಿಳಿವಳಿಕೆ ಪತ್ರ ನೀಡಬೇಕು. ಸಾಧ್ಯವಾದರೆ ಅವರ ಜೊತೆ ಚರ್ಚಿಸಿ, ಸಾಲ ಮರುಪಾವತಿ ಮಾಡಿಕೊಂಡು, ಹೊಸ ಸಾಲ ನೀಡುವ ಕುರಿತು ಭರವಸೆ ನೀಡಬೇಕು’ ಎಂದರು.

‘ಬೆಳೆವಿಮಾ ಕಂಪನಿ ಅಧಿಕಾರಿಗಳು ಜಿಲ್ಲಾ, ತಾಲ್ಲೂಕು ಮಟ್ಟದ ಕೃಷಿ ಇಲಾಖೆ ಕಚೇರಿಗಳಲ್ಲಿ ರೈತರಿಗೆ ಲಭ್ಯವಾಗಬೇಕು. ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಬೇಕು’ ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಅಬೀದ್ ಎಸ್.ಎಸ್. ಮಾತನಾಡಿ, ‘2018-19ನೇ ಸಾಲಿನಲ್ಲಿ ₹36.05 ಕೋಟಿ ಬೆಳೆ ಪರಿಹಾರವನ್ನು 58,527 ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ರಾಜ್ಯ ಸರ್ಕಾರ ನೀಡಿದ ₹11.15 ಕೋಟಿ ಪರಿಹಾರವನ್ನು 55,799 ಫಲಾನುಭವಿಗಳಿಗೆ ಹಾಗೂ ಕೇಂದ್ರ ಸರ್ಕಾರ ನೀಡಿದ ₹29.45 ಕೋಟಿ ಪರಿಹಾರವನ್ನು 1,45,726 ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ’ ಎಂದು ವಿವರಿಸಿದರು‌‌.

ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತೋಟಗಾರಿಕೆ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT