ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಉಪ್ಪಿನಬೆಟಗೇರಿಯಲ್ಲಿ ರಸ್ತೆ, ಬಸ್ ನಿಲ್ದಾಣವಿಲ್ಲದೆ ಪರದಾಟ

ಇಲ್ಲಿ ಬಯಲೇ ಶೌಚಾಲಯ; ರೋಗದ ಭೀತಿ ಎದುರಿಸುತ್ತಿರುವ ಗ್ರಾಮಸ್ಥರು
Last Updated 25 ಜನವರಿ 2023, 5:23 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ರಾಷ್ಟ್ರ ಅಭಿವೃದ್ಧಿ ಹೊಂದಿದಂತೆ ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ ಗ್ರಾಮೀಣ ಭಾಗಗಳು ಇಂದಿಗೂ ಹಲವು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಉಪ್ಪಿನಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮನಾಳ, ಹನುಮನಕೊಪ್ಪ ಹಾಗೂ ಸೈಬನಕೊಪ್ಪ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳು ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸ್ಥಳೀಯರು ಮಳೆ, ಗಾಳಿ, ಬಿಸಿಲಿನಲ್ಲಿ ನಿಲ್ಲುವಂತಾಗಿದೆ.

ಹನುಮನಾಳ ಗ್ರಾಮದ ಹೊರವಲಯದಿಂದ ಸಂಗ್ರೆಶಕೊಪ್ಪ ದಾರಿಯ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಅಲ್ಲದೇ ಕಲ್ಲೆ ಗ್ರಾಮಕ್ಕೆ ತೆರಳುವ ರಸ್ತೆ ಹಾಗೂ ಹೊಲಗಳಿಗೆ ಹೋಗುವ ದಾರಿಯ ಅಕ್ಕಪಕ್ಕ ಮುಳ್ಳು ಕಂಟಿಗಳು ಬೆಳೆದಿವೆ. ಜತೆಗೆ ತಗ್ಗು ಗುಂಡಿಗಳಿಂದ ಕೂಡಿವೆ. ವಾಹನಗಳು ಹಾಗೂ ಎತ್ತಿನಬಂಡಿಗಳು ಎದುರು ಬದುರಾದರೆ ದಾಟಿಕೊಂಡು ಹೋಗಲು ಪರದಾಡಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

‘ಇಲ್ಲಿನ ಚರಂಡಿಗಳು ತ್ಯಾಜ್ಯ, ಕೊಳಚೆ ನೀರು ತುಂಬಿ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಹಾಗೂ ಸ್ಥಳೀಯ ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ತೆರಳುವಂತಾಗಿದೆ. ಶೌಚಾಲಯ ಇಲ್ಲದವರಿಗೆ ಬಯಲೇ ಶೌಚಾಲಯವಾಗಿದೆ. ಕೆಲವು ವರ್ಷಗಳ ಹಿಂದೆ ಚಿಕೂನ್‌ಗೂನ್ಯದಿಂದ ಜನರು ಕಷ್ಟ ಎದುರಿಸಿದ್ದಾರೆ. ಇದೀಗ ಬಯಲು ಬಹಿರ್ದೆಸೆಯಿಂದಲೂ ಗ್ರಾಮದಲ್ಲಿ ಉಂಟಾಗಿರುವ ಅನೈರ್ಮಲ್ಯದಿಂದ ರೋಗದ ಭೀತಿ ಎದುರಾಗಿದೆ‘ ಎನ್ನುವುದು ಗ್ರಾಮಸ್ಥರ ಆತಂಕ.

‘ಹನುಮನಕೊಪ್ಪ ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಿಸುವುದರಿಂದ ಸರ್ಕಾರಿ ಬಸ್ಸುಗಳ ಸಂಚಾರವನ್ನು ಊರ ಅಗಸಿಯವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ಧಾರವಾಡದಿಂದ ಬರುವ ಹೆಚ್ಚುವರಿ ಬಸ್ಸುಗಳು ಉಪ್ಪಿನಬೆಟಗೇರಿ ಹೊಸ ಬಸ್ ನಿಲ್ದಾಣದವರೆಗೆ ಮಾತ್ರ ಬಂದು ಹೋಗುವುದರಿಂದ ಹನುಮನಕೊಪ್ಪ ಗ್ರಾಮದ ಪ್ರಯಾಣಿಕರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹಲವು ವರ್ಷಗಳಿಂದ ಈ ಕುರಿತು ಮನವಿ ಸಲ್ಲಿಸುತ್ತಾ ಬಂದಿದ್ದರೂ, ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥ ಶಿವಾಜಿ ಜಾಧವ ಹೇಳಿದರು.

‘ಸೈಬನಕೊಪ್ಪ ಗ್ರಾಮವು ಉಪ್ಪಿನಬೆಟಗೇರಿ ಗ್ರಾಮದಿಂದ ಸುಮಾರು ಒಂದೂವರೆ ಕಿಲೋಮಿಟರ್ ದೂರವಿದ್ದು, ಬೈಲಹೊಂಗಲಕ್ಕೆ ತೆರಳುವ ರಸ್ತೆಯ ಬಲಭಾಗದಿಂದ 200 ಮೀ. ದೂರದಲ್ಲಿದೆ. ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆಗಳು ಬಿರುಕು ಬಿಟ್ಟು ಸಂಚರಿಸಲು ಸಾಧ್ಯವಾಗದಷ್ಟು ಹಾಳಾಗಿದೆ. ಹೀಗಾಗಿ ಇಲ್ಲಿನ ಜನರು ಉಪ್ಪಿನಬೆಟಗೇರಿ ಗ್ರಾಮದ ಮೂಲಕವೇ ಸಂಚರಿಸುವಂತಾಗಿದೆ. ಈ ಕುರಿತು ಆಡಳಿತ ಗಮನ ಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT