ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಾ ಸೇರಿ ಬ್ಯಾಲೆಟ್‌ನಲ್ಲಿ 20 ಅಭ್ಯರ್ಥಿಗಳು

Last Updated 30 ಏಪ್ರಿಲ್ 2019, 16:39 IST
ಅಕ್ಷರ ಗಾತ್ರ

ಧಾರವಾಡ: ‘ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದಲ್ಲಿ ಮೂರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, 6 ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳು, 10 ಪಕ್ಷೇತರ ಅಭ್ಯರ್ಥಿಗಳು ಮತ್ತು ನೋಟಾ ಸೇರಿದಂತೆ ಒಟ್ಟು 20 ಹೆಸರುಗಳನ್ನು ಎರಡು ಬ್ಯಾಲೆಟ್ ಯಂತ್ರದಲ್ಲಿ ಅಳವಡಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

‘ಕ್ಷೇತ್ರದಲ್ಲಿ ಒಟ್ಟು 1872 ಮತಗಟ್ಟೆಗಳು ಇವೆ. ನಗರ ಪ್ರದೇಶದಲ್ಲಿ 1400 ಮತದಾರರಿಗೆ ಒಂದು ಮತಗಟ್ಟೆ, ಗ್ರಾಮೀಣ ಭಾಗದಲ್ಲಿ 1200 ಮತದಾರರಿಗೆ ಒಂದು ಮತಗಟ್ಟೆಯಂತೆ ಸ್ಥಾಪಿಸಲಾಗಿದೆ. ಇವುಗಳಿಗೆ 2208 ಕಂಟ್ರೋಲ್ ಯೂನಿಟ್‌, 2820 ವಿವಿಪ್ಯಾಟ್‌ಗಳು, 4408 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ. ಹಾಗೆಯೇ ಹೆಚ್ಚುವರಿಯಾಗಿ ಅಗತ್ಯವಿರುವ 2247 ಬ್ಯಾಲೆಟ್‌ ಯೂನಿಟ್‌, ವಿದ್ಯುನ್ಮಾನ ಮತಯಂತ್ರಗಳನ್ನು ಆಯೋಗದಿಂದ ಹಂಚಿಕೆಯಾಗಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮತದಾನಕ್ಕೆ ಅಗತ್ಯವಿರುವ ಶೇ 18ರಷ್ಟು ಬ್ಯಾಲೆಟ್ ಯೂನಿಟ್‌, ಶೇ 18ರಷ್ಟು ಕಂಟ್ರೋಲ್‌ ಯೂನಿಟ್ ಮತ್ತು ಶೇ 28ರಷ್ಟು ವಿವಿ ಪ್ಯಾಟ್‌ಗಳನ್ನು ಪ್ರಥಮ ಹಂತದ ರ‍್ಯಾಂಡಮೈಸೇಷನ್ ಮೂಲಕ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳಿಗೆ ಮರುಹಂಚಿಕೆ ಮಾಡಲಾಗಿದೆ’ ಎಂದರು.

‘ಇವುಗಳನ್ನು ಸಾಗಿಸಲು ಜಿಪಿಎಸ್‌ ಸಾಧನ ಅಳವಡಿಸಿದ 552 ವಾಹನಗಳ ವ್ಯವಸ್ಥೆ ಮಾಡಲಾಗಿದೆ. 167 ಜೀಪುಗಳು, 184 ಕೆಎಸ್‌ಆರ್‌ಟಿಸಿ ಬಸ್ಸುಗಳು, 184 ಖಾಸಗಿ ಮ್ಯಾಕ್ಸಿ ಕ್ಯಾಬ್‌ಗಳು, 21 ಇತರ ವಾಹಗಳನ್ನು ಚುನಾವಣಾ ಕರ್ತವ್ಯಕ್ಕೆ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಮತದಾನದ ನಂತರ ಎಲ್ಲಾ ಮತಯಂತ್ರಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಭದ್ರತಾ ಕೊಠಡಿಗೆ ಅಂದೇ ಸೂಕ್ತ ಭದ್ರತೆಯೊಂದಿಗೆ ತಂದು ಸೇರಿಸಲಾಗುತ್ತದೆ’ ಎಂದು ಚೋಳನ್ ಹೇಳಿದರು.

‘ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ದೂರಿಗಾಗಿ ಸ್ಥಾಪಿಸಲಾಗಿರುವ ಉಚಿತ ಸಹಾಯವಾಣಿ 1950/ 0836–1950 ಸಂಖ್ಯೆಗೆ 1231 ಕರೆಗಳು ಬಂದಿವೆ. ಇವುಗಳಲ್ಲಿ 8 ಕರೆಗಳು ಮತದಾರರ ಯಾದಿಗೆ ಸಂಬಂಧಿಸಿದ ದೂರುಗಳು, 1223 ಮಾಹಿತಿಗಾಗಿ ಬಂದ ಕರೆಗಳಾಗಿವೆ. ಸಿ–ವಿಜಿಲ್‌ ಆ್ಯಪ್‌ ಮೂಲಕ 218 ದೂರುಗಳು ಸ್ವೀಕೃತವಾಗಿವೆ. ಈ ಕುರಿತಂತೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ತುರ್ತು ದೂರು ನಿರ್ವಹಣೆಯಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ ಒಟ್ಟು 391 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇವುಗಳ ಪೈಕಿ 208 ಮತಗಟ್ಟೆಗಳಿಗೆ ಮೈಕ್ರೊ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ. 102 ಮತಗಟ್ಟೆಗಳಿಗೆ ವೆಬ್‌ ಕಾಸ್ಟಿಂಗ್‌ ನಡೆಯಲಿದೆ, 64 ಮತಗಟ್ಟೆಗಳಿಗೆ ಸಿಎಪಿಎಫ್‌ ಪೊಲೀಸ್ ಮತ್ತು 17 ಮತಗಟ್ಟೆಗಳಿಗೆ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು 3334 ಪೊಲೀಸರನ್ನು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಯೋಜಿಸಿದ್ದಾರೆ’ ಎಂದು ದೀಪಾ ಚೋಳನ್ ಹೇಳಿದರು.

‘ಲೋಕಸಭಾ ಕ್ಷೇತ್ರದಲ್ಲಿರುವ 17,25,335 ಮತದಾರರಿಗೆ ಮತದಾರರ ಚೀಟಿಹಂಚಿಕೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಶೇ 98ರಷ್ಟು ಹಂಚಿಕೆ ಕಾರ್ಯ ಪೂರ್ಣಗೊಂಡಿದೆ. 3,82,700 ಕುಟುಂಬಗಳಿಗೆ ವೋಟರ್‌ ಗೈಡ್‌ ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದು ಶೇ 95ರಷ್ಟು ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಹೊಸದಾಗಿ ನೋಂದಾಯಿತರಾದ ಒಟ್ಟು 42,172 ಮತದಾರರಿಗೆ ಗುರುತಿನ ಚೀಟಿ ಹಂಚಿಕೆ ಮಾಡಲಾಗುತ್ತಿದೆ’ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT