ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮತಬೇಟೆಯ ಬಹಿರಂಗ ಕಸರತ್ತು ಅಂತ್ಯ

Last Updated 21 ಏಪ್ರಿಲ್ 2019, 14:08 IST
ಅಕ್ಷರ ಗಾತ್ರ

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರಕ್ಕೆ ಇದೇ 23ರಂದು ಮತದಾನ ನಡೆಯಲಿದ್ದು, ಮತದಾರರ ಮನವೊಲಿಸುವ ರೋಡ್‌ ಶೋ, ಸಾರ್ವಜನಿಕ ಸಭೆ, ಸಮಾವೇಶ ಸೇರಿದಂತೆ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ 6ಕ್ಕೆ ತೆರೆ ಬಿದ್ದಿದೆ.ತಮ್ಮ ಪ್ರಚಾರಕ್ಕೆ ಅಭ್ಯರ್ಥಿಗಳಿಗೆ ಒಂದು ದಿನ ಮಾತ್ರ ಉಳಿದಿದ್ದು, ಮನೆಮನೆ ಪ್ರಚಾರ ಆರಂಭಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿಯನ್ನೂ ಒಳಗೊಂಡಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿತ್ತು. ಇತರ ಪಕ್ಷಗಳ ರಾಷ್ಟ್ರೀಯ ಮತ್ತು ನೋಂದಾಯಿತ ಪಕ್ಷಗಳ 6 ಅಭ್ಯರ್ಥಿಗಳು ಮತ್ತು 10 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಎಲ್ಲಿಯೂ ಪಕ್ಷೇತರರ ಪ್ರಚಾರ ಅಷ್ಟಾಗಿ ಜನರಿಗೆ ತಲುಪಿಲ್ಲ. ಹೀಗಾಗಿ, ಈ ಚುನಾವಣೆಯಲ್ಲಿ ಅವರು ಪರಿಣಾಮ ಬೀರುವುದಿಲ್ಲ ಎನ್ನುವುದು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ಕ್ಷೇತ್ರದ ಮಟ್ಟಿಗೆ ಜೆಡಿಎಸ್– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಮಧ್ಯೆಯೇ ನೇರ ಪೈಪೋಟಿ ನಡೆಯುತ್ತಿದೆ.ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಇದು ನಾಲ್ಕನೇ ಚುನಾವಣೆ. ಈಗಾಗಲೇ ಒಮ್ಮೆ ಸ್ಪರ್ಧಿಸಿ ಪರಾಭವಗೊಂಡಿರುವ ವಿನಯ ಕುಲಕರ್ಣಿ, ಈ ಬಾರಿ ಲೋಕಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ. ರಾಜ್ಯದಲ್ಲೇ ಅಂತಿಮವಾಗಿ ಟಿಕೆಟ್ ಘೋಷಣೆಯಾಗಿದ್ದು ವಿನಯ ಕುಲಕರ್ಣಿ ಅವರದ್ದು. ಹೀಗಾಗಿ ಕಾಲಿಗೆ ಚಕ್ಕರ ಕಟ್ಟಿಕೊಂಡು ಕ್ಷೇತ್ರದ ಉದ್ದಗಲಕ್ಕೂ ಓಡಾಡಿದರು.

ಅತ್ತ ಮೋದಿ ಹೆಸರಿನಲ್ಲಿ ಮತ ಕೇಳುತ್ತಾ, ಜತೆಗೆ ತಮ್ಮ ಸಾಧನೆಯನ್ನೂ ಹೇಳುತ್ತ ಬಿಜೆಪಿ ನಾಯಕರು ತಮ್ಮ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ. ಕೆಲವು ತಿಂಗಳ ಪೂರ್ವದಲ್ಲೇ ಆರಂಭಿಸಿದ್ದ ಪ್ರಚಾರಕಾರ್ಯವನ್ನು ಭಾನುವಾರ ಸಂಪನ್ನಗೊಳಿಸಿ, ಮನೆಮನೆ ಪ್ರಚಾರ ಆರಂಭಿಸಿದ್ದಾರೆ.

ಮೈತ್ರಿಕೂಟದ ಪರವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಹಿಂದುಳಿದವರ ಅಭಿವೃದ್ಧಿಯ ಹೆಸರಿನಲ್ಲಿ, ನಿರುದ್ಯೋಗ, ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಲಿ ಸಂಸದರ ವೈಫಲ್ಯಗಳನ್ನು ಹಾಗೂ ಸಮಸ್ಯೆಗಳನ್ನು ಜನರನ್ನು ಮುಂದಿಟ್ಟು ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಿದ್ದಾರೆ.

ತಾರಾ ಪ್ರಚಾರಕರು:

ಬಹಿರಂಗ ಪ್ರಚಾರದಲ್ಲಿ ಈ ಬಾರಿ ಕ್ಷೇತ್ರದಲ್ಲಿ ಕೆಲ ತಾರಾ ಪ್ರಚಾರಕರು ಬಂದು ಮತಯಾಚಿಸಿದರು. ಇನ್ನೂ ಕೆಲವರ ಕಾರ್ಯಕ್ರಮಗಳು ಅನಿವಾರ್ಯ ಕಾರಣಗಳಿಂದ ರದ್ದಾಯಿತು.

ಬಿಜೆಪಿ ಪರವಾಗಿ ಚುನಾವಣೆ ಘೊಷಣೆ ಆಗುವ ಮೊದಲು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಚುನಾವಣೆ ಘೋಷಣೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್, ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಪ್ರಭಾಕರ ಕೋರೆ, ನಟಿಯರಾದ ತಾರಾ ಅನೂರಾಧಾ, ಶೃತಿ, ಮಾಳವೀಕಾ ಭೇಟಿ ನೀಡಿ ಮತಯಾಚಿಸಿದರು.

ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಕೆ.ಸಿ. ವೇಣುಗೋಪಾಲ, ಎನ್.ಎಚ್.ಕೋನರಡ್ಡಿ, ಎಚ್.ಕೆ. ಪಾಟೀಲ ಮತಯಾಚಿಸಿದರು.ಉತ್ತಮ ಪ್ರಜಾಕೀಯ ಪಕ್ಷದ ಪರವಾಗಿಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಒಂದು ದಿನದ ಪ್ರಚಾರ ಕೈಗೊಂಡಿದ್ದಾರೆ.

ಈ ಬಾರಿ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳನ್ನು ಹಲವರು ವ್ಯಾಪಕವಾಗಿ ಬಳಸಿಕೊಂಡಿದ್ದಾರೆ.ಈ ತಾಣಗಳಲ್ಲೂ ಕೊನೆಯ ಅವಧಿಯ ಪ್ರಚಾರ ಬಿರುಸಿನಿಂದ ಸಾಗಿದ‌್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಕಡೆಯಿಂದ ಮೊಬೈಲ್ ಸಂದೇಶ ಮತ್ತು ಧ್ವನಿ ಮುದ್ರಿತ ಕರೆಗಳು ಮತದಾರರಿಗೆ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT