ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಂಗನವಾಡಿಯಲ್ಲೇ ಶಿಶುಪಾಲನಾ ಕೇಂದ್ರ; ಕಾರ್ಯಕರ್ತೆಯರಿಂದಲೇ ವಿರೋಧ

ಪ್ರಾಯೋಗಿಕ ಅನುಷ್ಠಾನಕ್ಕೆ ಜಿಲ್ಲೆ ಆಯ್ಕೆ, ಮೊದಲ ಹಂತದಲ್ಲಿ 10 ಕಡೆ ಜಾರಿ
Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದುಡಿಯಲು ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನು ಆರೈಕೆಗೆ ಬಿಟ್ಟುಹೋಗಲು ರಾಜ್ಯ ಸರ್ಕಾರ ಈಗಿರುವ ಅಂಗನವಾಡಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ. ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಧಾರವಾಡ ಜಿಲ್ಲೆ ಆಯ್ಕೆಯಾಗಿದೆ.

ಈಗ ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ. ಯೋಜನೆ ಜಾರಿಗೊಂಡರೆ ಅಂಗನವಾಡಿ ಕಾರ್ಯಕರ್ತೆಯರು ಎರಡು ವರ್ಷದ ಮಕ್ಕಳನ್ನೂ ನೋಡಿಕೊಳ್ಳಬೇಕಾಗುತ್ತದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,511 ಅಂಗನವಾಡಿ ಕೇಂದ್ರಗಳಿದ್ದು, 436 ಕೇಂದ್ರಗಳು ಅವಳಿ ನಗರದಲ್ಲಿವೆ. ಒಟ್ಟು 1.28 ಲಕ್ಷ ಮಕ್ಕಳು ಇದ್ದಾರೆ. ಮೊದಲ ಹಂತದಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ತಲಾ ಐದು ಅಂಗನವಾಡಿಗಳಲ್ಲಿ ಶಿಶುಪಾಲನಾ ಕೇಂದ್ರಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆಗ ಅಂಗನವಾಡಿಗಳು ಬೆಳಿಗ್ಗೆ 10 ಗಂಟೆ ಬದಲಾಗಿ 9 ಗಂಟೆಗೆ ಕಾರ್ಯಾರಂಭ ಮಾಡಬೇಕಾಗುತ್ತದೆ.

ಮಗುವಿನ ತಂದೆ ತಾಯಿ ಇಬ್ಬರೂ ದುಡಿಯಲು ಹೋಗುವವರಿದ್ದರೆ ನಗರ ಪ್ರದೇಶಗಳಲ್ಲಿ ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಬಹುತೇಕ ಪೋಷಕರು ನರ್ಸರಿ, ಕಿಂಡರ್‌ ಗಾರ್ಟನ್‌ಗಳಲ್ಲಿ ಬಿಟ್ಟು ಹೋಗುತ್ತಾರೆ. ಗ್ರಾಮೀಣ ಪ್ರದೇಶವನ್ನು ಗುರಿಯಾಗಿರಿಸಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸರ್ಕಾರ ಈ ಯೋಜನೆ ಜಾರಿಗೆ ಮುಂದಾಗಿದೆ.

ಆದರೆ, ಅಂಗನವಾಡಿ ಕಾರ್ಯಕರ್ತೆಯರಿಂದಲೇ ಶಿಶುಪಾಲನಾ ಕೇಂದ್ರಗಳ ನಿರ್ವಹಣೆಗೆ ವಿರೋಧ ವ್ಯಕ್ತವಾಗುತ್ತಿದೆ.

ಅಂಗನವಾಡಿಯಲ್ಲಿ ಕಾರ್ಯಕರ್ತೆಯರಿಗೆ ಈಗಲೇ ಸಾಕಷ್ಟು ಕೆಲಸವಿದ್ದು ಮಕ್ಕಳ ಹಾಜರಾತಿ, ತೂಕ, ಆಹಾರ ವಿತರಿಸಿದ ಮಾಹಿತಿ ಎಲ್ಲವನ್ನೂ ಮೊಬೈಲ್ ಫೋನ್‌ ಮೂಲಕ ಮೇಲಧಿಕಾರಿಗಳಿಗೆ ಕಳುಹಿಸಬೇಕಾದ ಕೆಲಸವಿದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಇನ್ನು ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಿದರೆ ಉಳಿದ ಎಲ್ಲ ಕೆಲಸ ಬಿಟ್ಟು ದಿನಪೂರ್ತಿ ಮಕ್ಕಳ ಆರೈಕೆಯಲ್ಲಿಯೇ ತೊಡಗಬೇಕಾಗುತ್ತದೆ. ಹೀಗಾದರೆ ಉಳಿದ ಕೆಲಸ ಮಾಡುವುದು ಯಾವಾಗ? ಎಂದು ಅಂಗನವಾಡಿ ಕಾರ್ಯಕರ್ತೆಯರು ಪ್ರಶ್ನಿಸುತ್ತಾರೆ.

ಎಐಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ರತ್ನಾ ಶಿರೂರ ಈ ಕುರಿತು ಪ್ರತಿಕ್ರಿಯಿಸಿ ‘ಸರ್ಕಾರ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅಂಗನವಾಡಿ ಕೇಂದ್ರದಲ್ಲಿ ಈಗಿರುವ ಸಿಬ್ಬಂದಿಯಿಂದಲೇ ಶಿಶುಗಳ ಪಾಲನೆ ಕಷ್ಟ. ಅದಕ್ಕಾಗಿ ಪ್ರತ್ಯೇಕ ಕೇಂದ್ರಗಳಲ್ಲಿ ಶಿಶುಗಳ ಪಾಲನೆಗೆ ವ್ಯವಸ್ಥೆ ಮಾಡಬೇಕು. ಪ್ರತ್ಯೇಕ ಸಿಬ್ಬಂದಿಯನ್ನೂ ನಿಯೋಜಿಸಬೇಕು’ ಎಂದು ಆಗ್ರಹಿಸಿದರು.

***

ಹುಬ್ಬಳ್ಳಿ–ಧಾರವಾಡದಲ್ಲಿ ಶಿಶುಪಾಲನಾ ಕೇಂದ್ರಗಳ ಆರಂಭಕ್ಕೆ ಅಂಗನವಾಡಿ ಕೇಂದ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

- ಎಚ್‌.ಎಚ್‌. ಕುಕನೂರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ

***

‘ಈಗಿರುವ ಹೊರೆಯೇ ಹೆಚ್ಚಿದೆ’

ಹುಬ್ಬಳ್ಳಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿರುವ ಕೆಲಸದ ಹೊರೆ ಹೆಚ್ಚಾಗಿದ್ದು, ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಿದರೆ ಸಾಕಷ್ಟು ಕೆಲಸವಾಗುತ್ತದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ಜಿಲ್ಲಾ ಘಟಕದ ಅಧ್ಯಕ್ಷೆ ನೂರಜಾನ್‌ ಎಫ್‌. ಸಮುದ್ರಿ ಹೇಳಿದರು.

ಉದ್ಯೋಗಕ್ಕೆ ಹೋಗುವ ಮಹಿಳೆಯ ಮಕ್ಕಳನ್ನು ಮಧ್ಯಾಹ್ನ 4 ಗಂಟೆಯ ತನಕ ಪೋಷಣೆ ಮಾಡಬೇಕು. ಬೆಳಿಗ್ಗೆ ಬೇಗನೆ ಕೇಂದ್ರ ಆರಂಭಿಸಬೇಕು. ಕಾರ್ಯಕರ್ತೆಯರಿಗೆ ಅಂಗನವಾಡಿ ನಿರ್ವಹಣೆ ಜೊತೆಗೆ ಕೋವಿಡ್‌ ತಡೆಗಟ್ಟುವಿಕೆ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ ಹೀಗೆ ಒಂದಲ್ಲ ಒಂದು ಕೆಲಸಗಳು ಇದ್ದೇ ಇರುತ್ತವೆ. ಅದಕ್ಕಾಗಿ ಶಿಶುಗಳ ಪಾಲನೆಗೆ ಪ್ರತ್ಯೇಕ ಕೇಂದ್ರ ಆರಂಭಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT