ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಪಂಚ’ದ ಯಾತ್ರೆ ಮುಗಿಸಿದ ಪಾಪು

Last Updated 17 ಮಾರ್ಚ್ 2020, 21:01 IST
ಅಕ್ಷರ ಗಾತ್ರ

ಹಾವೇರಿ/ಧಾರವಾಡ/ಹುಬ್ಬಳ್ಳಿ: ಜಗಕೆ ಬೆಳಕು ನೀಡುವ ಭಾಸ್ಕರ ಇಳಿಸಂಜೆಯಲ್ಲಿ ಕಣ್ಮರೆಯಾಗುತ್ತಿದ್ದರೆ, ಇತ್ತ ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಮಹಾನ್ ಚೇತನ ಪಾಟೀಲ ಪುಟ್ಟಪ್ಪನವರು ರಾಣೆಬೆನ್ನೂರು ತಾಲ್ಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಮಂಗಳವಾರ ಪಂಚಭೂತಗಳಲ್ಲಿ ಲೀನರಾದರು.

ಹಲಗೇರಿಯಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿ ಕ್ರಿಯಾ ಸಮಾಧಿ ಮಾಡಲಾಯಿತು.

ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ, ಬಸವಣ್ಣನವರ ವಚನಗಳು ಮಾರ್ದನಿಸಿದವು. ‘ವಚನ ಪ್ರಾರ್ಥನೆ’ ಹಾಗೂ ‘ವಚನ ಪುಷ್ಪ’ ಅರ್ಪಿಸಲಾಯಿತು. ನಂತರ ಒಂದು ನಿಮಿಷ ಮೌನ ಆಚರಿಸಲಾಯಿತು. ಪೊಲೀಸ್ ವಾದ್ಯವೃಂದದವರು ರಾಷ್ಟ್ರಗೀತೆಯನ್ನು ನುಡಿಸಿ, ಕುಶಾಲುತೋಪು ಸಿಡಿಸಿ ಗೌರವ ಸಲ್ಲಿಸಿದರು. ನಂತರ ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ ಮತ್ತು ಜಗದೀಶ ಶೆಟ್ಟರ್‌ ಅವರು ಪಾರ್ಥಿವ ಶರೀರಕ್ಕೆ ಪುಷ್ಪ ಗುಚ್ಛ ಸಲ್ಲಿಸಿ ನಮಿಸಿದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ‘ಪಾಟೀಲ ಪುಟ್ಟಪ್ಪನವರ ಹೆಸರು ಅಜರಾಮರವಾಗಿರಬೇಕು. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಸರ್ಕಾರ ಸ್ಮಾರಕ ನಿರ್ಮಿಸಬೇಕು. ಪತ್ರಿಕಾ ಭೀಷ್ಮರಾದ ಪಾಪು ಹೆಸರಿನಲ್ಲಿ ಪತ್ರಿಕೋದ್ಯಮ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪಾಟೀಲ ಪುಟ್ಟಪ್ಪನವರಿಗೆ ಸಲ್ಲಬೇಕಾದ ಎಲ್ಲ ಗೌರವವನ್ನು ನೀಡಲಾಗುತ್ತದೆ. ಜತೆಗೆ ‘ಕರ್ನಾಟಕ ರತ್ನ’ ನೀಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ ಧಾರವಾಡದ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಪಾಟೀಲ ಪುಟ್ಟಪ್ಪ ಸಭಾಭವನ ಮುಂಭಾಗದ ಪುಟ್ಟಪ್ಪ ಅವರ ಪುತ್ಥಳಿ ಎದುರು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ, ಗುರುಲಿಂಗ ಕಾಪಸೆ, ನಿಜಗುಣಾನಂದ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಎನ್‌.ಎಚ್‌. ಕೋನರಡ್ಡಿ, ವೀರಭದ್ರಪ್ಪ ಹಾಲಹರವಿ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT