ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಗಡಿಯಾರಗಳ ಸರದಾರ...

3 ಸಾವಿರಕ್ಕೂ ಹೆಚ್ಚು ಗಡಿಯಾರ ಸಂಗ್ರಹ ಹೊಂದಿರುವ ಸೈಯದ್ ಹಫೀಜ್
Last Updated 24 ಏಪ್ರಿಲ್ 2018, 8:34 IST
ಅಕ್ಷರ ಗಾತ್ರ

‘ಆ್ಯಂಟಿಕ್‌’ ಎಂಬ ಹೆಸರು ಈಗ ಶ್ರೀಮಂತಿಕೆಗೆ ತಳಕುಹಾಕಿಕೊಂಡಿದೆ. ದುಡ್ಡಿದ್ದವರು ಮಾತ್ರ ಆ್ಯಂಟಿಕ್‌ ಸಾಮಗ್ರಿಗಳನ್ನು ಹೊಂದಬಹುದು ಎಂದು ಸಮಾಜ ಭಾವಿಸಿದೆ. ಆದರೆ, ಈ ಆ್ಯಂಟಿಕ್‌ ಸಾಮಗ್ರಿಗಳನ್ನು ನಿರ್ವಹಿಸುವವರು, ದುರಸ್ತಿ ಮಾಡುವವರು ಬಡವರು. ಅವರ ಕೈಯಲ್ಲಿ ಅರಳುವ, ಜೀವ ಪಡೆಯುವ ಈ ಸಾಮಗ್ರಿಗಳು ಶ್ರೀಮಂತರ ಮನೆಗಳ ಶೋಕೇಸ್, ಗೋಡೆಗಳ ಮೇಲೆ ರಾರಾಜಿಸುತ್ತವೆ. ಅಂತಹ ಆ್ಯಂಟಿಕ್‌ಗಳ ಮಧ್ಯೆ ಪ್ರಮುಖವಾದುದು ಹಳೆಯ ಕಾಲದ ಗಡಿಯಾರಗಳು. ಅಂತಹ ಗಡಿಯಾರಗಳನ್ನು ರಿಪೇರಿ ಮಾಡುವವರೇ ಅಗ್ರಹಾರದ ಸೈಯದ್ ಹಫೀಜ್.

ರಿವೆಕ್ಸ್ ಗಡಿಯಾರದೊಂದಿಗೆ ಸೈಯದ್ ಹಫೀದ್

ಇವರ ಬಳಿ 130 ವರ್ಷ ಹಳೆಯ ಗೋಡೆ ಗಡಿಯಾರ ಹಾಗೂ ಕೈ ಗಡಿಯಾರಗಳ ಸಂಗ್ರಹವಿದೆ. ಕೆಲವನ್ನು ಇವರು ಮಾರುವುದಿಲ್ಲ. ಅವು ಸಂಗ್ರಹಕ್ಕೆ ಮಾತ್ರ. ಕೆಲವನ್ನು ಮಾರುತ್ತಾರೆ. ಮೈಸೂರಿನಲ್ಲಿ ಈ ರೀತಿಯ ಆ್ಯಂಟಿಕ್‌ ಗಡಿಯಾರಗಳನ್ನು ಇನ್ನೂ ಮನೆಯಲ್ಲಿ ಇಟ್ಟುಕೊಂಡಿರುವವರು ಇದ್ದಾರೆ. ಈ ಗಡಿಯಾರಗಳು ಕೆಟ್ಟರೆ ರಿಪೇರಿಗೆ ತರುತ್ತಾರೆ. ಅವನ್ನು ಸರಿಮಾಡಿಕೊಡುವುದು ಹಫೀಜ್‌ನ ಕೆಲಸ.

ಆ್ಯಂಟಿಕ್‌ ಗಡಿಯಾರಗಳ ಬಯೋಡೇಟ: ಕೇವಲ 50 ವರ್ಷಗಳ ಹಿಂದೆ ಹೋದರೆ ಈಗಿನ ಕ್ವಾರ್ಟ್ಸ್ ಗಡಿಯಾರಗಳ ಪರಿಚಯ ವಿಶ್ವದ ಯಾರಿಗೂ ಇರಲಿಲ್ಲ. ಇವನ್ನು ವೈಡಿಂಗ್ ಗಡಿಯಾರಗಳು (ಕೀ ಕೊಡುವ) ಎಂದು ಕರೆಯುತ್ತಾರೆ. ಮಾಸ್ಟರ್‌ ಬಿಮ್‌ ಬಾಮ್‌, ಅನ್ಸೋನಿಯಾ ಕ್ಲಾಕ್‌ ಕಂಪನಿ, ನಾಯಕ್ಸ್ ಕ್ಲಾಕ್ಸ್, ಮ್ಯಾಕ್ಸಿಮ್‌ ಕ್ಲಾಕ್, ರಿವೆಕ್ಸ್, ಬ್ರಿಸ್ಟಲ್, ಸೈಂಟಿಫಿಕ್ ಸೇರಿದಂತೆ ಇನ್ನೂ ಹಲವು ಬ್ರ್ಯಾಂಡ್‌ಗಳು ಇವೆ. ಈ ಗಡಿಯಾರಗಳಲ್ಲಿ ಬ್ಯಾಟರಿ ಇರುವುದಿಲ್ಲ. ಬದಲಿಗೆ ಬಿಗಿಯಾಗುವ ಕಬ್ಬಿಣದ ಟೇಪ್‌ ಇರುತ್ತದೆ. ಕೈಯಿಂದ ಕೀ ಕೊಡುತ್ತಿದ್ದಂತೆ ಬಿಗಿಯಾಗಿ ಸುತ್ತಿಕೊ ಳ್ಳುವ ಈ ಟೇಪ್‌, ನಿಧಾನವಾಗಿ ಬಿಡಿಸಿಕೊಳ್ಳುತ್ತ ಹೋಗುತ್ತದೆ. ಆಗ ಗಡಿಯಾರ ನಡೆಯುತ್ತದೆ. ಒಮ್ಮೆ ಕೀ ಕೊಟ್ಟರೆ 7 ದಿನ ಸರಾಗವಾಗಿ ಗಡಿಯಾರಗಳು ಇವೆ. ಅಂತೆಯೇ, 8 ದಿನ, 15 ದಿನ, 31 ದಿನ ನಡೆಯುವ ಗಡಿಯಾರಗಳೂ ಇರುತ್ತವೆ.

ಇಂತಹ ಸಾವಿರಾರು ಗಡಿಯಾರಗಳ ಸಂಗ್ರಹ ಸೈಯದ್ ಬಳಿ ಇವೆ. ವಿನ್ಯಾಸವಂತೂ ತರಾವರಿ. ಅಲ್ಲದೇ, ಇವುಗಳನ್ನು ಮರದಿಂದ ಮಾಡಿದ್ದು. ಅಮೆರಿಕ ಮೂಲದ ಗಡಿಯಾರಗಳು ಮೇಪಲ್‌, ಮಹಾಗನಿಯಿಂದ ಮಾಡಿದ್ದರೆ, ಭಾರತ ಮೂಲದ ಗಡಿಯಾರಗಳು ತೇಗ, ಬೀಟೆಯಿಂದ ಮಾಡಿದವಾಗಿವೆ. ಇವರ ಬಳಿ ಇರುವ ಅತ್ಯಂತ ಹಳೆಯ ಕಾಲದ ಗಡಿಯಾರವೆಂದರೆ ಅಮೆರಿಕನ್ ಅನ್ಸೋನಿಯಾ ಕ್ಲಾಕ್‌ ಕಂಪನಿಯದು. ಇದರ ವಯಸ್ಸು ಬರೋಬ್ಬರಿ 130 ವರ್ಷ. ಕಾಲದ ಆಟಕ್ಕೆ ಮಾಗಿ, ಮಾಸಿರುವ ಈ ಗಡಿಯಾರದ ಮರ ಕಡು ಕಪ್ಪು ಬಣ್ಣಕ್ಕೆ ತಿರುಗಿದೆ. ಪ್ರತಿ ಅರ್ಧಗಂಟೆಗೆ ಎರಡು ಬಾರಿ ರಿಂಗಣಿಸುತ್ತದೆ. ಅಲ್ಲದೇ, ಪ್ರತಿ ಗಂಟೆಗೂ ಅಷ್ಟೇ ಬಾರಿ ರಿಂಗಣಿ ಸುತ್ತದೆ. ಉದಾಹರಣೆಗೆ ಹತ್ತು ಗಂಟೆಯಾಗಿದ್ದರೆ ಹತ್ತು ಬಾರಿ ಸುಮಧುರವಾಗಿ ಗಂಟೆ ಬಾರಿಸುತ್ತದೆ.

ಗಂಟೆ ಬಾರಿಸಲೆಂದೇ ಈ ಗಡಿಯಾರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇದಕ್ಕೂ ಒಂದು ಪಟ್ಟಿಯು ಕೀ ಕೊಟ್ಟರೆ ಸುತ್ತಿಕೊಳ್ಳುತ್ತದೆ. ಪ್ರತಿ ಅರ್ಧ, ಒಂದು ಗಂಟೆಗೊಮ್ಮೆ, ಗಡಿ ಯಾರದ ಯಂತ್ರದಲ್ಲಿ ಇರುವ ಎರಡು ಸುತ್ತಿಗೆಗಳು ಎರಡು ತಾಮ್ರದ ಸಲಾಕೆಗಳ ಮೇಲೆ ಬಡಿಯುತ್ತವೆ. ಕೆಲವೊಂದು ಗಡಿಯಾರಗಳಲ್ಲಿ ಮೂರು ಸುತ್ತಿಗೆ, ಮೂರು ಸಲಾಕೆ ಇರುತ್ತವೆ. ಕೆಲವು ಸಲಾಕೆಗಳಲ್ಲಿ ಸಲಾಕೆಯ ಜಾಗದಲ್ಲಿ ಸುರುಳಿಯಾಕಾ ರದ ತಾಮ್ರದ ಆಕೃತಿಯೊಂದು ಇರುತ್ತದೆ. ಈ ಆಕೃತಿಯ ಮೇಲೆ ಬಡಿಯುವ ಸುತ್ತಿಗೆಯು ಸದ್ದು ಮಾಡುತ್ತದೆ.

ಸೈಯದ್ ಸವಾರಿ ಹೇಗೆ?: 25 ವರ್ಷಗಳ ಹಿಂದೆ ಸೈಯದ್ ಹಫೀಜ್‌ ಅವರಿಗೆ ಗಡಿಯಾರದ ಮೇಲೆ ಆಸಕ್ತಿ ಮೂಡಿತು. ಮೈಸೂರಿನವರೇ ಆದ ಹಫೀಜ್ ಅವರಿಗೆ ಕೋಲಾರದ ಚಿಂತಾಮಣಿ ಮೂಲದ ಮೊಹಮದ್ ಅಲಿ ಅವರ ಪರಿಚಯವಾಯಿತು. ಅವರು ಗಡಿಯಾರ ದುರಸ್ತಿಯಲ್ಲಿ ಮೈಸೂರಿನ ಅತಿ ಹಳಬರು ಹಾಗೂ ನಿಸ್ಸೀಮರು. ಎಂತಹ ಗೋಡೆ, ಕೈ ಗಡಿಯಾರ ಸಿಕ್ಕರೂ ದುರಸ್ತಿ ಮಾಡುತ್ತಿದ್ದರು. ಅವರ ಬಳಿ ಹಫೀಜ್‌ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅಲಿ ಗರಡಿಯಲ್ಲಿ ನೂರಾರು ಗಡಿಯಾರಗಳನ್ನು ರಿಪೇರಿ ಮಾಡಿದರು. ನಂತರ, ಮೈಸೂರಿನ ಸಿಟಿಜನ್‌ ವಾಚ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.ಅಲ್ಲಿದ್ದ ಮುಸ್ತಾಕ್‌ ಅಹ್ಮದ್‌ ಅವರ ಬಳಿ ಶಿಷ್ಯಗಾರಿಕೆ ನಡೆಯಿತು. ಬಳಿಕ ಮೋಹನ್‌ ಎಂಬವರ ಬಳಿಯೂ ಕಲಿಕೆ ನಡೆಯಿತು. ಈ ಮೂವರೂ ಈಗ ತೀರಿಕೊಂಡಿದ್ದಾರೆ. ಆದರೆ, ಅವರು ಕಲಿಸಿದೆ ವಿದ್ಯೆ ಹಾಗೂ ಅವರ ಆಶೀರ್ವಾದ ನನ್ನ ಬಳಿಯಿದೆ ಎಂದು ಹಫೀಜ್ ಮುಗುಳ್ನಗುತ್ತಾರೆ.

ಆರಂಭದಲ್ಲಿ ಇವರಿಗೆ ಗಡಿಯಾರ ಸಂಗ್ರಹಣೆ ಆಸಕ್ತಿಯಾಗಿ ಬೆಳೆದಿತ್ತು. ಬಾಲಕನಾಗಿದ್ದಾಗ ಸಣ್ಣ ಪುಟ್ಟ ಗಡಿಯಾರಗಳನ್ನು ಸಂಗ್ರಹಿಸಿ ಮನೆಗೆ ತಂದಿಟ್ಟುಕೊಳ್ಳುತ್ತಿದ್ದರಂತೆ. ಯುವಕನಾದಾಗಲೂ ಈ ಆಸಕ್ತಿ ಮುಂದುವರಿಯಿತು. ಕೈ ಗಡಿಯಾರಗಳು, ಅವುಗಳ ಡಯಲ್‌, ಸರಪಳಿ, ಒಳಗಿನ ಚಕ್ರಗಳು, ಸ್ಪ್ರಿಂಗ್‌ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಇವರ ಬಳಿಯಿದೆ. ಕನಿಷ್ಠ 3 ಸಾವಿರದಷ್ಟು ಕೈಗಡಿಯಾರಗಳ ಸಂಗ್ರಹ ಇವರ ಬಳಿಯಿದೆ. ಗೋಡೆ ಗಡಿಯಾರಗಳ ಪೈಕಿ 30–40 ವರ್ಷ ಹಳೆಯ ಸುಮಾರು 60 ಗಡಿಯಾರ, ನೂರು ವರ್ಷ ದಾಟಿದ ಸುಮಾರು 10 ಗಡಿಯಾರ ಇವರ ಬಳಿಯಿದೆ. ಕೀ ಕೊಡುವ ಈ ಗಡಿಯಾರಗಳ ಬೆಲೆ ₹ 500 ರಿಂದ ₹ 10 ಸಾವಿರ ದಾಟುತ್ತವೆ.

ಮುಗಿಯದ ಸಂಬಂಧ

ಸೈಯದ್ ಅವರ ಪ್ರಕಾರ ಕೀಲಿ ಕೊಡುವ ಗಡಿಯಾರ ಕಾರ್ಮಿಕಪರ ನೀತಿಯ ಸಂಕೇತ. ಹಿತ್ತಾಳೆಯಿಂದ ಮಾಡಿದ ಈ ಗಡಿಯಾರಗಳನ್ನು ಒಮ್ಮೆ ಕೊಂಡು ಮನೆಗೆ ಹೋದರೆ, ಕಾರ್ಮಿಕನಿಗೂ ಮಾಲೀಕನಿಗೂ ಸತತ ನಿಕಟ ಸಂಬಂಧ ಉಳಿದಿರುತ್ತಿತ್ತು.

ಇವಕ್ಕೆ ಕಾಲಕಾಲಕ್ಕೆ ಸೂಕ್ತ ನಿರ್ವಹಣೆ, ದುರಸ್ತಿ ಅನಿವಾರ್ಯ. ಹಾಗಾಗಿ, ಗಡಿಯಾರದ ಮಾಲೀಕ ಗಡಿಯಾರದ ಅಂಗಡಿಗೆ ಬರಲೇಬೇಕಿತ್ತು. ಇದರಿಂದ ಗಡಿಯಾರವೂ ಚೆನ್ನಾಗಿ ಇರುತ್ತಿತ್ತು. ಕಾರ್ಮಿಕನಿಗೆ ದುಡಿಮೆಯೂ ಆಗುತ್ತಿತ್ತು. ಹೀಗೆ ಕಾರ್ಮಿಕ– ಮಾಲೀಕರ ನಡುವೆ ಸಂ‍ಪರ್ಕ ಇರುತ್ತಿತ್ತು. ಈಗ ಹಾಗಲ್ಲ ಪ್ಲಾಸ್ಟಿಕ್‌ನಿಂದ ಮಾಡಿದ ಕ್ವಾರ್ಟ್ಸ್ ಗಡಿಯಾರಗಳನ್ನು ದುರಸ್ತಿ ಮಾಡುವಂತೆಯೇ ಇಲ್ಲ. ಕೆಟ್ಟರೆ ಬಿಸಾಡುವುದು. ನೂರು ರೂಪಾಯಿಗೆಲ್ಲ ಗಡಿಯಾರದ ಎಂಜಿನ್‌ ಸಿಗುತ್ತದೆ. ಅದನ್ನು ಬದಲಿಸಿಬಿಟ್ಟರೆ ಆಯಿತು. ಅದನ್ನು ಕೊಳ್ಳಲು ಮಾತ್ರ ಗಡಿಯಾರದ ಅಂಗಡಿಗೇ ಬರಬೇಕು.

ಕೀ ಕೊಡುವ ಗಡಿಯಾರ ಸಾಕಷ್ಟು ಜನರ ಹೊಟ್ಟೆ ತುಂಬಿಸುತ್ತಿತ್ತು. ಗಡಿಯಾರದ ದೇಹವನ್ನು ತಯಾರಿಸಿಕೊಡುವ ಬಡಗಿ, ಗಾಜಿನ ವ್ಯಾಪಾರಿ, ಕಬ್ಬಿಣದ ಸ್ಪ್ರಿಂಗ್ ತಯಾರಿಸುವವರು, ಬಿಡಿಭಾಗ ತಯಾರಕರು ಇತ್ಯಾದಿ. ಈಗ ಇವರಾರಿಗೂ ಕೆಲಸವಿಲ್ಲ. ಬಿಡಿಭಾಗಗಳ ಅಗತ್ಯವೇ ಈಗ ಇಲ್ಲ ಎಂದು ವಿಶ್ಲೇಷಿಸುತ್ತಾರೆ ಹಫೀಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT