ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಬಂಧನಕ್ಕೆ ಪಟ್ಟು: ತಡರಾತ್ರಿ ತನಕ ಪ್ರತಿಭಟನೆ

ಮತಾಂತರಕ್ಕೆ ಪ್ರಚೋದಿಸಿದ ಆರೋಪ: ರಸ್ತೆ ತಡೆ, ಪೊಲೀಸ್‌ ಠಾಣೆಗೆ ಮುತ್ತಿಗೆ
Last Updated 18 ಅಕ್ಟೋಬರ್ 2021, 6:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿದ ಸೋಮು ಅವರಾಧಿ ಎಂಬ ‌‌‌‌ವ್ಯಕ್ತಿಯನ್ನು ಬಂಧಿಸಲೇಬೇಕು’ ಎಂದು ಪಟ್ಟು ಹಿಡಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ಭಾನುವಾರ ತಡರಾತ್ರಿಯ ತನಕವೂ ನವನಗರದ ಎಪಿಎಂಸಿ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ ಪೊಲೀಸ್‌ ಠಾಣೆ ಎದುರು ಪ್ರತಿಭಟಿಸಿದ್ದ ಕಾರ್ಯಕರ್ತರು ಸಂಜೆ ಹುಬ್ಬಳ್ಳಿ–ಧಾರವಾಡರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಸುಮಾರು ಒಂದೂವರೆ ಗಂಟೆ ರಸ್ತೆ ತಡೆ ಬಳಿಕ ‘ನಮ್ಮಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಬೇಡ; ಪೊಲೀಸ್‌ ಠಾಣೆ ಮುಂದೆಯೇ ಪ್ರತಿಭಟಿಸೋಣ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದರಿಂದ ಪುನಃ ಅಲ್ಲಿ ಪ್ರತಿಭಟನೆ ಆರಂಭಿಸಿದರು.

ಆರೋಪಿಯನ್ನು ಬಂಧಿಸುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ವಿಎಚ್‌ಪಿ ಮುಖಂಡ ಜಯತೀರ್ಥ ಕಟ್ಟಿ ತಿಳಿಸಿದರು. ಬಳಿಕ ಕಮಿಷನರ್‌ ಲಾಬೂರಾಮ್‌ ಕಾನೂನು ಪ್ರಕಾರ ಕ್ರಮದ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್‌ ಪಡೆದರು.

ಅಂಗಡಿ ಬಂದ್‌: ‘ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಕಾರ್ಯಕರ್ತರು ನವನಗರದ ಅಂಗಡಿಗಳನ್ನು ಮುಚ್ಚಿಸಿದರು. ನವನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಕಾರ್ಯಕರ್ತರು ಮತಾಂತರ ವಿರೋಧಿ ಶಕ್ತಿ ಪ್ರದರ್ಶನಕ್ಕೆ ಜೊತೆಗೂಡಬೇಕು ಎಂದು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು.

ಹುಬ್ಬಳ್ಳಿ–ಧಾರವಾಡ ರಸ್ತೆಯಲ್ಲಿ ವಾಹನಗಳನ್ನು ತಡೆದು ಸಂಚಾರ ಬಂದ್‌ ಮಾಡುತ್ತಿದ್ದ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನೂಕಾಟ, ತಳ್ಳಾಟವೂ ಜರುಗಿತು.

ಇದರಿಂದಾಗಿ ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದಷ್ಟೂ ದೂರ ವಾಹನಗಳ ಸಾಲು ಕಾಣುತ್ತಿತ್ತು. ಚಿಗರಿ ಬಸ್‌ಗಳಿಗಷ್ಟೇ ಸೀಮಿತವಾದ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿಯೂ ಬೇರೆ ವಾಹನಗಳು ನಿಂತುಕೊಂಡಿದ್ದವು. ಪ್ರತಿಭಟನೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು.

ಪೊಲೀಸ್‌ ಠಾಣೆ ಎದುರು ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಎಸ್‌ಎಸ್‌ಗತಿವಿಧಿ ಧರ್ಮ ಜಾಗರಣ ವಿಭಾಗದ ಸಂಯೋಜಕ ಸುನೀಲ್‌ ಚಿಲ್ಲಾಳ, ‘ಸರ್ವಧರ್ಮ ಪ್ರಾರ್ಥನಾ ಮಂದಿರದಲ್ಲಿ ಎಲ್ಲ ಧರ್ಮದವರಿಗೂ ಪ್ರಾರ್ಥನೆ ಮಾಡಿಸುವುದಾಗಿ ಹೇಳಿ ಎಪಿಎಂಸಿ ವ್ಯಾಪಾರಿ, ಭೋವಿ ಸಮಾಜದ ವಿಶ್ವನಾಥ ಬೂದೂರು ಅವರನ್ನು ಆರೋಪಿ ಸೋಮು ಅವರಾಧಿ ಕರೆಯಿಸಿಕೊಂಡಿದ್ದಾನೆ. ಯೇಸು ಭಕ್ತನಾದ ಬಳಿಕ ತಿಂಗಳಿಗೆ ₹4 ಲಕ್ಷ ಗಳಿಸುತ್ತಿದ್ದೇನೆ. ನೀನೂ ಯೇಸುವನ್ನು ನಂಬಿದರೆ ನಿನಗೂ ಅಷ್ಟೊಂದು ಹಣ ಸಿಗುತ್ತದೆ ಎಂದು ನಂಬಿಸಿದ್ದಾನೆ’ ಎಂದು ಆರೋಪಿಸಿದರು.

‘ಪ್ರಾರ್ಥನಾ ಮಂದಿರದಲ್ಲಿ ವಿಶ್ವನಾಥ ಶ್ರೀರಾಮ್‌, ಜೈರಾಮ್ ಭಜನೆ ಮಾಡುವಾಗ; ಇಲ್ಲಿಗೆ ಬಂದು ಯೇಸು ಸ್ವಾಮಿಯನ್ನು ಪ್ರಾರ್ಥಿಸಬೇಕು ಎಂದು ಅವರಾಧಿ ಬೈಯ್ದಿದ್ದಾನೆ. ಅವನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಮಿಷನರಿಗಳಿಂದ ಹಣ ಪಡೆದ ಸಂಶಯವಿದೆ. ಇದರ ಮೂಲವನ್ನು ಪೊಲೀಸರು ಪತ್ತೆ ಹಚ್ಚಬೇಕು. ಪಂಚಮಸಾಲಿ ಸಮಾಜದ ಸ್ವಾಮೀಜಿಗಳು ತಮ್ಮ ಸಮಾಜದ ಜನ ಧರ್ಮವನ್ನು ಬಿಟ್ಟು ಹೋಗುತ್ತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಆಗ್ರಹಿಸಿದರು.

ದೂರುದಾರ ವಿಶ್ವನಾಥ್‌ ಆರೋಪವೇನು?

ಸೋಮು ಅವರಾಧಿ ಎಂಬಾತ ಹಲವು ದಿನಗಳಿಂದ ಯೇಸುವಿನ ಬಗ್ಗೆ ಬೋಧನೆ ಮಾಡುತ್ತಿದ್ದ. ಕಳೆದ ವಾರ ನಮ್ಮ ಮನೆಗೆ ಬಂದು ಯೇಸುವನ್ನು ಭಜಿಸಿದರೆ ತಿಂಗಳಿಗೆ ಲಕ್ಷಾನುಗಟ್ಟಲೆ ಹಣ ಬರುತ್ತದೆ. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಚರ್ಚ್‌ಗೆ ಬಾ ಎಂದು ಕರೆದಿದ್ದ ಎಂದು ದೂರು ನೀಡಿರುವ ವ್ಯಾಪಾರಿ ವಿಶ್ವನಾಥ ಬೂದೂರು ಆರೋಪಿಸಿದರು.

ಅಲ್ಲಿಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಬೈರಿದೇವರಕೊಪ್ಪದ ಪ್ರಾರ್ಥನಾ ಮಂದಿರಕ್ಕೆ ಬರುವಂತೆ ಹೇಳಿದ್ದ. ಅಲ್ಲಿಗೆ ಹೋಗಿ ಓಂ ನಮಃ ಶಿವಾಯ ಎಂದು ಹೇಳುತ್ತಿದ್ದೆ. ಆಗ ಸೋಮು ಇಲ್ಲಿ ಓಂ ನಮಃಶಿವಾಯ ಹೇಳುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಜಾತಿನಿಂದನೆ ಮಾಡಿದ್ದಾರೆ. ನಿನ್ನನ್ನು ಕ್ರಿಶ್ಚಿಯನ್‌ ಮಾಡಲು ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ ಎಂದು ವಿಶ್ವನಾಥ ತಿಳಿಸಿದರು.

ವಿಶ್ವನಾಥ ಯಾರೆಂಬುದೇ ಗೊತ್ತಿಲ್ಲ: ಅವರಾಧಿ

ನಾನು ಲಿಂಗಾಯತ ಸಮಾಜದವನು. ವಾಟರ್‌ ಟ್ಯಾಂಕ್‌ ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇನೆ. ವಾರಪೂರ್ತಿ ದುಡಿದು ಎಂದಿನಂತೆ ಭಾನುವಾರ ಪ್ರಾರ್ಥನೆ ಸಲ್ಲಿಸಲು ಕುಟುಂಬ ಸಮೇತನಾಗಿ ಹೋಗಿದ್ದೆ ಎಂದು ಸೋಮು ಅವರಾಧಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆಗ ಮಂದಿರದ ಒಳಗೆ ನೂರಾರು ಜನ ಬಂದು ಓ ನಮಃ ಶಿವಾಯ ಎಂದು ಪಠಿಸಲು ಆರಂಭಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಮುಂದಾದರು. ಪೊಲೀಸ್‌ ಠಾಣೆಗೆ ಕರೆ ತಂದು ನನ್ನ ಜೊತೆಯಲ್ಲಿದ್ದವರ ಮೇಲೂ ಕನಿಷ್ಠ 50ರಿಂದ 60 ಜನ ಹಲ್ಲೆ ಮಾಡಿದರು ಎಂದು ಆರೋಪಿಸಿದರು.

‘ನನಗೆ ಕ್ರಿಶ್ಚಿಯನ್‌ ಧರ್ಮದ ಬಗ್ಗೆ ‌ನಂಬಿಕೆ ಬಂದಿದೆ. ಆದರೆ, ಮತಾಂತರ ಆಗಿಲ್ಲ. ಆಧಾರ್ ಕಾರ್ಡ್‌, ಜಾತಿ ಪ್ರಮಾಣ ಪತ್ರದಲ್ಲಿ ಸೋಮು ಅವರಾಧಿ ಎಂದೇ ಇದೆ. ವಿಶ್ವನಾಥ್ ಯಾರು ಎಂಬುದು ಗೊತ್ತಿಲ್ಲ. ನಾನು ಅವರ ಮನೆಗೆ ಹೋಗಿದ್ದು, ಅವರೊಂದಿಗೆ ಚರ್ಚೆ ಮಾಡಿದ್ದಕ್ಕೆ ದಾಖಲೆ ಇದೆಯೇ ಎನ್ನುವುದು ಬಹಿರಂಗಪಡಿಸಲಿ’ ಎಂದರು.

ಮತಾಂತರ ತಡೆ ಕಠಿಣ ಕಾನೂನಿಗೆ ಸಿ.ಎಂ ಜೊತೆ ಚರ್ಚೆ: ಬೆಲ್ಲದ

ಹುಬ್ಬಳ್ಳಿ: ಮತಾಂತರ ತಡೆಗೆ ಕಠಿಣ ಕಾನೂನು ಶೀಘ್ರದಲ್ಲೇ ಜಾರಿಗೆ ತರಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದೇನೆ. ಈ ಕುರಿತು ಅವರೊಂದಿಗೆ ಮತ್ತೊಂದು ಬಾರಿ ಚರ್ಚಿಸುವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನವನಗರ ಎಪಿಎಂಸಿ ಪೊಲೀಸ್ ಠಾಣೆ ಎದುರು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಠಿಣ ಕಾಯ್ದೆ ಜಾರಿಯ ರೂಪುರೇಷೆ ಬಗ್ಗೆ ಅನುಭವಿ ವಕೀಲರೊಂದಿಗೆ ಚರ್ಚಿಸಿದ್ದೇನೆ. ಇದರ ವರದಿಯನ್ನು ಸಿ.ಎಂಗೆ ಕೊಡುವೆ ಎಂದರು.

ಧಾರವಾಡ ಜಿಲ್ಲೆಯಲ್ಲಿಯೂ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. ಭೈರಿದೇವರಕೊಪ್ಪದಲ್ಲಿ ಮತಾಂತರಕ್ಕೆ ಯತ್ನಿಸಿದ ಸೋಮು ಅವರಾಧಿ ಎಂಬಾತನನ್ನು ಬಂಧಿಸಬೇಕು. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರ ವಿಳಂಬ ಧೋರಣೆ ಸರಿಯಲ್ಲ ಎಂದರು.

ಸಂಘಟನೆಗಳ ಪ್ರಮುಖರ ಜೊತೆ ಚರ್ಚಿಸಿದ್ದೇವೆ. ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಸಂಘಟನೆಯವರು ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.
ಲಾಬೂರಾಮ್,ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಆಯುಕ್ತ

ಪೊಲೀಸ್‌ ಆಯುಕ್ತರು ಕಾನೂನುಕ್ರಮದ ಭರವಸೆ ನೀಡಿದ್ದಾರೆ. ಇದರಿಂದಾಗಿ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್‌ ಪಡೆದಿದ್ದೇವೆ.
ಅರವಿಂದ ಬೆಲ್ಲದ, ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT