ಭಾನುವಾರ, ಅಕ್ಟೋಬರ್ 24, 2021
20 °C

ಮಳೆ ಅವಘಡ: ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಹುಬ್ಬಳ್ಳಿ ತಾಲ್ಲೂಕು ಅಗಡಿಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸತ್ತಿದ್ದರೆ, ಆನವಟ್ಟಿ ಬಳಿ ಕಡಿದುಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಮೃತಪಟ್ಟಿದ್ದು, ಮೂರು ಹಸುಗಳೂ ಸತ್ತಿವೆ.

ಹುಬ್ಬಳ್ಳಿ ತಾಲ್ಲೂಕಿನ ಅಗಡಿ ಗ್ರಾಮದ ನಿವಾಸಿ ಶಿವಾನಂದ ಚೆನ್ನಬಸಪ್ಪ ಗೋಕುಲ (51) ಸೋಮವಾರ ಹೊಲದಲ್ಲಿ ಕೆಲಸ ಮಾಡುವಾಗ ಮಧ್ಯಾಹ್ನ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಉಳಿದಂತೆ, ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ಧಾರಾಕಾರ ಮಳೆಯಾಗಿದ್ದು ಮರಗಳು, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಹೊಲಗದ್ದೆಗಳು ಜಲಾವೃತವಾದವು. ಉತ್ತರಕನ್ನಡ ಜಿಲ್ಲೆ ಶಿರಸಿ, ಮುಂಡಗೋಡ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿರುಸಿನಿಂದ ಮತ್ತು ಮೂಡಿಗೆರೆ, ಶೃಂಗೇರಿ ಭಾಗ, ಕೊಪ್ಪ ತಾಲ್ಲೂಕಿನ ನಾರ್ವೆ, ಜಯಪುರ ಭಾಗದಲ್ಲಿ ಮಳೆಯಾಗಿದೆ. ಜಯಪುರದಲ್ಲಿ ಗರಿಷ್ಠ 2.4 ಸೆಂ.ಮೀ ಮಳೆಯಾಗಿದೆ.

ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಂದು ಗಂಟೆ ಗುಡುಗು ಸಹಿತ ಮಳೆ ಸುರಿದಿದೆ. ಮಂಗಳೂರು– ವಿಲ್ಲಾಪುರಂ ರಾಷ್ಟ್ರೀಯ ಹೆದ್ದಾರಿ ಮದ್ದಡ್ಕ ಸಮೀಪ ರಸ್ತೆಬದಿ ಅಂಗಡಿಗಳಿಗೆ ನೀರು ನುಗ್ಗಿದ್ದು, ವ್ಯಾಪಾರಸ್ಥರಿಗೆ ಸಮಸ್ಯೆಯಾಯಿತು.

ಯುವಕ, ಮೂರು ಜಾನುವಾರು ಸಾವು: ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿ ಬಳಿ ಕುಬಟೂರು ಕೆರೆ ಬಳಿ ಜಾನುವಾರು ಹುಡುಕಲು ಹೋಗಿದ್ದ ಸಮನವಳ್ಳಿ ಗೊಲ್ಲರ ತಾಂಡಾದ ಕುಮಾರ (28) ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಮೂರು ಹಸುಗಳು ಸತ್ತಿವೆ.

ಉಳಿದಂತೆ, ಸಾಗರ ತಾಲ್ಲೂಕಿನ ನೀಚಡಿ ಗ್ರಾಮದ ಕೆ.ಕೆ. ನಾಗರಾಜ್ ಅವರ ಮನೆಗೆ ಸಿಡಿಲು ಬಡಿದಿದ್ದು, ನಷ್ಟ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು ಸಹಿತ, ಶಿಕಾರಿಪುರ, ಭದ್ರಾವತಿ, ಹೊಸನಗರ, ಸಾಗರದಲ್ಲಿ ಸಾಧಾರಣ ಮಳೆಯಾಗಿದೆ.

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಗುರುಮಠಕಲ್, ವಡಗೇರಾದಲ್ಲಿ ಸಾಧಾರಣ ಮಳೆ ಸುರಿದಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು