ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy | ಚಂಡೀಗಢ ತಂಡಕ್ಕೆ ಕರಣ್ ಆಸರೆ

ರಣಜಿ ಟ್ರೋಫಿ ಕ್ರಿಕೆಟ್‌; ವೈಶಾಖ, ಹಾರ್ದಿಕ್‌ಗೆ ತಲಾ 2 ವಿಕೆಟ್‌
Published 16 ಫೆಬ್ರುವರಿ 2024, 23:31 IST
Last Updated 16 ಫೆಬ್ರುವರಿ 2024, 23:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಳ್ಮೆಯ ಅರ್ಧಶತಕ ಗಳಿಸಿದ ಕರಣ್‌ ಕೈಲಾ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಸಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಚಂಡೀಗಢ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಅಲ್ಲದೇ ಮೊದಲ ದಿನವೇ ಮೇಲುಗೈ ಸಾಧಿಸುವ ಛಲದಲ್ಲಿದ್ದ ಕರ್ನಾಟಕದ ಬೌಲರ್‌ಗಳ ಉದ್ದೇಶಕ್ಕೆ ಆಡ್ಡಿಯಾದರು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಚಂಡೀಗಢ ತಂಡ ದಿನದಾಟದ ಅಂತ್ಯಕ್ಕೆ 89 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು. 340 ನಿಮಿಷ ಕ್ರೀಸ್‌ನಲ್ಲಿದ್ದ ಎಡಗೈ ಬ್ಯಾಟರ್‌ ಕರಣ್‌, 207 ಎಸೆತಗಳಲ್ಲಿ 79 ರನ್‌ ಗಳಿಸಿದರು. 9 ಬೌಂಡರಿ ಬಾರಿಸಿದರು.

ಅವರು ಒಂದು ರನ್‌ ಗಳಿಸಿದ್ದಾಗ ರನ್‌ಔಟ್‌ನಿಂದ ಪಾರಾಗಿದ್ದರು.

ಟಾಸ್ ಜಯಿಸಿದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಚಂಡೀಗಢ ತಂಡ ಬೆಳಿಗ್ಗೆ ಪಾನೀಯ ವಿರಾಮಕ್ಕೂ ಮುನ್ನ 15 ಓವರ್‌ಗಳಲ್ಲಿ 37 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ‌ಆರಂಭಿಕ ಆಟಗಾರ ಶಿವಂ ಭಾಂಬ್ರಿ ಖಾತೆ ತೆರೆಯಲಿಲ್ಲ. 41 ಎಸೆತಗಳಲ್ಲಿ 21 ರನ್ ಗಳಿಸಿ ಜವಾಬ್ದಾರಿಯುತ ಆಟವಾಡುತ್ತಿದ್ದ ತಂಡದ ನಾಯಕ ಮನನ್‌ ವೋಹ್ರಾ ಅವರನ್ನು ವೇಗಿ ಎಂ.ವೆಂಕಟೇಶ್‌ ಕ್ಲೀನ್ ಬೌಲ್ಡ್‌ ಮಾಡಿದರು. ಈ ಹಂತದಲ್ಲಿ ಕುನಾಲ್‌ ಮಹಾಜನ್‌ ಜತೆಗೂಡಿದ ಕರಣ್‌ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 71 (186 ಎ) ರನ್‌ ಗಳಿಸಿ ಸಂಕಷ್ಟ ದೂರ ಮಾಡಿದರು.

ಈ ಜೋಡಿ ಆತಿಥೇಯ ತಂಡದ ಸ್ಪಿನ್‌ ಮತ್ತು ವೇಗದ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿತು. ಕುನಾಲ್ (34) ಅವರನ್ನು ಬೌಲ್ಡ್‌ ಮಾಡಿದ ಎಡಗೈ ಸ್ಪಿನ್ನರ್‌ ಹಾರ್ದಿಕ್‌ ರಾಜ್ ಜತೆಯಾಟ ಮುರಿದರು.

ನಂತರವೂ ತಾಳ್ಮೆಯ ಆಟ ಮುಂದುವರಿಸಿದ ಕರಣ್‌ ಐದನೇ ವಿಕೆಟ್‌ಗೆ ಎ.ಕೆ.ಕೌಶಿಕ್ ಜತೆ 46 (106 ಎ) ಮತ್ತು ಆರನೇ ವಿಕೆಟ್‌ಗೆ ಮಯಂಕ್‌ ಸಿಧು ಪಾಲುದಾರಿಕೆಯಲ್ಲಿ 46 (127 ಎ) ರನ್‌ ಗಳಿಸಿ ವಿಕೆಟ್ ಪತನ ತಡೆದರು. ಎ.ಕೆ.ಕೌಶಿಕ್‌ (25) ಹಾರ್ದಿಕ್ ರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ ಎಸ್.ಶರತ್‌ಗೆ ಕ್ಯಾಚಿತ್ತರು. ದಿನದಾಟ ಮುಗಿಯಲು ಕೆಲವೇ ಓವರ್‌ಗಳು ಬಾಕಿ ಇದ್ದಾಗ ಕರಣ್‌ ಅವರನ್ನು ವೈಶಾಖ ವಿಜಯಕುಮಾರ್ ಎಲ್‌ಬಿ ಬಲೆಗೆ ಕೆಡವಿದರು.

ದಿನದಾಟದ ಅಂತ್ಯಕ್ಕೆ ಮಯಂಕ್ ಸಿಧು (31), ಗುರಿಂದರ್ ಸಿಂಗ್‌ (10) ಕ್ರೀಸ್‌ನಲ್ಲಿದ್ದರು. ಕರ್ನಾಟಕದ ಪರ ವೇಗಿ ವೈಶಾಖ ವಿಜಯಕುಮಾರ್ ಮತ್ತು ಹಾರ್ದಿಕ್ ರಾಜ್ ತಲಾ 2 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಚಂಡೀಗಢ: 89 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 219 (ಮನನ್ ವೊಹ್ರಾ 21, ಕರಣ್ ಕೈಲಾ 79, ಕುನಾಲ್ ಮಹಾಜನ್ 34, ಅಂಕಿತ್ ಕೌಶಿಕ್ 25, ಮಯಂಕ್ ಸಿಧು ಬ್ಯಾಟಿಂಗ್ 31, ಗುರೀಂದರ್ ಸಿಂಗ್ ಬ್ಯಾಟಿಂಗ್ 10, ವೈಶಾಖ ವಿಜಯಕುಮಾರ್ 48ಕ್ಕೆ2, ಹಾರ್ದಿಕ್ ರಾಜ್ 54ಕ್ಕೆ2)

ಅರ್ಧಶತಕ ಗಳಿಸಿದ ಚಂಡೀಗಢ ತಂಡದ ಕರಣ್ ಕೈಲಾ ಅವರ ಬ್ಯಾಟಿಂಗ್ ವೈಖರಿ
–ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಅರ್ಧಶತಕ ಗಳಿಸಿದ ಚಂಡೀಗಢ ತಂಡದ ಕರಣ್ ಕೈಲಾ ಅವರ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ

ಮಯಂಕ್‌ಗೆ ‘ಶತಕ’ದ ಸಂಭ್ರಮ

ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್‌ಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ನೂರನೇ ಪಂದ್ಯ. ಅವರು ಒಟ್ಟು 7461 ರನ್‌ ಕಲೆ ಹಾಕಿದ್ದಾರೆ. ಒಂದು ತ್ರಿಶತಕ 17 ಶತಕ ಮತ್ತು 40 ಅರ್ಧಶಕಗಳು ಅವರ ಖಾತೆಯಲ್ಲಿವೆ. ಶುಕ್ರವಾರ ಜನ್ಮದಿನ ಆಚರಿಸಿಕೊಂಡ ಅವರಿಗೆ ಸಹ ಆಟಗಾರರು ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT