ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಜಲಮಂಡಳಿ ನೌಕರರ ಮರುನೇಮಕಕ್ಕೆ ಆಗ್ರಹ

Published 25 ಮೇ 2023, 13:51 IST
Last Updated 25 ಮೇ 2023, 13:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಜಾಗೊಂಡಿರುವ ಜಲಮಂಡಳಿಯ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಮತ್ತು ನಾಲ್ಕು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಹುಬ್ಬಳ್ಳಿ –ಧಾರವಾಡ ಮಹಾನಗರ ನೀರು ಸರಬರಾಜು ವಿಭಾಗದ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಗೌಡರ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿ–ಧಾರವಾಡದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಜಲಮಂಡಳಿಯಿಂದ ಎಲ್‌ ಆ್ಯಂಡ್ ಟಿ ಕಂಪನಿಗೆ ವಹಿಸಿದ ನಂತರ ಜಲಮಂಡಳಿಯ ನೌಕರರನ್ನು ವಜಾಗೊಳಿಸಲಾಗಿದೆ. ಮೇ 21ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಜಲಮಂಡಳಿಯ 584 ಜನ ನೌಕರರಲ್ಲಿ 219 ಜನರ ನೌಕರ ಸೇವೆಯನ್ನು ಕಾಯಂಗೊಳಿಸಲಾಗಿದೆ. ಉಳಿದವರನ್ನು ಕೂಡಲೇ ಮರು ನೇಮಕ ಮಾಡಿಕೊಂಡು ಕಾಯಂಗೊಳಿಸಬೇಕು. ಈ ಬಗ್ಗೆ ಮೌಖಿಕವಾಗಿ ಸೂಚನೆ ನೀಡದೆ ನೇಮಕಾತಿಗೆ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ನೌಕರರಿಗೆ ಏಳು ತಿಂಗಳ ಬಾಕಿ ವೇತನ ನೀಡಬೇಕಿತ್ತು. ಅದರಲ್ಲಿ ಮೂರು ತಿಂಗಳ ವೇತನ ನೀಡಲಾಗಿದೆ. ಉಳಿದ ಬಾಕಿ ಹಣ ನೀಡದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಕ್ಕಲ ಮಾತನಾಡಿ, ಅವಳಿ ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗದಿರುವುದಕ್ಕೆ ಪಾಲಿಕೆ ಆಯುಕ್ತರ ಅಸಮರ್ಪಕ ನಿರ್ಧಾರ ಮತ್ತು ಎಲ್‌ ಆ್ಯಂಡ್ ಟಿ ಕಂಪನಿಯಲ್ಲಿ ಅನನುಭವಿ ಸಿಬ್ಬಂದಿ ಇರುವುದೇ ಕಾರಣ ಎಂದು ದೂರಿದರು.

ಒಂದು ವೇಳೆ ಮರು ನೇಮಕ ಮಾಡಿಕೊಳ್ಳದಿದ್ದರೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಲಾಗುವುದು. ಹೋರಾಟ ಮುಂದುವರಿಸಲಾಗುವುದು ಎಂದರು.

ಉಮೇಶ ಲಮಾಣಿ, ಆನಂದ ಕಾಳಮ್ಮನವರ, ಕೋದಂಡರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT