ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹ

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನಾ ಮೆರವಣಿಗೆ
Last Updated 5 ಫೆಬ್ರುವರಿ 2019, 12:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ನೆಹರೂ ಮೈದಾನದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್‌ ಕಚೇರಿಗೆ ಬಂದು ತಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಹಶೀಲ್ದಾರ್‌ ಮೂಲಕ ಸಲ್ಲಿಸಿದರು.

ಕಾರ್ಮಿಕ ಮುಖಂಡ ಕೆ.ಎಸ್‌. ಶರ್ಮಾ ಮಾತನಾಡಿ ‘ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಕಾರಣ ಆಯುಷ್ಮಾನ್‌ ಭಾರತ ಆರೋಗ್ಯ ಯೋಜನೆ ಎಲ್ಲರಿಗೂ ವಿಸ್ತರಿಸಬೇಕು, ಕೇಂದ್ರದ ನಿವೃತ್ತ ನೌಕರರಿಗೆ ನೀಡುತ್ತಿರುವ ಮಾಸಿಕ ಭತ್ಯೆ ₹ 1,000 ಅನ್ನು ರಾಜ್ಯದ ಎಲ್ಲ ನಿವೃತ್ತ ನೌಕರರಿಗೂ ನೀಡಬೇಕು. ಪಿಂಚಣಿದಾರರಿಗೆ ಮಾಸಿಕ ₹ 7,000 ಭವಿಷ್ಯ ನಿಧಿ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಹಿರಿಯ ನಾಗರಿಕರಿಗೆ ಸರ್ಕಾರಿ ಬಸ್‌ಗಳನ್ನು ನೀಡುತ್ತಿರುವ ರಿಯಾಯಿತಿಯನ್ನು ಸ್ಲೀಪರ್‌ ಕೋಚ್‌ ಬಸ್‌ಗಳಲ್ಲಿಯೂ ಕೊಡಬೇಕು. ಬಸ್‌ ಪ್ರಯಾಣದಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವಂತೆ ರಾಜ್ಯದಲ್ಲಿಯೂ ಶೇ 50ರಷ್ಟು ರಿಯಾಯಿತಿ ನೀಡಬೇಕು. ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಕೌಂಟರ್ ಆರಂಭಿಸಬೇಕು. ನ್ಯಾಯಾಲಯದ ಪ್ರಕರಣಗಳನ್ನು ಒಂದು ವರ್ಷದ ಒಳಗೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎ. ಪಾಟೀಲ ಮಾತನಾಡಿ ‘ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಭವನ ಆರಂಭಿಸಬೇಕು. ನಮಗೆ ಸೌಲಭ್ಯ ಕಲ್ಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಡಬೇಕು. ದೌರ್ಜನ್ಯ ತಡೆಯಲು ಪೊಲೀಸ್‌ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು. ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಬೆಂಗಳೂರು, ದಾವಣಗೆರೆ ಜಿಲ್ಲೆಗಳ ನಿವೃತ್ತ ನೌಕರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT