ಶಿಕ್ಷಕ ವೃತ್ತಿಯ ಘನತೆ ಕಾಪಾಡಲು ಮನವಿ

7
ರಾಧಾಕೃಷ್ಣನ್‌ ಸ್ಮರಣೆ, ನೂರಾರು ಶಿಕ್ಷಕರು ಭಾಗಿ, ನಿವೃತ್ತ ಶಿಕ್ಷಕರಿಗೆ ಸನ್ಮಾನ

ಶಿಕ್ಷಕ ವೃತ್ತಿಯ ಘನತೆ ಕಾಪಾಡಲು ಮನವಿ

Published:
Updated:
Deccan Herald

ಹುಬ್ಬಳ್ಳಿ: ಜಗತ್ತಿನಲ್ಲಿ ಕೋಟ್ಯಂತರ ಜನ ವೈದ್ಯರು, ವಕೀಲರು, ಎಂಜಿನಿಯರ್‌ಗಳು ಇದ್ದಾರೆ. ಅವರೆನ್ನೆಲ್ಲ ರೂಪಿಸಿದ್ದು ಶಿಕ್ಷಕರು. ಆದ್ದರಿಂದ ಎಲ್ಲರೂ ಈ ವೃತ್ತಿಯ ಘನತೆ ಎತ್ತಿ ಹಿಡಿಯಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಉಪನ್ಯಾಸಕ ಸುರೇಶ ಕುಲಕರ್ಣಿ ಹೇಳಿದರು.

ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶಿಕ್ಷಕ ದಿನೋತ್ಸವ ಸಮಿತಿ ಬುಧವಾರ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಶಿಕ್ಷಕರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಇದರಿಂದ ಬೋಧನಾ ಗುಣಮಟ್ಟ ಕೂಡ ಕುಸಿಯುತ್ತಿದೆ. ಇದರ ಪರಿಣಾಮ ಮಕ್ಕಳ ಮೇಲೂ ಆಗುತ್ತಿದೆ. ಆದ್ದರಿಂದ ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು.’ ಎಂದು ಸಲಹೆ ನೀಡಿದರು.

‘ಅನೇಕ ಶಿಕ್ಷಕರಿಗೆ ಪ್ರಾಯೋಗಿಕ ಅನುಭವ ಇಲ್ಲದೇ ಇದ್ದರೂ ವಿಜ್ಞಾನದ ಪಾಠ ಮಾಡುತ್ತಾರೆ. ಆದ್ದರಿಂದ ಈಗಿನ ತರಗತಿಗಳು ಅಂಕ ಗಳಿಸಲಷ್ಟೇ ಸೀಮಿತವಾಗುತ್ತಿವೆ. ಎಲ್ಲ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಇರುತ್ತದೆ. ಅದನ್ನು ಗುರುತಿಸಿ, ಬೆಳೆಸುವ ಕಾರ್ಯ ಆಗಬೇಕಿದೆ. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಿದರೆ, ಅವರು ಭಾರತದ ಶಕ್ತಿಯಾಗಿ ರೂಪುಗೊಳ್ಳುತ್ತಾರೆ’ ಎಂದರು.

ಶಾಸಕ ಜಗದೀಶ ಶೆಟ್ಟರ್  ‘ಈಗಿನ ಕಾಲದಲ್ಲಿ ತಮ್ಮ ಮಕ್ಕಳಿಗೆ ಪಾಠ ಹೇಳಿಕೊಡುವಷ್ಟು ಪುರುಸೊತ್ತು ಪೋಷಕರಿಗೆ ಇಲ್ಲ, ಆದ್ದರಿಂದ ಮಕ್ಕಳಿಗೆ ಶಿಕ್ಷಕರೇ ಎಲ್ಲ. ನನಗೆ ಕಲಿಸಿದ ನಿರಂಜನ ವಾಲಿಶೆಟ್ಟರ್‌, ಬಿ.ಎ. ಭಸ್ಮೆ ಅವರನ್ನು ಎಂದಿಗೂ ಮರೆಯಲಾರೆ. ಅವರು ನನಗೆ ಶಿಕ್ಷಣ ನೀಡುವುದರ ಜೊತೆಗೆ ನಾಯಕತ್ವದ ಗುಣ ಕೂಡ ಬೆಳೆಸಿದರು’ ಎಂದು ನೆನಪಿಸಿಕೊಂಡರು.

‘ಶಿಕ್ಷಕರಿಗೆ ಬೋಧನೆ ಮಾಡುವುದರ ಜೊತೆಗೆ ಗಣತಿ, ಬಿಸಿಯೂಟದ ಜವಾಬ್ದಾರಿ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದರಿಂದ ಶಿಕ್ಷಕರ ಮೇಲೆ ಒತ್ತಡ ಹೆಚ್ಚಿದೆ. ವರ್ಗಾವಣೆಯಿಂದಲೂ ಸಮಸ್ಯೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ವರ್ಗಾವಣೆ ಬಗ್ಗೆ ನಿರ್ದಿಷ್ಟ ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು.

ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದವರಿಗೆ ಇದೇ ವೇಳೆ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯೆ ಚನ್ನಮ್ಮ ಶಿವನಗೌಡರ, ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸರೋಜ ಅಳಗವಾಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಎಂ.ಬಿ. ಉದಯ ಕುಮಾರ, ಶಿಕ್ಷಣ ಪ್ರೇಮಿಗಳಾದ ವಿನಾಯಕ ಜೋಶಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !