7
ಕರಪತ್ರದ ಮೂಲಕ ಪ್ರಚಾರಕ್ಕೆ ಮುಂದಾದ ಎಪಿಎಂಸಿ ಆಡಳಿತ ಮಂಡಳಿ

ಭಾನುವಾರ ಸಂತೆಗೆ ರೈತರಿಂದ ದೊರೆಯದ ಸ್ಪಂದನೆ

Published:
Updated:
ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ಸಂತೆಗೆ ನಿರ್ಮಿಸಿರುವ ಮಾರುಕಟ್ಟೆ ಸಂಕೀರ್ಣ

ಹುಬ್ಬಳ್ಳಿ:  ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ₹ 55 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ‘ಭಾನುವಾರ ಸಂತೆ’ ಮಾರುಕಟ್ಟೆ ಸಂಕೀರ್ಣ ಉದ್ಘಾಟನೆಗೊಂಡು ಮೂರು ತಿಂಗಳು ಕಳೆದರೂ ಬಳಕೆಯಾಗುತ್ತಿಲ್ಲ.

ಹುಬ್ಬಳ್ಳಿ–ಧಾರವಾಡ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಭಾನುವಾರ ಸಂತೆ ನಡೆಸಲು ಮಾರುಕಟ್ಟೆ ಸಂಕೀರ್ಣವೊಂದನ್ನು ನಿರ್ಮಿಸಿದೆ. ಅದರಲ್ಲಿ 14 ಮಳಿಗೆಗಳಿವೆ. ರೈತರಿಗೆ ಅವುಗಳನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಜತೆಗೆ ತೂಕದ ಯಂತ್ರವನ್ನೂ ನೀಡಲಾಗುತ್ತದೆ. ಭಾನುವಾರ ನಡೆಯುವ ಸಂತೆಗೆ ಉತ್ತಮ ಸ್ಪಂದನೆ ದೊರೆತರೆ ಉಳಿದ ದಿನಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ.

ತರಕಾರಿ, ಹಣ್ಣುಗಳನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ಮಾರಾಟ ಮಾಡಬಹುದಾಗಿದೆ. ಜತೆಗೆ ಉಪ ಉತ್ಪನ್ನಗಳಾದ ಬೆಣ್ಣೆ, ರೊಟ್ಟಿ, ಉಪ್ಪಿನಕಾಯಿ ಇತ್ಯಾದಿ ವಸ್ತುಗಳನ್ನೂ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಸಗಟು ಮಾರುಕಟ್ಟೆಗೆ ತರಕಾರಿ ಮಾರಾಟ ಮಾಡಲು ಬರುವ ರೈತರಿಗೆ ತಿಳಿವಳಿಕೆ ನೀಡಲಾಗಿತ್ತು. ಆದರೂ, ರೈತರು ಇಲ್ಲಿ ಮಾರಾಟ ಮಾಡಲು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ್.

ಬಿಆರ್‌ಟಿಎಸ್‌ (ತ್ವರಿತ ಸಾರಿಗೆ ಸೇವೆ) ಕಾಮಗಾರಿ ನಡೆದಿರುವುದರಿಂದ ರೈತರು ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಸಂಪರ್ಕ ಸರಿಯಾಗಿ ಇಲ್ಲದಿರುವುದರಿಂದ ಗ್ರಾಹಕರು ಬರುವುದಿಲ್ಲ ಎಂದು ರೈತರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಕಾಮಗಾರಿ ಮುಗಿದ ಮೇಲೆ ಅಲ್ಲಿಯೇ ಬಸ್‌ ನಿಲ್ದಾಣ ಬರಲಿದೆ. ಆಗ ರೈತರು ಬರಬಹುದು ಎನ್ನುತ್ತಾರೆ ಅವರು.

ಭಾನುವಾರ ಸಂತೆ ಆರಂಭಿಸಿದ ಮೊದಲ ನಾಲ್ಕು ದಿನ ಭಾಗವಹಿಸಿದ್ದರು. ಆ ನಂತರ ಬರಲಿಲ್ಲ. ನಿತ್ಯ ಬಂದರೂ ಅವರಿಗೆ ಮಳಿಗೆಯನ್ನು ನೀಡಲಾಗುವುದು. ಹೆಚ್ಚಿನ ಬೆಲೆ ದೊರೆಯಲಿದೆ. ಜತೆಗೆ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಎಂದು ತಿಳಿಸಿದ್ದೇವೆ ಎಂದು ಗುರುಪ್ರಸಾದ್‌ ಹೇಳಿದರು.

ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ರೈತರು ಮುಂದೆ ಬರುತ್ತಿಲ್ಲ. ಬೆಳಿಗ್ಗೆ ತರಕಾರಿ ಮಾರುಕಟ್ಟೆಯ ಹರಾಜಿನಲ್ಲಿ ಮಾರಾಟ ಮಾಡಿ ಹೊರಟು ಬಿಡುತ್ತಾರೆ. ಬೇಗನೆ ಹೋದರೆ ಹೊಲಗಳಲ್ಲಿ ಕೆಲಸ ಮಾಡಬಹುದು. ಇಲ್ಲಿಯೇ ಮಾರಾಟ ಮಾಡುತ್ತಾ ಕುಳಿತರೆ ಹೊಲ ನೋಡಿಕೊಳ್ಳುವವರು ಯಾರು ಎಂದು ರೈತರು ಪ್ರಶ್ನಿಸುತ್ತಿದ್ದಾರೆ ಎಂದರು.

ಚುನಾವಣೆಗೆ ಮುನ್ನ ಮಾರ್ಚ್‌ ತಿಂಗಳಿನಲ್ಲಿ ತರಾತುರಿಯಲ್ಲಿ ಈ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿತ್ತು. ನಂತರದಲ್ಲಿ ಸಂತೆ ಕಾರ್ಯಾರಂಭ ಮಾಡಿಲ್ಲ. ವ್ಯಾಪಕ ಪ್ರಚಾರದ ಕೊರತೆಯಿಂದಾಗಿ ರೈತರು ಭಾಗವಹಿಸುತ್ತಿಲ್ಲ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಬಯಸದ ವ್ಯಾಪಾರಸ್ಥರೊಬ್ಬರು.

ಮಾರುಕಟ್ಟೆ ಬಗ್ಗೆ ರೈತರಲ್ಲಿ ಹೆಚ್ಚಿನ ಜಾಗೃತಿ ಇಲ್ಲದಿರುವುದೂ ಇದಕ್ಕೆ ಕಾರಣವಿರಬಹುದು. ಅದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ.
- ಜಗನ್ನಾಥಗೌಡ, ಎಪಿಎಂಸಿ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !