ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ| 'ಕಾಜಲ್‌’ ಕಣ್ಣಲ್ಲಿ ಲಾಡಿಹುಳು!

ಧಾರವಾಡ ಕೃಷಿ ವಿವಿ ಪಶುಚಿತ್ಸಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
Last Updated 23 ಜನವರಿ 2020, 16:29 IST
ಅಕ್ಷರ ಗಾತ್ರ

ಧಾರವಾಡ: ಕುದುರೆ ಕಣ್ಣಿನೊಳಗೆ ಹರಿದಾಡುತ್ತಿದ್ದ ಲಾಡಿಹುಳು(ಸೆಟಾರಿಯಾ ಇಕ್ವಿನ)ವನ್ನು ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪಶುಚಿಕಿತ್ಸಾಲಯದ ಶಸ್ತ್ರಚಿಕಿತ್ಸಕ ಡಾ. ಅನಿಲ ಪಾಟೀಲ ಅವರು ಗುರುವಾರ ಯಶಸ್ವಿಯಾಗಿ ಹೊರತೆಗೆದರು.

ಸಾಮಾನ್ಯವಾಗಿ ಹೊಟ್ಟೆಯಲ್ಲಿರುವ ಲಾಡಿಹುಳು ಕಣ್ಣಿನಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲ, ಕಣ್ಣಿನ ಗುಡ್ಡೆಯಲ್ಲಿ ಹರಿದಾಡುವುದನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿತ್ತು. ಇದನ್ನು ಹೊರಕ್ಕೆ ತೆಗೆಯುವ ಅತ್ಯಂತ ಸೂಕ್ಷ್ಮವಾದ ಮತ್ತು ಅಪರೂಪವಾದ ಶಸ್ತ್ರಚಿಕಿತ್ಸೆಗೆ ಯುವ ಪಶುವೈದ್ಯರು, ಸಾರ್ವಜನಿಕರು ಸಾಕ್ಷಿಯಾದರು.

‘ಹುಬ್ಬಳ್ಳಿಯ ರಜನಿಕಾಂತ ಬಿಜವಾಡ ಎಂಬುವವರಿಗೆ ಸೇರಿದ 7 ವರ್ಷದ ಹೆಣ್ಣು ಕುದುರೆ ‘ಕಾಜಲ್‌’ ಬಲಗಣ್ಣಿನಲ್ಲಿ 15 ದಿನಗಳ ಹಿಂದೆ ಒಂದೇ ಸಮನೆ ನೀರು ಸುರಿಯಲಾರಂಭಿಸಿತ್ತು. ಕಣ್ಣು ನಿಧಾನಕ್ಕೆ ತನ್ನ ಬಣ್ಣ ಬದಲಿಸಿ ಬೆಳ್ಳಗಾಯಿತು. ಕುದುರೆ ಮಾಲೀಕರು ಹಾಗೂ ಇದರ ತರಬೇತುದಾರ ಅಬ್ದುಲ್ ಅಲಿ ಅವರಿಗೆ ಇದು ಗಾಭರಿ ಹುಟ್ಟಿಸಿತು. ಕಣ್ಣನ್ನು ಸೂಕ್ಷ್ಮವಾಗಿ ಗಮನಿಸಿದಾಗ ಲಾಡಿಹುಳುವೊಂದು ಹರಿದಾಡುತ್ತಿರುವುದು ಕಂಡುಬಂತು. ಇದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ’ ಎಂದು ಡಾ. ಅನಿಲ ಪಾಟೀಲ ವಿವರಿಸಿದರು.

‘ಸಾಮಾನ್ಯವಾಗಿ ಹೊಟ್ಟೆಯಲ್ಲಿ ಕಂಡುಬರುವ ಪರಾವಲಂಬಿಯಾದ ಸೆಟಾರಿಯಾ ಇಕ್ವಿನಾ ಎಂಬ ಜಂತು, ರಕ್ತದಲ್ಲಿನ ಪೌಷ್ಟಿಕ ಅಂಶಗಳನ್ನು ಸೇವಿಸಿ ಜೀವಿಸುತ್ತದೆ. ಇವುಗಳ ಮರಿಗಳಾದಮೈಕ್ರೊ ಫಿಲೆರಿಯಾ ರಕ್ತನಾಳಗಳಲ್ಲಿ ಸಂಚರಿಸುತ್ತವೆ. ಹೀಗಾಗಿ ಈ ಲಾಡಿಹುಳು ರಕ್ತನಾಳದ ಮಾರ್ಗವಾಗಿ ಕಣ್ಣನ್ನು ಸೇರಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ರಕ್ತ ಹೀರುವ ಸೊಳ್ಳೆಗಳ ಮೂಲಕ ಇದು ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿ ದೇಹವನ್ನು ಹೊಕ್ಕಲಿದೆ’ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ಬೆಳಿಗ್ಗೆ ಬಂದ ‘ಕಾಜಲ್‌’ಗೆ ಅರಿವಳಿಕೆ ನೀಡಿ ಮಲಗಿಸಲಾಯಿತು. ಮೊದಲಿಗೆ ಕಣ್ಣಿನೊಳಗೆ ಸಿರೆಂಜ್ ಮೂಲಕ ನೀರು ಕಳುಹಿಸಲಾಯಿತು. ಆದರೆ ಚುರುಕಾಗಿದ್ದ ಹುಳು ಸಿಗದೆ ತಪ್ಪಿಸಿಕೊಳ್ಳುತ್ತಿತ್ತು. ಹತ್ತು ನಿಮಿಷಗಳ ಕಾಲ ನಿರಂತರ ಪ್ರಯತ್ನದ ನಂತರ ಹುಳುವನ್ನು ಹೊರಕ್ಕೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದರು. ಇವರಿಗೆ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನಿಂದ ತರಬೇತಿಗೆ ಬಂದಿದ್ದ ವೈದ್ಯ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ನೆರವಾದರು.

ಶಸ್ತ್ರಚಿಕಿತ್ಸೆ ನಂತರ ಎದ್ದು ನಿಂತ ಕುದುರೆ ಕಣ್ಣು ನೀಲಿಬಣ್ಣಕ್ಕೆ ತಿರುಗುತ್ತು. ದ್ರಾವಣದಲ್ಲಿ ಹಾಕಿದ್ದ ಲಾಡಿಹುಳು ವಿಲವಿಲನೆ ಒದ್ದಾಡುತ್ತಿತ್ತು. ಕುದುರೆಗೆ ಜಂತು ಹುಳುವಿನ ಮಾತ್ರ ನೀಡಿ ವಿಶ್ರಾಂತಿಗಾಗಿ ಕಳುಹಿಸಲಾಯಿತು.

ಇದೇ ಚಿಕಿತ್ಸಾಲಯದಲ್ಲಿ ಬುಧವಾರ ನಡೆದ ಮತ್ತೊಂದು ಶಸ್ತ್ರಚಿಕಿತ್ಸೆ ಪ್ರಕರಣದಲ್ಲಿ, ಲ್ಯಾಬ್ರಿಡಾರ್ ತಳಿಯ ಶ್ವಾನದ ಮೂತ್ರಕೋಶದಲ್ಲಿದ್ದ 150 ಗ್ರಾಂ ತೂಕದ ಹರಳನ್ನು ಡಾ. ಅನಿಲ ಪಾಟೀಲ ಅವರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT