ಸೋಮವಾರ, ಡಿಸೆಂಬರ್ 9, 2019
17 °C

ಆಡಿಯೊ ಮಾಡಿಸುವ ಚಾಳಿ ಇರುವುದು ಸಿದ್ದರಾಮಯ್ಯನವರಿಗೆ ಮಾತ್ರ: ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗುಪ್ತವಾಗಿ ಆಡಿಯೊ ಮಾಡಿಸುವ ಹಾಗೂ ಅದನ್ನು ಬಹಿರಂಗ ಮಾಡುವ ಚಾಳಿ ಇರುವುದು ಸಿದ್ದರಾಮಯ್ಯಗೆ ಮಾತ್ರ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದರು‌.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೆ ಯಡಿಯೂರಪ್ಪ ಅವರು ಲಿಂಗಾಯತರ ಬಗ್ಗೆ ಮಾತನಾಡಿದ್ದನ್ನು ಹಾಗೂ ಕುಮಾರಸ್ವಾಮಿ ಒಕ್ಕಲಿಗರ ಬಗ್ಗೆ ಮಾತನಾಡಿದ್ದನ್ನು ಸಿ.ಡಿ ಮಾಡಿಸಿ, ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರಂತೆಯೇ ಎಲ್ಲರೂ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಹಿರಿಯರಾದ ಸಿದ್ದರಾಮಯ್ಯ ಅವರ ಈ ವರ್ತನೆ ಘನತೆಗೆ ಸರಿಯಾದದ್ದು ಅಲ್ಲ ಎಂದರು‌.

ಸಿದ್ದರಾಮಯ್ಯ ಸರ್ಕಾರ ಬೀಳಲು ಪ್ರೇರಣೆ ಕೊಟ್ಟಿದ್ದಾರೆ. ತಾವೇ ಮಾಡಿರುವ ಲೋಪವನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ ಎಂದು ದೂರಿದರು.

‘ನನಗೂ ಆಡಿಯೊಕ್ಕೂ ಯಾವುದೇ ಸಂಬಂಧ ಇಲ್ಲ. ಹುಬ್ಬಳ್ಳಿಯಲ್ಲಿ ನಡೆದ ನಾನೂ ಸಭೆಯಲ್ಲಿ ಹಾಜರಿದ್ದೆ. ಆಡಿಯೊ ವಿಚಾರದಲ್ಲಿ ನಮ್ಮ ಪಕ್ಷದ ಯಾವುದೇ ಶಾಸಕರ ಕೈವಾಡ ಇಲ್ಲ‘ ಎಂದರು.

‘ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹಗೊಂಡ ಶಾಸಕರಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ  ಅಧಿಕಾರಕ್ಕೆ ಬಂದಿದೆ ಎಂದಷ್ಟೇ ಹೇಳಿದ್ದಾರೆ. ಯಾರೂ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದಷ್ಟೇ ಹೇಳಿದ್ದಾರೆ. ಇದೇ ಸಂದರ್ಭ ಬಳಸಿಕೊಂಡು, ಮಿಶ್ರಣ ಮಾಡಿ ಆಡಿಯೊ ಬಿಡುಗಡೆ ಮಾಡಿರುವ ಸಾಧ್ಯತೆಯಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಘಟನೆಗೂ ಹೈಕಮಾಂಡ್‌ಗೂ ಸಂಬಂಧವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಬಣವಿಲ್ಲ. ಟಿಕೆಟ್‌ ವಿಚಾರವಾಗಿ ಪಕ್ಷದ ವರಿಷ್ಠರು ಹೇಳುವ ಕೈಗೊಳ್ಳುವ ತೀರ್ಮಾನ ಬದ್ಧ’ ಎಂದರು.

ಪ್ರತಿಕ್ರಿಯಿಸಿ (+)