ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಎಸ್‌ಯುಸಿಐ ಅಭ್ಯರ್ಥಿಯಾಗಿ ಗಂಗಾಧರ ಕಣಕ್ಕೆ

ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿಕೆ
Last Updated 30 ಏಪ್ರಿಲ್ 2019, 16:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐ–ಸಿ) ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಅವರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಯುಸಿಐ–ಸಿ ಪಕ್ಷವು ಮೂರು ದಶಕಗಳಿಂದ ಜಿಲ್ಲೆಯಲ್ಲಿ ಹಲವಾರು ಜನಪರ, ಕಾರ್ಮಿಕ, ಮಹಿಳಾ ಹಾಗೂ ರೈತ ಹೋರಾಟಗಳನ್ನು ನಡೆಸಿದೆ. ದೇಶದ 20 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 119 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ರಾಜ್ಯದ ಧಾರವಾಡ, ಬೆಂಗಳೂರು ಗ್ರಾಮೀಣ, ದಾವಣಗೆರೆ, ಬಳ್ಳಾರಿ, ರಾಯಚೂರು–ಯಾದಗಿರಿ, ಮೈಸೂರು–ಕೊಡಗು ಹಾಗೂ ಕಲಬುರಗಿ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ನೀರಾವರಿಗೆ ಒತ್ತಾಯಿಸಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇವೆ. ಹುಬ್ಬಳ್ಳಿಯ ಮುಖ್ಯ ಕುಡಿಯುವ ನೀರಿನ ಮೂಲವಾಗಿದ್ದ ನೀರಸಾಗರ ಕೆರೆ ಏಳು ವರ್ಷಗಳಿಂದ ಬತ್ತಿದೆ. ಅದನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ. ಕುಡಿಯುವ ನೀರಿನಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸದ ಪ್ರಹ್ಲಾದ ಜೋಶಿ ಒಮ್ಮೆಯೂ ಪ್ರಸ್ತಾಪಿಸಿಲ್ಲ. ಮುದ್ರಾ ಯೋಜನೆ ವಿಫಲವಾಗಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಧಾನಿ ಮೋದಿ ಅವರು ಸುಳ್ಳು ಲೆಕ್ಕಗಳನ್ನು ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ಸಂಸದರು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಬಂಡವಾಳಶಾಹಿಗಳ ಆಸ್ತಿ ಹೆಚ್ಚಳ: ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಂಡವಾಳಶಾಹಿಗಳ ನೆಚ್ಚಿನ ಪಕ್ಷಗಳು. 60 ವರ್ಷಗಳಿಂದಲೂ ಕಾಂಗ್ರೆಸ್‌ ಸಾಕಷ್ಟು ಹಗರಣಗಳ ಮೂಲಕ ದೇಶವನ್ನು ಲೂಟಿ ಮಾಡಿದೆ. ಬಿಜೆಪಿಯೂ ಹಲವು ಹಗರಣಗಳನ್ನು ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಸ್ತಿ ಶೇ 300ರಷ್ಟು ಹೆಚ್ಚಳವಾಗಿದೆ. ಬಿಜೆಪಿ ಬೆಂಬಲಿಗ ಬಾಬಾ ರಾಮದೇವ್‌ ಆಸ್ತಿ ಶೇ 175ರಷ್ಟು ಹೆಚ್ಚಳವಾಗಿದೆ. ಗೌತಮ್‌ ಅದಾನಿ, ಅಂಬಾನಿಗಳ ಆಸ್ತಿ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಜನಸಾಮಾನ್ಯರ ಜೀವನ ಮಟ್ಟ ಬಿಗಡಾಯಿಸಿದೆ ’ ಎಂದರು.

ಅಭ್ಯರ್ಥಿ ಗಂಗಾಧರ ಬಡಿಗೇರ, ಪಕ್ಷದ ಮುಖಂಡರಾದ ಲಕ್ಷ್ಮಣ ಜಡಗನ್ನವರ, ಭುವನಾ, ಶರಣಬಸವ ಗೋನವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT