ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನ–ಧರ್ಮದಿಂದ ಜೀವನ ಪರಿಪೂರ್ಣ

ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ
Last Updated 10 ಜುಲೈ 2019, 15:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದಾನ–ಧರ್ಮ ಮಾಡಿದಾಗ ಮಾತ್ರ ಮನುಷ್ಯ ಜೀವನ ಪರಿಪೂರ್ಣವಾಗುತ್ತದೆ. ಇದರಿಂದ ಮುಂದಿನ ಜನ್ಮದಲ್ಲಿ ನಮಗೆ ಸುಖದ ಜತೆಗೆ, ವೈಭವದ ಜೀವನ ಸಿಗುತ್ತದೆ. ಇಲ್ಲದಿದ್ದರೆ ಎಲ್ಲಾ ಇದ್ದರೂ ಒಂದು ರೀತಿಯ ದಾರಿದ್ರ್ಯ ಆವರಿಸುತ್ತದೆ’ ಎಂದು ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.

ಹುಬ್ಬಳ್ಳಿಯಲ್ಲಿ ಚಾತುರ್ಮಾಸ ಆಚರಣೆಗಾಗಿ ಬಂದಿರುವ ಶ್ರಮಣಿ ಗಣಿನಿ ಆರ್ಯಿಕಾ 105 ವಿಶಾಶ್ರೀ ಮಾತಾಜಿ ಹಾಗೂ ಇತರ ಎಂಟು ಸಂಘಸ್ಥ ತ್ಯಾಗಿಗಳಿಗೆ ಬುಧವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ‘ಪರೋಪಕಾರ, ತ್ಯಾಗಿಗಳ ಸೇವೆ ಹಾಗೂ ಧರ್ಮ ಪಾಲನೆ ಮಾಡುವವರು ಸುಖಿಯಾಗಿರುತ್ತಾರೆ’ ಎಂದರು.

‘ಮನುಷ್ಯ ಜನ್ಮ ಪುಣ್ಯದ ಫಲವಾಗಿದೆ. ದೈವಭಾವ ಇರುವ ಮನಸ್ಸಿನಲ್ಲಿ ಭೇದಭಾವ ಇರುವುದಿಲ್ಲ. ಭಕ್ತರು ಮತ್ತು ಭಗವಂತನನ್ನು ಸೇರಿಸುವ ಶಕ್ತಿ ಭಕ್ತಿಗಿದೆ. ಭಕ್ತಿಯಿಂದಲೇ ಮನುಷ್ಯನಿಗೆ ಶಕ್ತಿ ಹಾಗೂ ಮುಕ್ತಿ ಸಿಗುತ್ತದೆ’ ಎಂದು ಹೇಳಿದರು.

‘ಹೆಣ್ಣೊಬ್ಬಳು ಶಿಕ್ಷಣ ಪಡೆದರೆ, ಇಡೀ ಕುಟುಂಬವೇ ಶಿಕ್ಷಿತವಾದಂತೆ ಎಂಬ ಮಾತಿದೆ. ಅದೇ ರೀತಿ ಶಿಕ್ಷಣದ ಜತೆಗೆ ವಿದ್ವತ್ತು ಹಾಗೂ ತತ್ವಜಾನದಲ್ಲಿ ಪಾರಮ್ಯ ಸಾಧಿಸಿದವರು ಇಡೀ ಸಮಾಜವನ್ನು ಜಾಗೃತಿಗೊಳಿಸುತ್ತಾರೆ. ಅದಕ್ಕೆ ವಿಶಾಶ್ರೀ ಮಾತಾಜಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ’ ಎಂದರು.

‘ಪದವಿ ಶಿಕ್ಷಣದ ಬಳಿಕ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಮಾತಾಜಿ, ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡರು. ಮುಂದೆ ದೀಕ್ಷೆ ಸ್ವೀಕರಿಸಿ, ಆಧ್ಯಾತ್ಮಕ್ಕೆ ಜೀವನವನ್ನು ಮುಡಿಪಾಗಿಟ್ಟರು. ಜೈನ ಧರ್ಮದ ಬಗ್ಗೆ ಅವರು ಹಲವು ಕೃತಿಗಳನ್ನು ರಚಿಸಿದ್ದು, ಕೆಲ ಪುಸ್ತಕಗಳು ಕನ್ನಡಕ್ಕೂ ಅನುವಾದಗೊಂಡಿವೆ. ಹುಬ್ಬಳ್ಳಿಯಲ್ಲಿ ಅವರು ಕೈಗೊಂಡಿರುವ ಚಾತುರ್ಮಾಸವನ್ನು ಎಲ್ಲರೂ ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.

‘1966ರಲ್ಲಿ ಹುಬ್ಬಳ್ಳಿಗೆ ಭೇಟಿ ನೀಡಿದ್ದ ನಾನು, ಸಮಾಜದ ಗುರುಗಳ ಸಮ್ಮುಖದಲ್ಲಿ ಸಂಸ್ಕೃತದಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದೆ’ ಎಂದ ಸ್ವಾಮೀಜಿ, ‘ಮುಂದೊಂದು ದಿನ ನಾನೂ ಚಾತುರ್ಮಾಸಕ್ಕಾಗಿ ಹುಬ್ಬಳ್ಳಿಗೆ ಬರುವೆ’ ಎಂದರು.

ಶ್ರಮಣಿ ಗಣಿನಿ ಆರ್ಯಿಕಾ 105 ವಿಶಾಶ್ರೀ ಮಾತಾಜಿ ಆಶೀರ್ವಚನ ನೀಡಿದರು. ವಿಪಶ್ಯನಾಶ್ರೀ ಮಾತಾಜಿ, ವಿಮುಕ್ತಿಶ್ರೀ ಮಾತಾಜಿ, ವಿದರ್ಶನಾಶ್ರೀ ಮಾತಾಜಿ, ವಿಶುದ್ಧಶ್ರೀ ಮಾತಾಜಿ, ವಿಸಿದ್ದೀಶ್ರೀ ಮಾತಾಜಿ, ವಿಶುಚಿಶ್ರೀ ಮಾತಾಜಿ, ವಿಶೃತಿಶ್ರೀ ಮಾತಾಜಿ, ವಿಶ್ರಿತಿಶ್ರಿ ಮಾತಾಜಿ ಹಾಗೂ ಜೈನ ಸಮಾಜ ಅಧ್ಯಕ್ಷ ಶಾಂತಿನಾಥ ಹೊಸಪೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT