ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕಣ್ಮನ ಸೆಳೆಯುತ್ತಿವೆ ಫಲ–ಪುಷ್ಪ

Published 27 ಜನವರಿ 2024, 4:22 IST
Last Updated 27 ಜನವರಿ 2024, 4:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಣ್ಣು ಹಾಯಿಸಿದೆಲ್ಲೆಡೆ ಬಗೆ ಬಗೆಯ ಹೂಗಳು, ವಿವಿಧ ತಳಿಯ ಸಸಿಗಳು, ಹಣ್ಣು– ತರಕಾರಿಗಳಲ್ಲಿ ತಯಾರಿಸಿದ ಪ್ರಾಣಿ, ಪಕ್ಷಿಗಳ ಚಿತ್ರಗಳು, ಸಿರಿಧಾನ್ಯಗಳಲ್ಲಿ ಮೂಡಿದ ರಂಗೋಲಿ, ಸಾಧಕರ ಕಲಾಕೃತಿಗಳು... ಇವೆಲ್ಲ ಕಾಣಸಿಗುವುದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ.

ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದ ಹಿನ್ನೆಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜ.26ರಿಂದ 28ರವರೆಗೆ ಇಲ್ಲಿ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬ ಏರ್ಪಡಿಸಲಾಗಿದ್ದು, ನೂರಾರು ಜನರು ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಗುಲಾಬಿ, ಸೇವಂತಿ, ಚೆಂಡು ಹೂವು, ಪಾಯಿನ್ಸಿಟಿಯಾ, ಪೇನೂನಿಯಾ, ಟ್ಯೂಬಿ ರೋಸ್ ರೋಟೆಡ್, ಪೆಂಟಾಸ್ ಕಾರ್ನಿಯಾ ಸೇರಿದಂತೆ ವಿವಿಧ ತಳಿಯ ಹೂವುಗಳು ಗಮನ ಸೆಳೆಯುತ್ತಿವೆ.

ನಾರ್ಪೋಕ್ ಐಲ್ಯಾಂಡ್ ಪೈನ್ ಪ್ಲಾಂಟ್, ಅಕ್ರೊಲಾ ಚೆರ್ರಿ ಪ್ಲಾಂಟ್, ಆಸ್ಟ್ರೇಲಿಯನ್ ಅಂಬ್ರಲ್ ಪ್ಲಾಂಟ್, ಕಿತ್ತಳೆ ಚೆಸ್ಮೆನ್ ಸೇರಿದಂತೆ 30ಕ್ಕೂ ಹೆಚ್ಚು ಬಗೆಯ ಸಸಿಗಳು ಇಲ್ಲಿವೆ.

ಗಮನ ಸೆಳೆಯುವ ಕಲಾಕೃತಿ: ಜೋಳ, ರಾಗಿ, ನವಣೆ, ಸಜ್ಜೆ, ಬರಗು, ಹಾರಕ ಮತ್ತಿತರ ಸಿರಿಧಾನ್ಯ ಬಳಸಿ ಬಿಡಿಸಲಾದ ರಂಗೋಲಿ ಚಿತ್ತಾಕರ್ಷಕವಾಗಿದೆ. ಸಿರಿಧಾನ್ಯಗಳಲ್ಲಿ ಮೈದಳೆದ ವಿಶ್ವಗುರು ಬಸವೇಶ್ವರರ ಹಾಗೂ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಕಲಾಕೃತಿ ಗಮನ ಸೆಳೆಯುತ್ತಿವೆ.

ವಿವಿಧ ಹಣ್ಣುಗಳಲ್ಲಿ ಬುದ್ಧ, ಸಂಗೊಳ್ಳಿ ರಾಯಣ್ಣ, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರ ಹಾಗೂ ಪಕ್ಷಿಗಳ ಕಲಾಕೃತಿಗಳನ್ನು ತಯಾರಿಸಲಾಗಿದ್ದು, ಫಲಪುಷ್ಪ ಪ್ರದರ್ಶನದ ಅಂದ ಹೆಚ್ಚಿಸಿದೆ.

ಗುಲಾಬಿ ಹೂಗಳಲ್ಲಿ ಅರಳಿದ ಕರ್ನಾಟಕ ನಕ್ಷೆ: ಬಟನ್ ರೋಸ್ ಗುಲಾಬಿ ತಳಿಯ ಹಳದಿ ಮತ್ತು ಗುಲಾಬಿ ಬಣ್ಣದ ಹೂವುಗಳನ್ನು ಬಳಸಿ ಕರ್ನಾಟಕ ನಕ್ಷೆ, ಅರ್ಜುನ ಆನೆ, ಮೈಸೂರು ದಸರಾ ಅಂಬಾರಿ, ಚಂದ್ರಯಾನ–3 ಮಾದರಿ, ಹೂ ಮಾರುವ ಹುಡುಗಿಯ ಚಿತ್ರ ತಯಾರಿಸಲಾಗಿದ್ದು, ಸಾರ್ವಜನಿಕರನ್ನು ಸೆಳೆಯುತ್ತಿವೆ. ಇವುಗಳೊಂದಿಗೆ ಸೆಲ್ಪಿ ಸ್ಟ್ಯಾಂಡ್‌ ಮಾಡಲಾಗಿದ್ದು, ಸೆಲ್ಪಿ ಪ್ರಿಯರ ನೆಚ್ಚಿನ ತಾಣವಾಗಿದೆ.

‘ಕರ್ನಾಟಕ ವಿಶ್ವವಿದ್ಯಾಲಯದಿಂದ 800, ಹು–ಧಾ ಮಹಾನಗರ ಪಾಲಿಕೆಯಿಂದ 250, ತೋಟಗಾರಿಕೆ ಇಲಾಖೆಯಿಂದ 2,000ಕ್ಕೂ ಅಧಿಕ ಹೂವು ಹಾಗೂ ಆಲಂಕಾರಿಕ ಕುಂಡಗಳನ್ನು ಪ್ರದರ್ಶನದಲ್ಲಿ ಇಡಲಾಗಿವೆ. ಅಲ್ಲದೆ, ಮೀನುಗಾರಿಕೆ ಇಲಾಖೆಯಿಂದ ವಿಶಿಷ್ಟ ಮೀನು ತಳಿಗಳಾದ ರೋಹು, ಮೃಗಾಲ, ಕಾಟ್ಲ ಮೀನು ಕಾಣಸಿಗುತ್ತವೆ’ ಎನ್ನುತ್ತಾರೆ ಕೃಷಿ ಉಪನಿರ್ದೇಶಕ ಆರ್‌.ಜಿ. ಸಂದೀಪ.

ನಿರುಪಯುಕ್ತ ವಸ್ತುಗಳಲ್ಲಿ ಅರಳಿದ ಸಸಿಗಳು!

ಪ್ಲಾಸ್ಟಿಕ್ ಡಬ್ಬ ಒಡೆದ ಹೆಲ್ಮೆಟ್ ತೆಂಗಿನಚಿಪ್ಪು ಮತ್ತಿತರ ನಿರುಪಯುಕ್ತ ವಸ್ತುಗಳನ್ನು ಕುಂಡಗಳಂತೆ ಬಳಸಿ ಅದರಲ್ಲಿ ವಿವಿಧ ಸಸಿಗಳನ್ನು ಬೆಳೆಸಿದ್ದಾರೆ ಜೆಸ್‌ಎಸ್‌ಎಸ್ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯ ಉದ್ಯಾನ ಪಾಲಕ ಬಾಬು ಗೌಳಿ. ಇವುಗಳಲ್ಲಿ ಬೋನ್ಸಾಯಿ ಅರೆಲಿಯಾ ಡ್ರೆಸೆನಿಯಾ ವಾಟರ್ ಲಿಲ್ಲಿ ಆಲದ ಮರ ತೆಂಗಿನ ಮರ ಮನಿ ಪ್ಲಾಂಟ್ ಬೆಳೆಸಿದ್ದು ಸಸ್ಯಪ್ರಿಯರ ಗಮನ ಸೆಳೆಯುತ್ತಿದೆ. 58 ವರ್ಷದ ಬಾಬು ತಮ್ಮ 6ನೇ ವಯಸ್ಸಿನಿಂದಲೇ ಈ ಕಾರ್ಯ ಮಾಡುತ್ತಿರುವುದು ವಿಶೇಷ.‌

ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇದೇ ಮೊದಲು. ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿದೆ. ಹಣ್ಣು ಸಿರಿಧಾನ್ಯಗಳಲ್ಲಿ ತಯಾರಿಸಿದ ಕಲಾಕೃತಿಗಳು ಆಕರ್ಷಕವಾಗಿವೆ
ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯ ಐದು ತಾಲ್ಲೂಕಿನ ರೈತರು ಬೆಳೆದ ಹಣ್ಣು ತರಕಾರಿ ಹಾಗೂ 15ಕ್ಕೂ ವಿವಿಧ ಬಗೆಯ ಹೂಗಳು ಪ್ರದರ್ಶನದಲ್ಲಿವೆ.
ಯೋಗೀಶ ಕಿಲಾರಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬದಲ್ಲಿ ಹಣ್ಣುಗಳಲ್ಲಿ ತಯಾರಿಸಿರುವ ಕಲಾಕೃತಿಗಳನ್ನು ಮಹಿಳೆಯರು ವೀಕ್ಷಿಸಿದರು
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬದಲ್ಲಿ ಹಣ್ಣುಗಳಲ್ಲಿ ತಯಾರಿಸಿರುವ ಕಲಾಕೃತಿಗಳನ್ನು ಮಹಿಳೆಯರು ವೀಕ್ಷಿಸಿದರು
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ನಡೆದ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ಶಾಸಕ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ನಾಯಕರಾದ ಅನಿಲಕುಮಾರ ಪಾಟೀಲ ಮಹೇಂದ್ರ ಸಿಂಘಿ ಹು–ಧಾ ಮಹಾನಗರ ಪಾಲಿಕೆ ಸದಸ್ಯ ಮಯೂರ ಮೋರೆ ಪಾಲ್ಗೊಂಡಿದ್ದರು
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ನಡೆದ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ಶಾಸಕ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ನಾಯಕರಾದ ಅನಿಲಕುಮಾರ ಪಾಟೀಲ ಮಹೇಂದ್ರ ಸಿಂಘಿ ಹು–ಧಾ ಮಹಾನಗರ ಪಾಲಿಕೆ ಸದಸ್ಯ ಮಯೂರ ಮೋರೆ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT