ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಸೌಕರ್ಯ ಕೊರತೆ; ಪ್ರಯಾಣಿಕರ ಪರದಾಟ

Published 23 ನವೆಂಬರ್ 2023, 4:41 IST
Last Updated 23 ನವೆಂಬರ್ 2023, 4:41 IST
ಅಕ್ಷರ ಗಾತ್ರ

ಧಾರವಾಡ: ನಗರ ಸಾರಿಗೆ ಬಸ್‌ ನಿಲ್ದಾಣ (ಸಿಬಿಟಿ) ಅವ್ಯವಸ್ಥೆಯ ಆಗರವಾಗಿದ್ದು,  ಮೂಲಸೌಕರ್ಯ ಕೊರತೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ವಿಜಯಾ ಟಾಕೀಸ್‌ ರಸ್ತೆ ಮಗ್ಗುಲಲ್ಲಿ ನಗರ ಸಾರಿಗೆ ಬಸ್‌ನಿಲ್ದಾಣ ಇದೆ. ಅನೈರ್ಮಲ್ಯ, ಹದಗೆಟ್ಟ ರಸ್ತೆ, ಪ್ಲಾಟ್‌ಫಾರಂ ಅಧ್ವಾನ, ಆಸನಗಳ ಕೊರತೆ ಮೊದಲಾದ ಸಮಸ್ಯೆಗಳಿವೆ. ಈ ನಿಲ್ದಾಣದಿಂದ ನಿತ್ಯ 80 ಬಸ್‌ಗಳು (ಸುಮಾರು 450 ಟ್ರಿಪ್‌) ನಗರದ ವಿವಿಧ ಬಡಾವಣೆಗಳಿಗೆ ಸಂಚರಿಸುತ್ತವೆ. 25 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಬಸ್‌ಗಳಲ್ಲಿ ಸಂಚರಿಸುತ್ತಾರೆ.

ನಿಲ್ದಾಣದ ಸನಿಹದಲ್ಲೇ ಮಾರುಕಟ್ಟೆ ಇದೆ. ಜನ ಜಂಗುಳಿ, ವಾಹನ ದಟ್ಟಣೆ ಹೆಚ್ಚು. ನಿಲ್ದಾಣದ ಸುತ್ತ ಕಾಪೌಂಡ್‌ ಕೂಡಾ ಇಲ್ಲ. ಇಕ್ಕೆಲದಲ್ಲಿ ಖಾಸಗಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ ಎಂಬ ಫಲಕ ಅಳವಡಿಸಲಾಗಿದೆ. ಆದರೆ, ಈ ನಿರ್ಬಂಧ ಫಲಕಕ್ಕೆ ಸೀಮಿತವಾಗಿದೆ.

ಪ್ಲಾಟ್‌ಫಾರಂ ಪಕ್ಕದಲ್ಲೇ ಕೆಲವರು ಬೈಕ್‌ ನಿಲ್ಲಿಸುತ್ತಾರೆ. ಪ್ಲಾಟ್‌ಫಾರಂನಲ್ಲಿ ಅಳವಡಿಸಿರುವ ಕೆಲವು ಪೈಪುಗಳು ಮುರಿದಿವೆ. ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳು ಕಡಿಮೆ ಇವೆ. ಹಲವರು ಕಟ್ಟೆ, ಪೈಪುಗಳ ಮೇಲೆ ಕುಳಿತುಕೊಳುತ್ತಾರೆ. ಜಾಗ ಸಿಗದವರು ನಿಂತುಕೊಂಡೇ ಕಾಯಬೇಕಾದ ಅನಿವಾರ್ಯ ಇದೆ.

ಶೌಚಾಲಯ ಇಲ್ಲ

ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ವಿದ್ಯಾರ್ಥಿನಿಯರು, ಮಹಿಳೆಯರು ಪಡಿಪಾಟಲು ಪಡುವಂತಾಗಿದೆ. ಪಕ್ಕದಲ್ಲಿ ಪಾಲಿಕೆಯ ಸಾರ್ವಜನಿಕ ಪಾವತಿ ಶೌಚಾಲಯ ಇದ್ದು, ಇದೇ ಗತಿಯಾಗಿದೆ.

ನಿಲ್ದಾಣದ ರಸ್ತೆಯ ಡಾಂಬರು ಪೂರ್ಣ ಕಿತ್ತಿದೆ. ನುಚ್ಚುಕಲ್ಲು, ಮಣ್ಣಿನಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ಮಳೆಯಾದಾಗ ನಿಲ್ದಾಣದಲ್ಲಿ ನೀರು ಆವರಿಸುತ್ತದೆ, ಕೆಸರಿನಲ್ಲೇ ಓಡಾಡಬೇಕು ಎಂದು ಪ್ರಯಾಣಿಕರು ಸಂಕಷ್ಟ ತೋಡಿಕೊಳ್ಳುತ್ತಾರೆ.

ಕಸ, ಗುಟ್ಕಾ, ಸೀಗರೇಟ್‌ ಖಾಲಿ ಪೊಟ್ಟಣಗಳು, ಪ್ಲಾಸ್ಟಿಕ್‌ ಕವರ್‌ಗಳು ಎಲ್ಲೆಂದರಲ್ಲಿ ಬಿದ್ದಿವೆ. ಪ್ಲಾಟ್‌ಫಾರಂನ ಕಟ್ಟೆಗಳು ಕೆಲವು ಕಡೆ ಒಡೆದಿವೆ. ಇಲ್ಲೇ ನಾಯಿಗಳು, ಮದ್ಯವ್ಯಸನಿಗಳು ಪವಡಿಸಿರುತ್ತಾರೆ. ಬಸ್‌ಗಳು ಅಡ್ಡಾದಿಡ್ಡಿ ನಿಲ್ಲುತ್ತವೆ. ಬಸ್‌ ಮಾರ್ಗ, ವೇಳಾಪಟ್ಟಿ, ಫಲಕವನ್ನೂ ಅಳವಡಿಸಿಲ್ಲ ಎಂದು ದೂರುತ್ತಾರೆ.

‘ಸಮವಸ್ತ್ರ ಧರಿಸಲು ಕೊಠಡಿ ವ್ಯವಸ್ಥೆ ಇಲ್ಲ. ನಿಯಂತ್ರಕರ ಕ್ಯಾಬಿನ್‌ನಲ್ಲೇ ಸಮವಸ್ತ್ರ ಬದಲಿಸುತ್ತೇವೆ’ ಎಂದು ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಬಸ್‌ ನಿಲ್ಧಾಣದಲ್ಲಿ ಪ್ರಯಾಣಿಕರು ಕೂರಲು ಆಸನಗಳು ಕಡಿಮೆ ಇವೆ. ವ್ಯವಸ್ಥಿತ ಸೌಕರ್ಯಗಳು ಇಲ್ಲ. ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಕಲ್ಲಪ್ಪ ನಾಗಪ್ಪ ಕುರುಕುರಿ, ಧಾರವಾಡ
ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕುಡುಕರ ಹಾವಳಿ ತಪ್ಪಿಸಬೇಕು. ಸ್ವಚ್ಛತೆ ನಿರ್ವಹಣೆಗೆ ಕ್ರಮ ವಹಿಸಬೇಕು
ಮುಯೀಜ್‌, ವಿದ್ಯಾರ್ಥಿ, ಅಂಜುಮನ್‌ ಕಾಲೇಜು, ಧಾರವಾಡ
ಧಾರವಾಡದ ನಗರ ಸಾರಿಗೆ ನಿಲ್ದಾಣದಲ್ಲಿ ಪ್ಲಾಟ್‌ ಫಾರಂ ಕಟ್ಟೆ ಹಾಳಾಗಿರುವುದು ಪ್ರಜಾವಾಣಿ ಚಿತ್ರ–ಬಿ.ಎಂ.ಕೇದಾರನಾಥ
ಧಾರವಾಡದ ನಗರ ಸಾರಿಗೆ ನಿಲ್ದಾಣದಲ್ಲಿ ಪ್ಲಾಟ್‌ ಫಾರಂ ಕಟ್ಟೆ ಹಾಳಾಗಿರುವುದು ಪ್ರಜಾವಾಣಿ ಚಿತ್ರ–ಬಿ.ಎಂ.ಕೇದಾರನಾಥ
ಧಾರವಾಡದ ನಗರ ಸಾರಿಗೆ ನಿಲ್ದಾಣದ ಪ್ಲಾಟ್‌ ಫಾರಂನಲ್ಲಿ ಮದ್ಯ ವ್ಯಸನಿಯೊಬ್ಬರು ಪವಡಿಸಿರುವುದು ಪ್ರಜಾವಾಣಿ ಚಿತ್ರ–ಬಿ.ಎಂ.ಕೇದಾರನಾಥ
ಧಾರವಾಡದ ನಗರ ಸಾರಿಗೆ ನಿಲ್ದಾಣದ ಪ್ಲಾಟ್‌ ಫಾರಂನಲ್ಲಿ ಮದ್ಯ ವ್ಯಸನಿಯೊಬ್ಬರು ಪವಡಿಸಿರುವುದು ಪ್ರಜಾವಾಣಿ ಚಿತ್ರ–ಬಿ.ಎಂ.ಕೇದಾರನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT