ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕೆರೆ ಖಾಲಿ ಮಾಡಿ, ಬಳಿಕ ನೀರಿಗೆ ಪರಿತಪಿಸಿದರು

ಉಮಚಗಿ: ಟ್ಯಾಂಕರ್‌ ನೀರಿಗಾಗಿ ದಿನಪೂರ್ತಿ ಗ್ರಾಮಸ್ಥರ ಪಡಿಪಾಟಲು
Published 21 ಏಪ್ರಿಲ್ 2024, 21:03 IST
Last Updated 21 ಏಪ್ರಿಲ್ 2024, 21:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಲವು ಸಲ ಬರ ಆವರಿಸಿದ್ದರೂ ತಾಲ್ಲೂಕಿನ ಉಮಚಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಡಿರಲಿಲ್ಲ. ಎರಡು ಕೆರೆಗಳು ಆಸರೆಯಾಗಿದ್ದವು. ಆದರೆ, ಈಗ ಗ್ರಾಮಸ್ಥರಿಂದ ಒಂದು ಕೆರೆ ಬರಿದಾಗಿದ್ದರೆ, ಮತ್ತೊಂದು ಕೆರೆಯು ಮಳೆಯಿಲ್ಲದ ಕಾರಣ ಬತ್ತಿದೆ. ಇದರಿಂದ ಗ್ರಾಮಸ್ಥರಿಗೆ ಕುಡಿಯಲು ಮತ್ತು ಬಳಸಲು ನೀರು ಸಿಗದ ಪರಿಸ್ಥಿತಿ ತಲೆದೋರಿದೆ.

ಉಮಚಗಿ ಗ್ರಾಮದಲ್ಲಿ ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿ ಎರಡು ಕೆರೆಗಳಿದ್ದು, ಮಳೆಗಾಲದಲ್ಲಿ ಒಮ್ಮೆ ಭರ್ತಿಯಾದರೆ ಕನಿಷ್ಠ ನಾಲ್ಕು ವರ್ಷದವರೆಗೆ ನೀರಿನ ಸಮಸ್ಯೆ  ಕಾಡುತ್ತಿರಲಿಲ್ಲ. ಒಂದು ವರ್ಷದ ಹಿಂದೆ ಗ್ರಾಮಸ್ಥರೊಬ್ಬರು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಒಂದು ಕೆರೆಯ ನೀರನ್ನು ಖಾಲಿ ಮಾಡಲಾಯಿತು.

‘ಕೆರೆಯಲ್ಲಿ ತುಂಬಾ ನೀರಿತ್ತು. ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕೊಳೆತ ಶವ ಮೂರು ದಿನಗಳ ಬಳಿಕ ಸಿಕ್ಕಿತು. ಇದರಿಂದ ಆ ಕೆರೆಯ ನೀರನ್ನು ಬಳಸಲು ಗ್ರಾಮಸ್ಥರು ಹಿಂಜರಿದರು. ಕೆರೆ ನೀರು ಕುಡಿಯಲು ಯೋಗ್ಯ ಎಂದು ಪ್ರಯೋಗಾಲಯದ ವರದಿ ಹೇಳಿದರೂ ಗ್ರಾಮಸ್ಥರು ಕೆರೆಯತ್ತ ಸುಳಿಯಲಿಲ್ಲ. ಹೀಗಾಗಿ ಗ್ರಾಮದ ಮುಖಂಡರ ನಿರ್ಧಾರದಂತೆ ಕೆರೆ ನೀರು ಖಾಲಿ ಮಾಡಲಾಯಿತು’ ಎಂದು ಗ್ರಾಮಸ್ಥ ಪ್ರವೀಣ ನಾಗರಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕೆರೆ ನೀರು ಖಾಲಿ ಮಾಡಿದ ಬಳಿಕ ಕುಡಿಯುವ ನೀರಿಗಾಗಿ ಗ್ರಾಮಸ್ಥರು ನೆಚ್ಚಿಕೊಂಡಿದ್ದ ಇನ್ನೊಂದು ಕೆರೆಯೂ ಮಳೆ ಕೊರತೆಯಿಂದ ಬರಿದಾಯಿತು. ಈಗ ಜನ, ಜಾನುವಾರುಗಳಿಗೆ ಕುಡಿಯಲು ನೀರಿನ ಅಭಾವ ಉಂಟಾಗಿದೆ.

‘ಜಿಲ್ಲಾಡಳಿತದಿಂದ ಟ್ಯಾಂಕರ್‌ ಮೂಲಕ ಹುಬ್ಬಳ್ಳಿಯಿಂದ ಉಮಚಗಿ ಗ್ರಾಮಕ್ಕೆ ಪ್ರತಿದಿನ ಎರಡು ಬಾರಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಒಂದು ಮನೆಗೆ ಎರಡು ದಿನಕ್ಕೊಮ್ಮೆ ನಾಲ್ಕು ಕೊಡ ನೀರು ನಿಗದಿಗೊಳಿಸಲಾಗಿದೆ. ಒಂದೊಂದು ಮನೆಯಲ್ಲಿ ಹೆಚ್ಚು ಜನರು ಇರುವುದರಿಂದ ನಾಲ್ಕು ಕೊಡ ನೀರು ಸಾಲುತ್ತಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಟ್ಯಾಂಕರ್ ನೀರಿಗಾಗಿ ಗ್ರಾಮಸ್ಥರು ಖಾಲಿ ಕೊಡಗಳ ಹಿಡಿದು ಕಾಯಬೇಕು  ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಟ್ಯಾಂಕರ್ ನೀರಿಗಾಗಿ ಗ್ರಾಮಸ್ಥರು ಖಾಲಿ ಕೊಡಗಳ ಹಿಡಿದು ಕಾಯಬೇಕು  ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

‘ಟ್ಯಾಂಕರ್ ನೀರು ಬರುವ ದಿನ ಎಲ್ಲಾ ಕೆಲಸ ಬಿಟ್ಟು ಬೆಳಿಗ್ಗೆಯಿಂದ ಖಾಲಿ ಕೊಡಗಳನ್ನು ಹಿಡಿದು ಸರದಿಯಲ್ಲಿ ನಿಲ್ಲಬೇಕು. ಎರಡೇ ಟ್ಯಾಂಕರ್ ನೀರು ಪೂರೈಸುವ ಕಾರಣ ಇಡೀ ಗ್ರಾಮಕ್ಕೆ ನೀರು ಸಾಲುವುದಿಲ್ಲ. ಟ್ಯಾಂಕರ್ ನೀರು ಖಾಲಿಯಾದರೆ, ಖಾಲಿ ಕೊಡಗಳನ್ನು ಹಿಡಿದು ಮನೆಗೆ ಮರಳಬೇಕು’ ಎಂದು ಗ್ರಾಮಸ್ಥೆ  ದ್ರಾಕ್ಷಾಯಿಣಿ ಗುಳಪ್ಪಗೋಳ ತಿಳಿಸಿದರು.

‘ಸದ್ಯ ಟ್ಯಾಂಕರ್ ಮೂಲಕ ಒದಗಿಸುತ್ತಿರುವ ನೀರು ಅರ್ಧ ಊರಿಗೂ ಸಾಲುತ್ತಿಲ್ಲ. ಟ್ಯಾಂಕರ್ ನೀರಿಗಾಗಿ ಹಲವು ಬಾರಿ ಗಲಾಟೆ ನಡೆದಿವೆ. ಗ್ರಾಮಕ್ಕೆ ಪ್ರತಿದಿನ ಎರಡು ಟ್ಯಾಂಕರ್ ಮೂಲಕ ಮೂರು ಬಾರಿ ನೀರು ಒದಗಿಸಬೇಕು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮಸ್ಥರಾದ ರಮೇಶ ನಿಂಬಣ್ಣವರ ಎಚ್ಚರಿಕೆ ನೀಡಿದರು.

ಉಮಚಗಿ ಗ್ರಾಮಕ್ಕೆ ಸದ್ಯ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಶಾಶ್ವತ ಪರಿಹಾರ ಒದಗಿಸಲಾಗುವುದು.
–ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾಧಿಕಾರಿ ಧಾರವಾಡ
ಟ್ಯಾಂಕರ್ ನೀರಿನ ಜತೆಗೆ ಉಮಚಗಿ ಗ್ರಾಮಕ್ಕೆ ಸಮೀಪದ ಕೋಳಿವಾಡ ಗ್ರಾಮದಿಂದ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೆ ಸರಿಪಡಿಸಲಾಗುವುದು .
–ಪ್ರಕಾಶ ನಾಶಿ, ತಹಶೀಲ್ದಾರ್ ಹುಬ್ಬಳ್ಳಿ ಗ್ರಾಮೀಣ
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಉಮಚಗಿ ಗ್ರಾಮದಲ್ಲಿ ಟ್ಯಾಂಕರ್ ನೀರಿಗಾಗಿ ಗ್ರಾಮಸ್ಥರು ಖಾಲಿ ಕೊಡಗಳನ್ನು ಸಾಲಾಗಿ ಇಟ್ಟಿರುವುದು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಉಮಚಗಿ ಗ್ರಾಮದಲ್ಲಿ ಟ್ಯಾಂಕರ್ ನೀರಿಗಾಗಿ ಗ್ರಾಮಸ್ಥರು ಖಾಲಿ ಕೊಡಗಳನ್ನು ಸಾಲಾಗಿ ಇಟ್ಟಿರುವುದು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT