ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಸೆನೆಟ್‌ ಸದಸ್ಯತ್ವಕ್ಕೆ ಆರೀಫ್‌ ರಾಜೀನಾಮೆ

Last Updated 16 ಜುಲೈ 2019, 19:37 IST
ಅಕ್ಷರ ಗಾತ್ರ

ಬೆಳಗಾವಿ:ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಕಾಡೆಮಿಕ್ ಸೆನೆಟ್‌ ಸದಸ್ಯರಾಗಿ ನೇಮಕವಾಗಿದ್ದ ಕೋಲಾರ ಜಿಲ್ಲೆ ಕೆಜಿಎಫ್‌ನ ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಸೈಯದ್ ಆರೀಫ್ ಅವರು, ಕೆಲವೇ ದಿನಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜೂನ್‌ 15ರಂದು ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದರು. ಜೂನ್‌ 20ರಂದು ರಾಜೀನಾಮೆ ನೀಡಿದ್ದಾರೆ. ವಿಟಿಯು ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಅವಧಿಯಲ್ಲಿ ಅವರ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿತ್ತು. ಈ ಕುರಿತು ವರದಿ ಪಡೆದಿದ್ದ ರಾಜ್ಯಪಾಲರು ಸೈಯದ್‌ ಸೇರಿದಂತೆ 6 ಮಂದಿಯನ್ನು 2016ರ ಜೂನ್ 18ರಂದು ಕಾರ್ಯಕಾರಿ ಮಂಡಳಿಯಿಂದ ವಜಾ ಮಾಡಿದ್ದರು.

‘ಸೈಯದ್‌ ಅವರ ವಿರುದ್ಧ ಆರೋಪ ಇರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಬಹಳ ವರ್ಷಗಳ ಹಿಂದೆಯೇ ನಡೆದಿರುವ ಪ್ರಕರಣವದು. ಪ್ರಾಂಶುಪಾಲರ ಕೋಟಾದಲ್ಲಿ ಹಿರಿತನ ಹಾಗೂ ವೃತ್ತಿಯಲ್ಲಿನ ಅನುಭವ ಪರಿಗಣಿಸಿ ಸೆನೆಟ್‌ ಸದಸ್ಯರ ನೇಮಕಕ್ಕೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೆ. ರಾಜ್ಯಪಾಲರು ಅನುಮೋದನೆಯನ್ನೂ ನೀಡಿದ್ದರು. ಆ ನಂತರವಷ್ಟೇ ಸೈಯದ್‌ ವಿರುದ್ಧ ಆರೋಪ ಇರುವುದು ಗಮನಕ್ಕೆ ಬಂದಿತು. ಈ ಕುರಿತು ಸೈಯದ್‌ ಜೊತೆಗೆ ಚರ್ಚಿಸಿದ್ದೆ. ವಿಶ್ವವಿದ್ಯಾಲಯಕ್ಕೆ ಮುಜುಗರ ಆಗುವುದು ಬೇಡ; ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹುದ್ದೆ ಬಿಟ್ಟುಕೊಟ್ಟರು’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದೊಮ್ಮೆ ರಾಜ್ಯಪಾಲರು ವಜಾ ಮಾಡಿದ್ದವರಿಗೆ ಮತ್ತೆ ಉನ್ನತ ಹುದ್ದೆಗೆ ಶಿಫಾರಸು ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಾಂಶುಪಾಲರಲ್ಲಿ 10 ಮಂದಿಗೆ ಸೆನೆಟ್‌ ಸದಸ್ಯರಾಗಿ ನೇಮಕಕ್ಕೆ ಶಿಫಾರಸು ಮಾಡಲು ಅವಕಾಶವಿದೆ. ಸೇವಾ ಜ್ಯೇಷ್ಠತೆಯನ್ನಷ್ಟೇ ಪರಿಗಣಿಸಿದ್ದೆ. ವಿಷಯ ತಿಳಿದ ಮೇಲೆ, ಅವರ ಸದಸ್ಯತ್ವ ರದ್ದುಪಡಿಸುವಂತೆ ಶಿಫಾರಸು ಮಾಡಲು ಯೋಜಿಸಿದ್ದೆ. ಅಷ್ಟರಲ್ಲಿ ಅವರೇ ರಾಜೀನಾಮೆ ಕೊಟ್ಟರು’ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಕಾಲೇಜೊಂದರ ಮಾನ್ಯತೆ ನವೀಕರಿಸಲು ₹ 25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಕಾರ್ಯಕಾರಿ ಮಂಡಳಿಯ 6 ಮಂದಿಯ ಸದಸ್ಯತ್ವವನ್ನು ರಾಜ್ಯಪಾಲರು ರದ್ದುಪಡಿಸಿದ್ದರು. ಅವರಲ್ಲಿ ಸೈಯದ್‌ ಕೂಡ ಒಬ್ಬರಾಗಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT