ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್ ಕ್ಷೇತ್ರದಿಂದಲೇ ಸ್ಪರ್ಧೆ: ಶೆಟ್ಟರ್

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂಬ ಉಹಾಪೋಹಗಳಿಗೆ ತೆರೆ
Last Updated 1 ನವೆಂಬರ್ 2022, 6:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ‌ ಮತ್ತೊಬ್ಬರನ್ನು ಕಣಕ್ಕಿಳಿಸುವ ಅವಶ್ಯಕತೆ ಇಲ್ಲ. ನಾನೇ ಅಲ್ಲಿಂದ ಸ್ಪರ್ಧಿಸುವೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಳೆದ ಚುನಾವಣೆ ಸಂದರ್ಭದಲ್ಲೂ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜ್ಯಪಾಲನಾಗಿ ಹೋಗುತ್ತೇನೆಂಬ ಮಾತುಗಳು ಕೇಳಿ ಬಂದಿದ್ದವು. ಇಂತಹ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಮುಂಬರುವ ಚುನಾವಣೆಯಲ್ಲಿ ನಾನೇ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ’ ಎಂದರು.

‘ಈಗಾಗಲೇ ಕೆಲ ಭ್ರಷ್ಟಾಚಾರಗಳ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೂಡ ನಡೆಯುತ್ತಿದೆ. ಗುತ್ತಿಗೆದಾರರ ಸಂಘದ ಶೇ 40 ಪರ್ಸೆಂಟ್ ಆರೋಪದ ಮೇಲೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ಮೇಲೆ ಆಧಾರರಹಿತವಾಗಿ ಆರೋಪ ಮಾಡುವುದು ಸರಿಯಲ್ಲ’ ಎಂದರು.

‘ಕೋವಿಡ್ ಸಲಕರಣೆ ಪೂರೈಕೆ ಮಾಡಿದ ಗುತ್ತಿಗೆದಾರ ದಯಾಮರಣಕ್ಕೆ ಮನವಿ ಮಾಡಿರುವುದಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರು ಗುತ್ತಿಗೆದಾರರನ್ನು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಉಡುಗೊರೆ ಪಡೆದವರೇ ದೂರು ಕೊಡಲಿ’

ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಉಡುಗೊರೆಯಾಗಿ ನಗದು ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ‘ಸಿ.ಎಂ ಕಚೇರಿಯಿಂದ ಉಡುಗೊರೆ ಕೊಟ್ಟಿರುವುದನ್ನು ಮುಖ್ಯಮಂತ್ರಿ ನಿರಾಕರಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾದ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೆ, ಹಿಂದೆ ಕಾಂಗ್ರೆಸ್‌ನವರೂ ಪತ್ರಕರ್ತರಿಗೆ ಉಡುಗೊರೆ ಕೊಟ್ಟಿದ್ದಾರೆ. ಬೇಕಿದ್ದರೆ ಉಡುಗೊರೆ ಪಡೆದವರೇ ಲೋಕಾಯುಕ್ತಕ್ಕೆ ದೂರು ಕೊಡಲಿ. ಸರ್ಕಾರ ತನಿಖೆ ನಡೆಸುತ್ತದೆ’ ಎಂದರು.

‘ಸರ್ಕಾರ ಈ ರೀತಿ ಕೊಡುವುದು ಸರಿಯೇ’ ಎಂಬ ಪ್ರಶ್ನೆಗೆ ‘ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ’ ಎಂದು ಜಾರಿಕೊಂಡರು.

ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

ಹುಬ್ಬಳ್ಳಿ: ಕೋವಿಡ್ ಪರಿಕರ ಪೂರೈಕೆಗೆ ಸಂಬಂಧಿಸಿದ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ದಯಾಮರಣ ಕೋರಿ ರಾಷ್ಟ್ರಪತಿಗೆ ಗುತ್ತಿಗೆದಾರ ಪತ್ರ ಬರೆದ ಘಟನೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ಕಾರ್ಯಕರ್ತರು ನಗರದ ಬಿಜೆಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕಚೇರಿಯಲ್ಲಿ ಎಸ್‌ಎಸ್‌ಕೆ ಸಮಾಜದ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಣೆ ನಡೆಯುತ್ತಿತ್ತು. ಶಾಸಕ ಶೆಟ್ಟರ್ ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ, ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಮಹಾನಗರ ಪಾಲಿಕೆ ಸದಸ್ಯ ಇಮ್ರಾನ್ ಯಲಿಗಾರ ಹಾಗೂ ಕೆಲ ಕಾರ್ಯಕರ್ತರು ಸ್ಥಳಕ್ಕೆ ಬಂದು ಪ್ರತಿಭಟಿಸಿದರು.

ರಾಜ್ಯದಲ್ಲಿರುವುದು ಶೇ 40 ಪರ್ಸೆಂಟ್ ಸರ್ಕಾರ ಎಂದು ಘೋಷಣೆಗಳನ್ನು ಕೂಗಿದರು‌. ಪರ್ಸೆಂಟೇಜ್ ಸರ್ಕಾರ ಎಂಬ ಪೋಸ್ಟರ್ ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯಾಗಿ ಬಿಜೆಪಿ‌ ಕಾರ್ಯಕರ್ತರು ಭಾರತ ಮಾತಾಕಿ ಜೈ, ಸಹಸ್ರಾರ್ಜುನ ಮಹಾರಾಜ್ ಕೀ ಜೈ ಎಂದು ಘೋಷಣೆ ಕೂಗಿ ಕುಣಿದರು.

ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿ, ಅಲ್ಲಿಂದ ಎಲ್ಲರನ್ನೂ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT