ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡಿಯುವ ನೀರು–ಕೆರೆಗಳ ಭರ್ತಿಗೆ ಆದ್ಯತೆ’

Last Updated 29 ಏಪ್ರಿಲ್ 2018, 10:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜನತಾದಳ, ಜೆಡಿಯುದಿಂದ ಶಾಸಕರಾಗಿ, ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ ಅಕ್ಕಿ, ಸದ್ಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಜನ ಬೇಸತ್ತಿದ್ದು, ಈ ಬಾರಿ ಜೆಡಿಎಸ್‌ಗೆ ಜನರ ಆಶೀರ್ವಾದ ಸಿಗಲಿದೆ ಎಂಬ ವಿಶ್ವಾಸ ಅವರದು. ಚುನಾವಣೆ ತಯಾರಿ ಬಗ್ಗೆ, ಕ್ಷೇತ್ರದ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಪ್ರಚಾರ ಕಾರ್ಯ ಹೇಗೆ ನಡೆದಿದೆ, ಜನರನ್ನು ಹೇಗೆ ತಲುಪುತ್ತಿದ್ದೀರಿ ?

ಪ್ರತಿ ಮನೆಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಮಾಡಿದ್ದೇನೆ. ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕುಮಾರ ಪರ್ವ ಕಾರ್ಯಕ್ರಮ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದಿಂದ ಬೇಸತ್ತಿರುವ ಜನ, ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ.

ಅಕ್ಕಿಯವರು ಚುನಾವಣೆ ಸಮಯದಲ್ಲಿ ಮಾತ್ರ ಕುಂದಗೋಳದಲ್ಲಿರುತ್ತಾರೆ. ನಂತರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ ಎಂದು ಜನ ಹೇಳುತ್ತಾರಲ್ಲ?

ನಾಲ್ಕು ವರ್ಷಗಳಿಂದ ಹಳ್ಳಿ–ಹಳ್ಳಿ ತಿರುಗುತ್ತಿದ್ದೇನೆ. ಯಾವಾಗಲೂ ಜನರೊಂದಿಗೆ ಇರುತ್ತೇನೆ. ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರೂ, ಬಹುಪಾಲು ಕ್ಷೇತ್ರದಲ್ಲಿ ಸುತ್ತಾಡುತ್ತಿರುತ್ತೇನೆ. ರಾತ್ರಿ 12 ಗಂಟೆಗೆ ಕರೆ ಮಾಡಿದರೂ ಕುಂದಗೋಳಕ್ಕೆ ಬರುತ್ತೇನೆ. ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪ ಸುಳ್ಳು.

ಐದು ವರ್ಷಗಳಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ, ಆಡಳಿತ ಪಕ್ಷದ ವಿರುದ್ಧ ಮಾತನಾಡಲಿಲ್ಲ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?

ಮಹದಾಯಿ ನದಿ ನೀರಿಗಾಗಿ ಪಾದಯಾತ್ರೆ ಮಾಡಿದ್ದೇನೆ. ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ಸರಿಯಾಗಿ ಪರಿಹಾರ ಸಿಗಲಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆ ಮಾಡಿದ್ದೇನೆ. ಕೇಂದ್ರ ಅಥವಾ ರಾಜ್ಯಸರ್ಕಾರದ ಯಾವುದೇ ಕಾರ್ಯಕ್ರಮಗಳು ಜನರಿಗೆ ತಲುಪಿಲ್ಲ. ಅಡುಗೆ ಅನಿಲ ಸಂಪರ್ಕವನ್ನು ಆಯಾ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳ ಸಂಬಂಧಿಕರಿಗೆ ಮಾತ್ರ ನೀಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಧ್ವನಿ ಎತ್ತಿದ್ದೇನೆ. ಕುಡಿಯುವ ನೀರಿಗಾಗಿ, ಹದಗೆಟ್ಟ ರಸ್ತೆಗಳಿಂದ ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ನಿರಂತರವಾಗಿ ಪ್ರತಿಭಟನೆ ಮಾಡಿದ್ದೇನೆ.

ತಮ್ಮ ಜಾತಿಯವರನ್ನು ಹೊರತು ಪಡಿಸಿ ಅಕ್ಕಿಯವರು ಬೇರೆಯವರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಎಂಬ ಅಸಮಾಧಾನದ ಬಗ್ಗೆ ಏನು ಹೇಳುತ್ತೀರಿ?

ಎಲ್ಲ ಸಮುದಾಯದವರೊಂದಿಗೆ ಬೆರೆಯದಿದ್ದರೆ ಎರಡು ಬಾರಿ ಶಾಸಕನಾಗಲು ಸಾಧ್ಯವಿರಲಿಲ್ಲ. ಜನಸಂಪರ್ಕ ಇರದಿದ್ದರೆ, ಕುಮಾರ ಪರ್ವ ಕಾರ್ಯಕ್ರಮಕ್ಕೆ 18 ಸಾವಿರ, ನಾನು, ನಾಮಪತ್ರ ಸಲ್ಲಿಸುವಾಗ 10 ಸಾವಿರ ಜನ ಸೇರುತ್ತಿರಲಿಲ್ಲ. ನನಗೆ ಸಿಗುತ್ತಿರುವ ಜನಬೆಂಬಲ ಸಹಿಸಲಾಗದೆ ಕೆಲವರು ಈ ರೀತಿ ಅಪಪ್ರಚಾರ ನಡೆಸುತ್ತಾರಷ್ಟೆ.

ಬಿಜೆಪಿಯಲ್ಲಿದ್ದಿದ್ದರೆ ಅಕ್ಕಿಯವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿದ್ದವು. ಜೆಡಿಎಸ್‌ನಲ್ಲಿ ನಿಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂದು ನಿಮ್ಮ ಅಭಿಮಾನಿಗಳು ಹೇಳುತ್ತಾರಲ್ಲ..

ನಾನು, ಶಾಸಕನಾದ ಸಂದರ್ಭದಲ್ಲಿಯೇ ಬಿಜೆಪಿಯಿಂದ ಟಿಕೆಟ್‌ ಕೇಳಿದ್ದೆ. ಆಗಲೇ ಅವರು ಅವಕಾಶ ನೀಡಲಿಲ್ಲ. ಈಗ ಕೊಡುತ್ತಿದ್ದರೇ ? ಅಲ್ಲದೆ, ಅಲ್ಲಿಯೇ ಆಕಾಂಕ್ಷಿಗಳು ತುಂಬಿ ತುಳುಕುತ್ತಿದ್ದಾರೆ. ಆ ಪಕ್ಷದಲ್ಲಿದ್ದಾಗ ನನಗೆ ಗೌರವ ಕೊಡಲಿಲ್ಲ. ಕಾರ್ಯಕರ್ತರ ಬೇಡಿಕೆಗೂ ಸ್ಪಂದಿಸಲಿಲ್ಲ. ಆದರೆ, ಜೆಡಿಎಸ್‌ ಹೆಚ್ಚು ಅವಕಾಶಗಳನ್ನು ನೀಡಿದೆ.

ನೀವೂ ಎರಡು ಬಾರಿ ಶಾಸಕರಾಗಿದ್ದಿರಿ. ಈಗ ಮೂಲಸೌಲಭ್ಯ ಕೊರತೆ ಇದೆ ಎಂದು ಹೇಳುತ್ತೀರಿ. ನೀವು ಮಾಡಿದ್ದೇನು?

ಯರಗುಪ್ಪಿ, ಕೊಡ್ಲಿವಾಡ, ಕೊಪ್ಪ, ರಾಮಾಪುರ ಮತ್ತಿತರ ಹಳ್ಳಿಗಳಿಗೆ ಹೋಗಿ ನೀವೇ ಕೇಳಿ. ಜನ ನನ್ನನ್ನು ಇನ್ನೂ ನೆನೆಸಿಕೊಳ್ಳುತ್ತಾರೆ. 1994ರಲ್ಲಿ ಬಹುತೇಕ ಹಳ್ಳಿಗಳಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿದ್ದೆ. ಆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಕುಡಿಯುವ ನೀರಿನ ಪೈಪ್‌ಗಳು ಒಡೆದುಹೋಗಿವೆ. ಅವುಗಳನ್ನು ದುರಸ್ತಿಗೊಳಿಸುವ ಕೆಲಸವನ್ನೂ ಈಗಿನ ಶಾಸಕರು ಮಾಡಿಲ್ಲ.

‘ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’

ಕುಂದಗೋಳದಲ್ಲಿ ಮೂಲಸೌಲಭ್ಯಗಳೇ ಇಲ್ಲ. ಕುಡಿಯುವ ನೀರಿನ ತೊಂದರೆ ತುಂಬಾ ಇದೆ. ರಸ್ತೆಗಳು ಹದಗೆಟ್ಟಿವೆ. ನೀರಿನ ಯೋಜನೆಗಾಗಿ ಪೈಪ್‌ಲೈನ್‌ ಹಾಕುವುದರಲ್ಲಿಯೂ ಭ್ರಷ್ಟಾಚಾರ ನಡೆದಿದೆ. ನಾನು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇನೆ. ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡುತ್ತೇನೆ.

ಅಲ್ಲದೆ, ಮಲಪ್ರಭಾ ನದಿಯಿಂದ ಕುಡಿಯುವ ನೀರು ತರುತ್ತೇನೆ. ನೀರಾವರಿ ಉದ್ದೇಶಕ್ಕೆ ಬಳಸಲಾಗುತ್ತಿರುವ ಕೆರೆಗಳನ್ನು ತುಂಬಿಸಲು ಶ್ರಮಿಸುತ್ತೇನೆ. ಅಲ್ಲದೆ, ರೈತಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕೆಂದರೆ ಜನ ನನ್ನನ್ನು ಆಶೀರ್ವದಿಸಬೇಕು. ಕೆಲವು ಹಳ್ಳಿಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ. ಆದರೆ, ಸರ್ಕಾರಿ ಆಸ್ಪತ್ರೆಯಿಲ್ಲ. ಆಸ್ಪತ್ರೆ ಮಂಜೂರು ಮಾಡಿಸಿಕೊಂಡು ಬರುತ್ತೇನೆ.

ಕೂಲಿ ಕಾರ್ಮಿಕರ ವಲಸೆ ತಡೆಗಟ್ಟೆ, ಪಟ್ಟಣದಲ್ಲಿಯೇ ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT