ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಗಾಗಿ ನಗರದತ್ತ ವಲಸೆ ಬಂದ ಅನ್ನದಾತ

Last Updated 20 ಏಪ್ರಿಲ್ 2017, 9:08 IST
ಅಕ್ಷರ ಗಾತ್ರ

ಧಾರವಾಡ: ಸತತ ಬರಗಾಲದಿಂದ ತತ್ತರಿಸಿರುವ ರೈತರು ಕೂಲಿ ಸಿಗದೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇಲ್ಲಿನ ಸಿಬಿಟಿ ಬಳಿಯ ಮಾರುಕಟ್ಟೆ, ಕುಲುಮೆ ಇತ್ಯಾದಿ ಕಡೆ ತಂಡೋಪತಂಡವಾಗಿ ಬರುವ ರೈತರು ವ್ಯಾಪಾರಸ್ಥರ ಬಳಿ ಕೆಲಸ ಬೇಡುವ ದೃಶ್ಯಗಳನ್ನು ನಿತ್ಯ ಕಾಣಬಹುದಾಗಿದೆ.ಹೋಟೆಲ್‌್, ಅಂಗಡಿ, ತರಕಾರಿ ಮಾರುಕಟ್ಟೆ ಮಾತ್ರವಲ್ಲದೆ, ಇನ್ನೂ ಕೆಲವರು ಬಡಾವಣೆಗಳಿಗೆ ತೆರಳಿ ಉದ್ಯಾನದ ಕೆಲಸ, ಕಟ್ಟಡ ಕಾಮಗಾರಿ ಕೆಲಸಗಳಿದ್ದರೆ ನೀಡುವಂತೆಯೂ ಅಂಗಲಾಚುತ್ತಿದ್ದಾರೆ.

‘ಹುಟ್ಟಿದಾಗಿನಿಂದ ಎಂದೂ ಇಂತಹ ಬರಗಾಲ ಕಂಡಿದ್ದಿಲ್ರಿ, ಆದರೆ, ಕಳೆದ ಮೂರು ವರ್ಷಗಳಿಂದ ಬರಗಾಲ ಬೀಳುತ್ತಿದ್ದರೂ ಈ ಬಾರಿಯಷ್ಟು ದೊಡ್ಡ ಪ್ರಮಾಣದ ಬರಕ್ಕೆ ರೈತರ ಜೀವನ ತುತ್ತಾಗಿರಲಿಲ್ಲ. ಸದ್ಯ ಗ್ರಾಮೀಣ ಜನರ ಬದುಕು ಕೇಳತೀರದಾಗಿದೆ. ಹಳ್ಳಿಗಳಲ್ಲಿ ಕೈಗೆ ಕೆಲಸವಿಲ್ಲ, ಹೊಟ್ಟಿಗೆ ಹಿಟ್ಟಿಲ್ಲ. ಈ ಹಿಂದೆ ಸ್ವಂತ ಕೃಷಿ ಭೂಮಿಯಲ್ಲಿ ಅಷ್ಟಕ್ಕಷ್ಟೆ ಬೆಳೆಗಳು ಬಂದಿವೆ. ಪ್ರತಿದಿನ ಪಟ್ಟಣಕ್ಕೆ ಬಂದು ದುಡಿದರೆ ಮಾತ್ರ ಕುಟುಂಬದ ಎಲ್ಲರಿಗೂ ಹೊಟ್ಟೆ ತುಂಬ ಊಟ. ಇಲ್ಲದಿದ್ದರ ಉಪವಾಸ ಮಲಗಬೇಕು’ ಎಂದು ತಾಲ್ಲೂಕಿನ ಹೊನ್ನಳ್ಳಿಯ ಸುರೇಶ ತಳವಾರ, ಶಿವಾನಂದ ಮೇಟಿ ಹಾಗೂ ಕಿತ್ತೂರಿನ ರುದ್ರಪ್ಪ ತಮ್ಮ ಅಳಲು ತೋಡಿಕೊಂಡರು.

‘ಸುಮಾರು 30ರಿಂದ 40 ಕೀ.ಮಿ ದೂರದ ಹಳ್ಳಿಗಳಿಂದ ಕೆಲಸಕ್ಕೆಂದು ಧಾರವಾಡಕ್ಕೆ ಬಂದರೆ ಒಂದು ದಿನ ಕೆಲಸ ಸಿಗುತ್ತದೆ. ಮತ್ತೊಂದು ದಿನ ಸಿಗುವುದಿಲ್ಲ. ಕೆಲಸ ಸಿಕ್ಕರೆ ಮಾತ್ರ ಊರಿಂದ ತಂದ ರೊಟ್ಟಿಯನ್ನು ಖುಷಿಯಿಂದ ತಿನ್ನೋದು. ಇಲ್ಲ ಅಂದ್ರೆ ಬುತ್ತಿಯೊಂದಿಗೆ ಮನೆಗೆ ಮರಳಬೇಕು. ಮುಂಜಾನೆಯೇ ಊರು ಬಿಟ್ಟ ನಾವು ಕೆಲಸ ಮಾಡಿ ರೊಕ್ಕ ತೆಗೆದುಕೊಂಡು ಹೋದರೆ ಮಾತ್ರ ಮನೆಯವರು ನಗುತ್ತ ಸ್ವಾಗತಿಸುತ್ತಾರೆ. ಇಲ್ಲದಿದ್ದರೆ ಹೆಂಡತಿಯೂ ಮುಖ ನೋಡಲು ಹಿಂಜರಿಯುವಂತಹ ಪರಿಸ್ಥಿತಿ ಎದುರಾಗಿದೆ’ ಎಂದು ತಮ್ಮ ಕೂಲಿಯ ಅನಿವಾರ್ಯತೆಯನ್ನು ಬಿಚ್ಚಿಟ್ಟರು.

'ತಾಲ್ಲೂಕಿನ ಕಲಕೇರಿ, ಅಮ್ಮಿನಭಾವಿ, ಮರೆವಾಡ, ಹೊನ್ನಳ್ಳಿ, ದುಮ್ಮವಾಡ, ಉಪ್ಪಿನಬೆಟಗೇರಿ, ಕಿತ್ತೂರು, ಮನಗುಂಡಿ, ಮನಸೂರ, ಸಲಕಿನಕೊಪ್ಪ, ಚಿಕ್ಕಮಲ್ಲಿಗವಾಡ, ಬಾಡ, ನಿಗದಿ, ಹೆಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಕೆಲಸಕ್ಕಾಗಿ ಪ್ರತಿದಿನ ಸುಮಾರು 450ರಿಂದ 500 ರೈತ ಕಾರ್ಮಿಕರು ಧಾರವಾಡಕ್ಕೆ ಬರುತ್ತೇವೆ. ಆದರೆ ಇವರಲ್ಲಿ ಅರ್ಧದಷ್ಟು ಜನರಿಗೆ ಕೆಲಸ ಸಿಗದೆ ಬರಿಗೈಯಲ್ಲಿ ವಾಪಸ್ಸಾಗಬೇಕಿದೆ. ಅಂಗಾಲಾಚಿದರೂ ಕೆಲಸ ಕೊಡಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ದಿನನಿತ್ಯ ಕೆಲಸಕ್ಕಾಗಿ ಪರದಾಟ ನಡೆಸಿದ್ದೇವೆ.ಕೂಲಿಗಾಗಿ ಧಾರವಾಡಕ್ಕೆ ಬರುವ ಎರಡರಷ್ಟು ಜನ ಹುಬ್ಬಳ್ಳಿಗೆ ಹೋಗುತ್ತಾರೆ’ ಎಂದು ಜಿ. ಬಸವನಕೊಪ್ಪದ ನಾಗರಾಜ ವಿವರಿಸಿದರು.

ಬಸ್‌ಚಾರ್ಜ್‌ಗೆ ಸಾಲದ ದಿನದ ಕೂಲಿ :
'ಊರಲ್ಲಿರುವ 4 ಕೂರಗಿ ಜಮೀನಿನಲ್ಲಿ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ದವಸ ಧಾನ್ಯಗಳು ಹೊಟ್ಟೆಗೆ ಆಸರೆಯಾಗಿದ್ದು, ದಿನದ ವ್ಯವಹಾರಕ್ಕೆ ಬೇಕಾಗುವ ಹಣಕ್ಕಾಗಿ ನಗರ ಪ್ರದೇಶದಲ್ಲಿ ದೊರೆಯುವ ಹಮಾಲಿ, ನಿರ್ಮಾಣ ಕಾಮಗಾರಿ ಗುತ್ತಿಗೆದಾರರ ಕೈ ಕೆಳಗಿನ ಕೆಲಸಕ್ಕೆ ಹೊಗುತ್ತಿದ್ದೇವೆ. ಆದರೆ, ದಿನಕ್ಕೆ ₹300 ರಿಂದ 400 ಕೂಲಿ ಸಿಗುತ್ತದೆ. ಅದನ್ನೂ ಮಾಲೀಕರು ಸರಿಯಾಗಿ ನೀಡುವುದಿಲ್ಲ. ಮಾಡಿದ ಕೆಲಸಕ್ಕೆ ಪಗಾರ ಕೇಳಿದರೆ ಕೆಲವರಂತೂ ಬರಗಾಲ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಅಲ್ಲದೇ ನಾವು ದುಡಿದ ಈ ಹಣ ದಿನಿತ್ಯದ ಬಸ್‌ಚಾರ್ಜ್‌ಗೆ ಸಾಲುತ್ತಿಲ್ಲ’ ಎಂದು ಹೆಸರು ಹೇಳಲಿಚ್ಚಿಸದ 76 ವರ್ಷದ ರೈತ ಕಾರ್ಮಿಕರೊಬ್ಬರು ತೀವ್ರ ಬೇಸರ ವ್ಯಕ್ತಪಡಿಸಿದರು.

‘ಬರಗಾಲದಲ್ಲಿ ಬಡವರಿಗೆ ಹಾಗೂ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳು ಸರ್ಕಾರಿ ಕಚೇರಿಗಳ ಅಲ್ಮೇರಾಗಳಿಗೆ ಸೀಮಿತವಾಗಿವೆ. ಜಿಲ್ಲಾಡಳಿತ ಸೇರಿದಂತೆ ಇತರೆ ಯಾವುದೇ ಇಲಾಖೆಯಿಂದ ಸಾರ್ವಜನಿಕರ ಸಮಸ್ಯೆ ನೀಗಿಸಲಾಗುತ್ತಿಲ್ಲ. ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಕಿತ್ತೂರಿನ ರುದ್ರಪ್ಪ ಒತ್ತಾಯಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT